Political News: ಡಿಲಿಮಿಟೇಷನ್‌ ದಂಗಲ್‌, ತಮಿಳುನಾಡಿಗೆ ಸಿದ್ದರಾಮಯ್ಯ‌ ಸಾಥ್!

Political News: ಕೇಂದ್ರ ಸರ್ಕಾರದ ಕ್ಷೇತ್ರ ಮರುವಿಂಗಡಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ತಮಿಳುನಾಡಿನ ಹೋರಾಟಕ್ಕೆ ರಾಜ್ಯ ಸರ್ಕಾರವು ಬೆಂಬಲ ಸೂಚಿಸಿದೆ. ಕಳೆದೆರಡು ದಿನಗಳ ಹಿಂದೆ ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿದಂತೆಯೇ ಅಲ್ಲಿನ ಸಚಿವರ ತಂಡ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದೆ. ಅಂತೆಯೇ ತಮಿಳುನಾಡಿನ ಅರಣ್ಯ ಸಚಿವ ಡಾ.ಕೆ.ಪೊನ್ನುಮುಡಿ ಮತ್ತು ರಾಜ್ಯಸಭಾ ಸದಸ್ಯ ಮೊಹಮದ್ ಅಬ್ದುಲ್ಲಾ ಇಸ್ಮಾಯಿಲ್ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಸ್ಟಾಲಿನ್‌ ಬರೆದಿರುವ ಪತ್ರವನ್ನು ಸಿದ್ದರಾಮಯ್ಯನವರಿಗೆ ಹಸ್ತಾಂತರಿಸಿದ್ದಾರೆ.

ಅಲ್ಲದೆ ಪ್ರಮುಖವಾಗಿ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನೀತಿ, ರಾಜ್ಯಗಳಿಗೆ ಕೇಂದ್ರದಿಂದ ಬರಬೇಕಾದ ತೆರಿಗೆ ಪಾಲು ಹಾಗೂ ಡಿಲಿಮಿಟೇಷನ್ ಮತ್ತಿತರ ಸಂಗತಿಗಳ ವಿಚಾರದಲ್ಲಿ ಧ್ವನಿ ಎತ್ತುವಂತೆ, ಪ್ರತಿಭಟನೆ ಜೊತೆಯಾಗಿ ನಿಲ್ಲುವಂತೆ ಸ್ಟಾಲಿನ್‌ ಪ್ರತಿನಿಧಿಗಳು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ. ಅಲ್ಲದೆ ಈ ಎಲ್ಲ ವಿಷಯಗಳನ್ನು ಗಂಭೀರವಾಗಿ ಪಡೆದು ಮುಂದಿನ ಹೋರಾಟದ ರೂಪು ರೇಷೆಗಳನ್ನು ಸಿದ್ದಪಡಿಸಲು ಮಾರ್ಚ್‌ 22ರಂದು ಸ್ಟಾಲಿನ್‌ ನೇತೃತ್ವದಲ್ಲಿ ಚೆನೈನಲ್ಲಿ ಸಭೆಯನ್ನು ಆಯೋಜಿಸಲಾಗಿದ್ದು, ಅದರಲ್ಲಿ ಭಾಗವಹಿಸುವಂತೆ ಅವರು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ ಖುದ್ದಾಗಿ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ದೂರವಾಣಿ ಮೂಲಕ ರಾಜ್ಯದ ಸಿಎಂ ಜೊತೆ ಇದೇ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ.‌ ಇನ್ನೂ ತಮಿಳುನಾಡು ಸರ್ಕಾರದ ನಿಯೋಗ ಮತ್ತು ಮುಖ್ಯಮಂತ್ರಿ ಸ್ಟಾಲಿನ್ ಅವರ ಜೊತೆಗೆ ಚರ್ಚಿಸುವ ವೇಳೆ ಸಿದ್ದರಾಮಯ್ಯ ಅವರು ದಕ್ಷಿಣ ರಾಜ್ಯಗಳ ಪ್ರತಿರೋಧಕ್ಕೆ ತಮ್ಮದೂ ಬೆಂಬಲ ಇದೆ ಎಂದು ಹೇಳಿದ್ದಾರೆ.

ಇನ್ನೂ ಕರ್ನಾಟಕದ ಹಿತಾಸಕ್ತಿಗೆ ಮಾರಕವಾಗುವ ಹಾಗೂ ಪ್ರಜಾಪ್ರಭುತ್ವವನ್ನು ಬಲಹೀನಗೊಳಿಸುವುದನ್ನು ನಾವು ವಿರೋಧಿಸುತ್ತೇವೆ. ಅಲ್ಲದೆ ಸಂವಿಧಾನ ಹಾಗೂ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾದ ಕೇಂದ್ರ ಸರ್ಕಾರದ ಯಾವುದೇ ನಿರ್ಧಾರವನ್ನು ಮುಲಾಜಿಲ್ಲದೆ ಖಂಡಿಸುತ್ತೇವೆ. ಅಲ್ಲದೆ ಈ ವಿಚಾರದಲ್ಲಿ ಹೋರಾಟಕ್ಕೂ ಬೆಂಬಲವನ್ನು ನೀಡುತ್ತೇನೆ ಎಂದು ತಮಿಳುನಾಡಿನ ನಾಯಕರಿಗೆ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಒಟ್ನಲ್ಲಿ.. ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಾ, ಬಹಿರಂಗವಾಗಿಯೇ ಮೋದಿ ಸರ್ಕಾರದ ಮೇಲೆ ಕೆಂಡ ಕಾರುತ್ತಿರುವ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ತಾವಂದುಕೊಂಡಂತೆ ಬಿಜೆಪಿಯೇತರ ಸರ್ಕಾರಗಳಿಗೆ ಈ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ಗಾಳ ಹಾಕುತ್ತಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ತೊಡೆ ತಟ್ಟಿದ್ದಾರೆ. ಅದರ ಮೊದಲ ಭಾಗವಾಗಿಯೇ ಇದೀಗ ಸಿದ್ದರಾಮಯ್ಯ ಅವರನ್ನು ಹೋರಾಟದಲ್ಲಿ ಭಾಗವಹಿಸುವಂತೆ ಮನವಿ ಮಾಡಿದ್ದಲ್ಲದೆ, ಸಭೆಗೂ ಆಹ್ವಾನಿಸಿದ್ದಾರೆ. ಅದೇನೆ ಇರಲಿ.. ಈ ತಮಿಳುನಾಡು ಕಾವೇರಿ ಜಲವಿವಾದದಲ್ಲಿ ಕರ್ನಾಟಕದೊಂದಿಗೆ ಮೇಲಿಂದ ಮೇಲೆ ಜಗಳಕ್ಕಿಳಿಯುತ್ತಲೇ ಇದೆ, ಅದರಲ್ಲೂ ಬೇಸಿಗೆ ಬಂತೆಂದರೆ ಸಾಕು ಈ ವಿವಾದ ಇನ್ನಷ್ಟು ತೀವ್ರವಾಗುತ್ತದೆ. ಪರಿಸ್ಥಿತಿ ಹೀಗಿರುವಾಗ ಇದೇ ತಮಿಳುನಾಡು ಕರೆದ ತಕ್ಷಣ ಸಿದ್ದರಾಮಯ್ಯ ಹೋರಾಟಕ್ಕೆ ಹೋಗುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

About The Author