Political News: ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕಾಂಗ್ರೆಸ್ ಆಡಳಿತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬ್ರ್ಯಾಂಡ್ ಬೆಂಗಳೂರು ಮಾಡುವ ಮುನ್ನ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಹರಿಸಿ ಎಂದಿದ್ದಾರೆ.
ಬ್ರ್ಯಾಂಡ್ ಬೆಂಗಳೂರು ಎನ್ನುವುದು ಕೇವಲ ಜಾಹೀರಾತಿಗೆ ಸೀಮಿತವಾಗಿದೆ. ಒಂದೆಡೆ ಮಳೆ ಬಂದರೆ ರಸ್ತೆಗಳಲ್ಲಿ ಪ್ರವಾಹ, ಮತ್ತೊಂದೆಡೆ ಗುಂಡಿಗಳ ಹಾವಳಿ, ಇನ್ನೊಂದೆಡೆ ಜೀವಹಾನಿ. ಈಗ ಬೆಂಗಳೂರಿನಲ್ಲಿ ಕಸ ವಿಲೇವಾರಿ ಕೂಡ ಸ್ಥಗಿತಗೊಳ್ಳುವ ಎಚ್ಚರಿಕೆ. ಗುತ್ತಿಗೆದಾರರ ಸಂಘವೇ ಜಿಬಿಎ ಆಯುಕ್ತರಿಗೆ ಪತ್ರ ಬರೆದು ಸೇವೆ ನಿಲ್ಲಿಸುವ ಎಚ್ಚರಿಕೆ ನೀಡಿರುವುದು ಕಾಂಗ್ರೆಸ್ ಸರ್ಕಾರದ ದರಿದ್ರ ಆಡಳಿತದ ಮತ್ತೊಂದು ಕೆಟ್ಟ ಬೆಳವಣಿಗೆ ಎಂದು ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾವಿ ಸಿಎಂ ಡಿ.ಕೆ.ಶಿವಕುಮಾರ್ ಅವರು “ಬ್ರ್ಯಾಂಡ್ ಬೆಂಗಳೂರು” ಎಂದು ದೊಡ್ಡ ಘೋಷಣೆ ಮಾಡುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಬೆಂಗಳೂರು ಎದುರಿಸುತ್ತಿರುವ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಕಸದ ಸಮಸ್ಯೆ, ಹದಗೆಟ್ಟ ರಸ್ತೆಗಳು, ಸಂಚಾರ ದಟ್ಟಣೆ, ಮಳೆ ನೀರು ನಿರ್ವಹಣೆಯ ವೈಫಲ್ಯ, ಕುಡಿಯುವ ನೀರಿನ ಸಮಸ್ಯೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಜನರು ತತ್ತರಿಸಿದ್ದಾರೆ.
ರಾಜ್ಯದ ಆರ್ಥಿಕ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ಅಭಿವೃದ್ಧಿಗೆ ಆದ್ಯತೆ ನೀಡುವ ಬದಲು ಕಾಂಗ್ರೆಸ್ ಸರ್ಕಾರ ಅಧಿಕಾರದ ಹಪಾಹಪಿಯಲ್ಲಿ ತೊಡಗಿದೆ. ಮಾತಲ್ಲಿ ಮಾತ್ರ “ಬ್ರ್ಯಾಂಡ್ ಬೆಂಗಳೂರು”, ಆದರೆ ಜನರ ಅನುಭವದಲ್ಲಿ “ದುರಾವಸ್ಥೆಯ ಬೆಂಗಳೂರು” ಆಗಿದೆ. ಬೆಂಗಳೂರು ನಗರದ ಸಮಸ್ಯೆಗಳಿಗೆ ತಕ್ಷಣ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಬೇಕು. ಜನರ ಸಹನೆಗೂ ಒಂದು ಮಿತಿ ಇದೆ ಎಂದು ಕಾಂಗ್ರೆಸ್ ಆಡಳಿತದ ವಿರುದ್ಧ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




