Political News: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ತಮ್ಮ 85ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಬಳಲಿ, ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ.
ಇಂದು ಹಾಸನದ ಹರದನಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಪತ್ನಿಯ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ. ಪಡುವಲಹಿಪ್ಪೆಯಲ್ಲಿ ಅಂತ್ಯಕ್ರಿಯೆ ಮಾಡುವುದು ಇಚ್ಛೆಯಾಗಿತ್ತು. ಆದರೆ ಹರದನಹಳ್ಳಿಯಲ್ಲಿ ಅಂತ್ಯಕ್ರಿಯೆ ಮಾಡೋಣವೆಂದು ಮಕ್ಕಳು ನಿರ್ಧರಿಸಿದರು. ಹಾಗಾಗಿ ಅವರ ತೀರ್ಮಾನದಂತೆ ಇಲ್ಲಿ ಅಂತ್ಯಕ್ರಿಯೆ ಮಾಡಲಾಗ್ತಿದೆ ಎಂದು ದೇವೇಗೌಡರು ಹೇಳಿದ್ದಾರೆ.
ಅಲ್ಲದೇ, ರಂಗನಾಥನ ಕೃಪೆಯಿಂದ ನಾನು ಪ್ರಧಾನಿಯಾದೆ. ನಾನು ಪ್ರಧಾನಿಯಾಗಲು ನನ್ನನ್ನು ಬೆಂಬಲಿಸಿದ್ದೇ ನನ್ನ ಪತ್ನಿ ಚೆನ್ನಮ್ಮ. ನಾನು ಕಣ್ಣೀರು ಹಾಕುವುದಿಲ್ಲ. ಏಕೆಂದರೆ ನನಗೆ ಶಕ್ತಿ ತುಂಬಿದ್ದೇ ನನ್ನ ಪತ್ನಿ. ಅಂತ್ಯಸಂಸ್ಕಾರದ ವೇಳೆ ಮಳೆ ಬರುತ್ತದೆ ಎಂದು ಹೇಳಿದ್ದರು. ಆದರೆ ನಾನು ಸಮಸ್ಯೆ ಆಗುವುದಿಲ್ಲ ಎಂದಿದ್ದೇ. ರಂಗನಾಥ ಸ್ವಾಮಿ ಕೃಪೆಯಿಂದ ಯಾವ ಸಮಸ್ಯೆಯೂ ಆಗಲಿಲ್ಲವೆಂದು ದೇವೇಗೌಡರು ಭಾವುಕರಾಗಿದ್ದಾರೆ.
ನನ್ನ ಪ್ರತೀ ಹೆಜ್ಜೆಯಲ್ಲೂ ಚೆನ್ನಮ್ಮರ ಬೆಂಬಲವಿತ್ತು. ನಾನು ಆಕೆಯನ್ನು ಅನ್ನಪೂರ್ಣೆ ಎಂದು ಉತ್ಪ್ರೇಕ್ಷೆಯಿಂದ ಹೇಳುವುದಿಲ್ಲ. ಆಕೆಯನ್ನು ನಾನು ಸ್ವಾಮಿಯ ಸನ್ನಿಧಾನಕ್ಕೆ ಕಳುಹಿಸುತ್ತೇನೆ. ಆಕೆಯ ಬೆಂಬಲವನ್ನು ವಿಶ್ಲೇಷಿಸುವುದು ಕಷ್ಟ ಎಂದು ದೇವೇಗೌಡರು ಭಾವುಕರಾಗಿದ್ದಾರೆ.




