Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ನಕ್ಸಲರ ಶರಣಾಗತಿ ಇಷ್ಟೊಂದು ವೈಭವೀಕರಣ ಅವಶ್ಯಕತೆ ಇರಲಿಲ್ಲ. ಯಾವುದೇ ಸರ್ಕಾರ ಇದ್ದರೂ ಇದಕ್ಕೊಂದು ಕಾನೂನಾತ್ಮಕ ಪ್ರಕ್ರಿಯೆ ಇದ್ದೇ ಇದೆ. ಆದರೆ ಈ ಸರ್ಕಾರ ನಕ್ಸಲ್ ರ ಶರಣಾಗತಿಯಲ್ಲೂ ಪ್ರಚಾರಕ್ಕೆ ಹೊರಟಿದೆ. ನಕ್ಸಲ್ ರು ಶರಣಾಗತಿ ಅಗುವ ವೇಳೆ ಅನುಸರಿಸಿದ ಕ್ರಮ ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಚಿಕ್ಕಮಗಳೂರು ಡಿಸಿ ಮುಂದೆ ಶರಣಾಗತಿ ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳು ತಮ್ಮ ಮುಂದೆ ಶರಣಾಗತಿಗೆ ಮುಂದಾದರು. ಇದು ಸರಿಯಾದ ಕ್ರಮವಲ್ಲ. ನಕ್ಸಲ್ ರ ಶಸ್ತ್ರಾಸ್ತ್ರಗಳನ್ನ ಸಹ ಶರಣಾಗತಿ ಮಾಡಿಲ್ಲ. ಅವು ಎಲ್ಲಿ ಇವೆ ಅಂತಾ ಇದುವರೆಗೂ ತಿಳಿದಿಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇನ್ನು ಪ್ರಧಾನಿ ಮೋದಿ ಭೇಟಿ ಬಗ್ಗೆ ಮಾತನಾಡಿರುವ ಶೆಟ್ಟರ್, ದೆಹಲಿಯಲ್ಲಿ ಪ್ರಧಾನಿ ಮೋದಿ ಭೇಟಿಯಲ್ಲಿ ವಿಶೇಷತೆ ಇಲ್ಲ. ಬೆಳಗಾವಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಲ್ಲಿ ಭೇಟಿಯಾಗಿದ್ದೆ. ಪಕ್ಷದ ಕೆಲ ಆಂತರಿಕ ವಿಚಾರಗಳನ್ನೂ ಚರ್ಚಿಸಿದ್ದೇನೆ. ಸಂಸತ್ ಸದಸ್ಯರಾಗಿ ಗೆದ್ದಮೇಲೆ ನಾನು ಮೋದಿ ಅವರನ್ನು ಭೇಟಿಯಾಗಿರಲಿಲ್ಲ. ಕೃತಜ್ಞತೆ ತಿಳಿಸಲೆಂದು ಮೋದಿ ಅವರನ್ನು ಭೇಟಿಯಾಗಿದ್ದೆ. ಐತಿಹಾಸಿಕ ಕ್ಷೇತ್ರಗಳಿಗೆ ಸಂಬಂಧಿಸಿದ ಪುಸ್ತಕವನ್ನು ಅವರಿಗೆ ಕೊಟ್ಟೆ. ಮನೆಯ ಹಿರಿಯ ಸದಸ್ಯರ ರೀತಿಯಲ್ಲಿ ನನ್ನನ್ನು ಆತ್ಮೀಯತೆಯಿಂದ ಕಂಡರು.
ಬೆಳಗಾವಿ ಕ್ಷೇತ್ರದ ಅಭಿವೃದ್ಧಿಗಾಗಿ ಹಲವು ಮನವಿಗಳನ್ನು ಕೊಟ್ಟಿದ್ದೇನೆ. ಬೆಂಗಳೂರು ಧಾರವಾಡ ವಂದೇ ಭಾರತ ರೈಲನ್ನು ಬೆಳಗಾವಿ ವರೆಗೂ ವಿಸ್ತರಿಸಲು ಕೇಳಿದ್ದೇನೆ. ಸವದತ್ತಿ ಎಲ್ಲಮ್ಮ ಕ್ಷೇತ್ರದ ಅಭಿವೃದ್ಧಿಗೆ ವಿಶೇಷ ಅನುದಾನ ಕೊಟ್ಟಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದೇನೆ. ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಚರ್ಚಿಸಲಾಗಿದೆ. ಅಲ್ಲಿ ನಡೆಸಿದ ಎಲ್ಲ ಚರ್ಚೆಗಳ ಬಗ್ಗೆ ಬಹಿರಂಗವಾಗಿ ಹೇಳಲು ಆಗಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.