Political News : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ಮಧುಬಲೆ : ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಹನಿಟ್ರ್ಯಾಪ್‌ ಕೇಸ್

Political News : ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿರುವ ಹನಿಟ್ರ್ಯಾಪ್‌ ಪ್ರಕರಣವು ಇದೀಗ ರಾಷ್ಟ್ರ ರಾಜಧಾನಿ ದೆಹಲಿಯ ಅಂಗಳಕ್ಕೆ ತಲುಪಿದ್ದು, ಈ ಕುರಿತು ಸುಪ್ರೀಂಕೋರ್ಟ್‌ನಲ್ಲಿ ಪಿಐಎಲ್‌ ದಾಖಲಾಗಿದೆ. ಅಲ್ಲದೆ ಇಡೀ ರಾಜಕೀಯ ವ್ಯವಸ್ಥೆಗೆ ಕಪ್ಪು ಚುಕ್ಕೆ ತರುವಂತಹ ವಿಚಾರ ಇದಾಗಿರುವುದರಿಂದ ಈ ಬಗ್ಗೆ ಸತ್ಯಾಸತ್ಯತೆಯ ತನಿಖೆಯಾಗಬೇಕು ಎಂಬ ಉದ್ದೇಶದಿಂದ ಸಾರ್ವಜನಿಕ ಹಿತಾಸಕ್ತಿಯ ಹಿನ್ನೆಲೆ ಈ ಅರ್ಜಿ ಸಲ್ಲಿಸಲಾಗಿದೆ. ಇನ್ನೂ ಇದೊಂದು ಗಂಭೀರ ತೆರನಾದ ಪ್ರಕರಣವಾಗಿದ್ದು, ಕೂಡಲೇ ವಿಚಾರಣೆ ನಡೆಸುವಂತೆ ಮಖ್ಯ ನಾಯಮೂರ್ತಿಗಳಿಗೆ ಅರ್ಜಿದಾರರು ಕೋರಿದ್ದಾರೆ. ಪ್ರಮುಖವಾಗಿ ಈ ಕೇಸ್‌ನಲ್ಲಿ ನ್ಯಾಯಮೂರ್ತಿಗಳ ಹೆಸರೂ ಇರುವುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಂದಹಾಗೆ ಕರ್ನಾಟಕದಲ್ಲಿನ ಹನಿಟ್ರ್ಯಾಪ್ ಹಗರಣಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು ಮತ್ತು ಶಾಸಕರು, ರಾಜಕೀಯ ಮುಖಂಡರು ಹಾಗೂ ನ್ಯಾಯಮೂರ್ತಿಗಳು ಸೇರಿದಂತೆ ಒಟ್ಟು 48 ಜನರನ್ನು ಸಿಲುಕಿಸಿರುವ ವಿಚಾರ ಬಯಲಾಗಿದೆ. ಅಲ್ಲದೆ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ಪೀಠದ ಮುಂದೆ ಇಡಲಾಗಿದೆ. ಇನ್ನೂ ಈ ವಿಷಯವನ್ನು ಇವತ್ತು ಅಥವಾ ನಾಳೆ ವಿಚಾರಣೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

ಸದನದಲ್ಲಿ ರಾಜಣ್ಣ ಸಿಡಿಸಿದ್ದರು ಬಾಂಬ್.!‌

ಇನ್ನೂ ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಈ ಹನಿಟ್ರ್ಯಾಪ್‌ ಹಗರಣಕ್ಕೆ ಸಂಬಂಧಿಸಿದ್ದಂತೆ ಕಳೆದ ಅಧಿವೇಶನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸದನದಲ್ಲಿಯೇ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ ಇದಕ್ಕೆ ಪೂರಕವಾಗಿ ಅಲ್ಲೇ ಇದ್ದ ಸಚಿವ ಕೆ.ಎನ್.ರಾಜಣ್ಣ ಅವರು ನನ್ನ ಮೇಲೆ ಹನಿಟ್ರ್ಯಾಪ್‌ ಮಾಡುವ ಯತ್ನಗಳು ನಡೆದಿವೆ ಎಂದು ಆರೋಪಿಸಿದ್ದರು.‌ ಆದರೆ ಅದನ್ನು ಅರಿತುಕೊಂಡ ನಾನು ಅದಕ್ಕೆ ಆಸ್ಪದ ಕೊಟ್ಟಿರಲಿಲ್ಲ ಎಂದು ಹೇಳುವ ಮೂಲಕ ರಾಜಕಾರಣದಲ್ಲಿಯೇ ರಾಜಣ್ಣ ಸಂಚಲನ ಸೃಷ್ಟಿಸಿದ್ದರು. ಇಷ್ಟೇ ಅಲ್ಲದೆ ದೇಶದ ರಾಜಕಾರಣಿಗಳು ಹಾಗೂ ನ್ಯಾಯಮೂರ್ತಿಗಳು ಸೇರಿದಂತೆ 48 ಜನರಿಗೆ ಈ ರೀತಿಯಾಗಿದೆ. ಇದರ ಬಗ್ಗೆ ತನಿಖೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅವರಿಗೆ ದೂರು ನೀಡುತ್ತೇನೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸುವೆ ಎಂದಿದ್ದರು. ಅಲ್ಲದೆ ಇದೇ ವಿಚಾರವನ್ನು ಮುಂದಿಟ್ಟುಕೊಂಡು ಸದನದ ಬಾವಿಗಿಳಿದು ಬಿಜೆಪಿ ನಾಯಕರು ಈ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದಿರುವ ಹನಿಟ್ರ್ಯಾಪ್ ಪ್ರಕರಣದ ಕುರಿತು ಸೂಕ್ತ ನ್ಯಾಯಾಂಗ ತನಿಖೆಯಾಗಬೇಕೆಂದು ಒತ್ತಾಯಿಸಿದ್ದರು.

ಅಂದಹಾಗೆ ರಾಜಣ್ಣ ಮಾತಿಗೆ ಸದನದಲ್ಲಿಯೇ ಪ್ರತಿಕ್ರಿಯೆ ನೀಡಿದ್ದ ಪರಮೇಶ್ವರ್‌, ರಾಜಣ್ಣ ದೂರು ನೀಡಿದರೆ ಉನತ ಮಟ್ಟದ ತನಿಖೆ ನಡೆಸುವುದಾಗಿ ತಿಳಿಸಿದ್ದರು. ಅಲ್ಲದೆ ಇದೇ ವಿಚಾರವಾಗಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ , ಆರಗ ಜ್ಞಾನೇಂದ್ರ , ಶಾಸಕ ಸುನೀಲ್ ಕುಮಾರ್, ಸಚಿವರಾದ ಕೆ ಎನ್ ರಾಜಣ್ಣ ಅವರು ಹನಿ ಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿದ್ದು, ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರಿಸಿದ್ದಾರೆ. ಅಲ್ಲದೆ ಈ ಪ್ರಕರಣದಲ್ಲಿ ಯಾರೇ ಆಗಿದ್ದರೂ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿಯಾಗಿದೆ. ಇನ್ನೂ ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿ ಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪಾಗುತ್ತದೆ. ಅಲ್ಲದೆ ಇದರಲ್ಲಿ ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವನ್ನು ಆಗ ತಿಳಿಸಿದ್ದರು.

ಮಂತ್ರಿಗೆ ಹನಿ ಟ್ರ್ಯಾಪ್‌ ಆಗಿದೆ ಎಂದಿದ್ದ ಸತೀಶ್..‌

ಇನ್ನೂ ಇದಕ್ಕೂ ಮುನ್ನ ಲೋಕೊಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹನಿಟ್ರ್ಯಾಪ್‌ ಕುರಿತು ಬಾಂಬ್‌ ಸಿಡಿಸಿದ್ದರು. ಅಲ್ಲದೆ ಒಬ್ಬ ಸಚಿವರ ವಿರುದ್ಧ ಎರಡು ಸಲ ಟ್ರ್ಯಾಪ್ ಮಾಡುವ ಪ್ರಯತ್ನ ನಡೆದಿದೆ. ಆ ಮಂತ್ರಿಯನ್ನು ರಾಜಕೀಯವಾಗಿ ಹಿಮ್ಮೆಟ್ಟಿಸುವ ಪ್ರಯತ್ನದ ಭಾಗವಾಗಿ ತೇಜೋವಧೆ ಮಾಡುವೆ ಕೆಲಸ ನಡೆದಿರಬಹುದು. ಇನ್ನೂ ಎರಡನೇ ಸಲ ಟ್ರ್ಯಾಪ್ ಮಾಡಲು ಬಂದವರ ಜೊತೆ ಮಂತ್ರಿಯ ವಾಗ್ವಾದವೂ ನಡೆದಿತ್ತು. ಮುಂಜಾಗ್ರತಾ ಕ್ರಮವಾಗಿ ಟಾರ್ಗೆಟ್ ಆಗಿರುವ ಮಂತ್ರಿ ದೂರು ನೀಡಿದರೆ ಎಲ್ಲವೂ ತಿಳಿಯಲಿದೆ ಎನ್ನುವ ಮೂಲಕ ತಮ್ಮ ಬಳಿ ಆಗ ಇದ್ದ ಮಾಹಿತಿಯನ್ನು ಆಗ ಸಚಿವ ಸತೀಶ್ ಸ್ಪೋಟಿಸಿದ್ದರು.

ಒಟ್ನಲ್ಲಿ.. ರಾಜಕೀಯದ ಇಂದಿನ ವ್ಯವಸ್ಥೆಯು ನಿಜಕ್ಕೂ ತೀವ್ರ ಶೊಚನೀಯ ಸ್ಥಿತಿಗೆ ತಲುಪುತ್ತಿರುವುದು ಆತಂಕಕಾರಿಯಾಗಿದೆ. ಪ್ರಜಾಪ್ರಭುತ್ವದಲ್ಲಿನ ಮೊದಲನೇ ಸ್ಥಂಭ ಶಾಸಕಾಂಗದಲ್ಲಿ ಇರಬಹುದಾದ ಮೌಲ್ಯಗಳೇ ಕುಸಿಯುತ್ತಿರುವುದು ಈ ರೀತಿಯ ಘಟನೆಗಳಿಗೆ ಕಾರಣವಾಗಿದೆ. ಒಂದು ದೇಶದ ಅಥವಾ ರಾಜ್ಯದ ಆಡಳಿತ ಸುಗಮವಾಗಿ ಸಾಗಲು ಅಲ್ಲಿನ ಶಾಸಕಾಂಗ ಅಂದರೆ ಜನಪ್ರತಿನಿಧಿಗಳ ಭಾಗಿದಾರಿಕೆಯು ಅತ್ಯಂತ ಮುಖ್ಯವಾಗಿದೆ. ರಾಜಕಾರಣದಲ್ಲಿನ ಭಿನ್ಯಾಭಿಪ್ರಾಯಗಳು ಏನೇ ಇದ್ದರೂ ಸಹ ತಮಗಿರುವ ಅಧಿಕಾರದಿಂದ ಪಕ್ಷಾತೀತವಾಗಿ ಅಭಿವೃದ್ದಿ, ಬೆಳವಣಿಗೆಗೆ ಶ್ರಮಿಸಬೇಕಾಗಿರುವುದು ಅದರ ಜವಾಬ್ದಾರಿಯಾಗಿರುತ್ತದೆ.

ಆದರೆ ಇತ್ತೀಚಿನ ದಿನಗಳಲ್ಲಿ ಇದಕ್ಕೆ ಧಕೆ ತರುವಂತಹ ಘಟನೆಗಳು ನಡೆಯುತ್ತಿರುವುದು ಕಳವಳಕಾರಿಯಾಗಿದೆ. ವಿರೋಧಿಯನ್ನು ಎದುರಿಸಲು ಪ್ರಜಾತಂತ್ರ ವ್ಯವಸ್ಥೆಯಲ್ಲಿ ತನ್ನದೇ ಆದ ಮುಕ್ತವಾದ ಮಾರ್ಗಗಳಿವೆ. ತಮ್ಮ ಕೆಲಸ, ಸಾಮರ್ಥ್ಯದಿಂದ ಜನಮನ್ನಣೆ ಪಡೆಯುವುದು, ಜನರ ನಂಬಿಕೆ ಗಳಿಸುವುದು ಸೇರಿದಂತೆ ಅಭಿವೃದ್ದಿಯ ದೃಷ್ಟಿಕೋನದಿಂದ ಚುನಾವಣೆಗಳಲ್ಲಿ ಸ್ಪರ್ಧಿಸಿ ಅಧಿಕಾರ ಹಿಡಿಯುವುದು. ಆದರೆ ಇದನ್ನೆಲ್ಲ ಬಿಟ್ಟು ಅಸಹ್ಯದಿಂದ ವೈರಿಯ ವಿರುದ್ಧ ಉದ್ದೇಶ ಪೂರ್ವಕವಾಗಿಯೇ ಷಡ್ಯಂತ್ರಗಳನ್ನು ರಚಿಸಿ, ಸಮಾಜಕ್ಕೆ ಮಾರಕವಾಗುವಂತಹ ಈ ರೀತಿಯ ಚಟುವಟಿಕೆಗಳಿಂದ ಕುರ್ಚಿ ಆಸೆ ಈಡೇರಿಸಿಕೊಳ್ಳಲು ಮುಂದಾಗುತ್ತಿರುವುದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ.

ಅದೇನೆ ಇರಲಿ.. ಯಾವುದು ಆಗಬಾರದಿತ್ತು, ಯಾವುದು ನಡೆದು ರಾಜ್ಯದ ಹಾಗೂ ರಾಜಕಾರಣಿಗಳ ಘನತೆಗೆ ಧಕ್ಕೆ ಬಂದಂತಾಗಿದೆಯೋ ಅದರ ಬಗ್ಗೆ ಸೂಕ್ತ ತನಿಖೆಯಾಗಬೇಕಿರುವುದು ಕೂಡ ಅಷ್ಟೇ ಸತ್ಯವಾಗಿದೆ. ಅಲ್ಲದೆ ಈ ಹೀನ ಕೃತ್ಯದ ಹಿಂದೆ ಇರುವ ಕೈಗಳ ಪತ್ತೆಯಾಗುವ ಮೂಲಕ ಇಂಥ ಕೃತ್ಯಗಳನ್ನು ಪೋಷಿಸುವ ಮಹಾನ್‌ ನಾಯಕರ ಮೇಲೂ ಕ್ರಮವಾಗಬೇಕಿದೆ. ಅಂದಾಗ ಮಾತ್ರ ಈ ರೀತಿಯ ಕೃತ್ಯಗಳು ನಿಲ್ಲಬಹುದು ಹಾಗೂ ಹಿರಿಯ ರಾಜಕಾರಣಿಗಳು ಈ ಆತಂಕದಿಂದ ಹೊರಬರಬಹುದು. ಆದರೆ ಅಂತಿಮವಾಗಿ ಈ ಪ್ರಕರಣ ದೆಹಲಿಗೆ ಲಗ್ಗೆ ಇಟ್ಟಿದ್ದು, ಎಲ್ಲರ ಚಿತ್ತ ಸುಪ್ರೀಂಕೋರ್ಟ್‌ನತ್ತ ನೆಟ್ಟಿದೆ. ಅಲ್ಲಿಂದ ಈ ಮಧುಬಲೆಯ ಕುರಿತು ಯಾವ ಸಂದೇಶ ಹೊರಬರಲಿದೆ ಅನ್ನೋದು ಸದ್ಯ ಕುತೂಹಲ ಮೂಡಿಸಿದೆ.

About The Author