Political News:ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ?: ಕಾಂಗ್ರೆಸ್‌ಗೆ ವಿಜಯೇಂದ್ರ ಪ್ರಶ್ನೆ

Political News: ತನ್ನ ಚಿತ್ರವಿರುವ ಬ್ಯಾನರ್‌ನ್ನು ತೆರವು ಮಾಡಿದ್ದಕ್ಕಾಗಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಪೌರಾಯುಕ್ತೆ ಜತೆ ಕೋಪದಿಂದ ಮಾತನಾಡಿದ್ದು, ಆಡಿಯೋ ವೈರಲ್ ಆಗಿದೆ.

ಅಪಘಾತ ಸಂಭವಿಸಿರುವ ಕಾರಣಕ್ಕಾಗಿ ಬ್ಯಾನರ್ ತೆಗೆಯಲಾಗಿತ್ತು. ಈ ಬಗ್ಗೆ ದಬಾಯಿಸಲು ಪೌರಾಯುಕ್ತೆಗೆ ಕಾಲ್ ಮಾಡಿದ್ದ ರಾಜೀವ್ ಗೌಡ, ನನ್ನ ಕೋಪ ನೀವು ನೋಡಿಲ್ಲ. ನಾನು ಯಾವ ಮಾತು ಕೇಳುವುದಿಲ್ಲ ಅನ್ನೋ ರೀತಿ ಮಾತನಾಡಿದ್ದಾರೆ.

ಈ ಆಡಿಯೋ ತುಣುಕು ಶೇರ್ ಮಾಡಿ ಎಕ್ಸ್ ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ಬಿ.ವೈ.ವಿಜಯೇಂದ್ರ, ಕಾಂಗ್ರೆಸ್ ಮುಖಂಡನ ಈ ನಡುವಳಿಕೆಯನ್ನು ಖಂಡಿಸಿದ್ದಾರೆ. ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ, ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ ಒಬ್ಬ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಮೇಲೆ ಹೀಗೆ ಅಸಭ್ಯ ಪುಂಡನಂತೆ ವರ್ತಿಸುತ್ತಿರುವುದು ಅಕ್ಷಮ್ಯ ಎಂದಿದ್ದಾರೆ.

ಮಾನ್ಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರೇ, ನಿಮ್ಮದೇ ಪಕ್ಷದ ಈ ಮುಖಂಡನ ಈ ‘ಗೂಂಡಾ ವರ್ತನೆ’ಗೂ ಕೂಡ ಬಳ್ಳಾರಿಯ ಪ್ರಕರಣದಲ್ಲಿ ವಹಿಸಿದಂತೆ ಇದಕ್ಕೂ ನಿಮ್ಮ ‘ಮೌನ’ ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ? ಮಾನ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ರವರನ್ನಂತೂ ಕೇಳುವಂತೆಯೇ ಇಲ್ಲ. ಅವರ ಬಳಿ ಮಾಹಿತಿ ಇರುವುದೇ ಇಲ್ಲ. ಪೊಲೀಸ್ ಇಲಾಖೆಯ ಕೈಕಟ್ಟಿ ಹಾಕಿ, ಗೂಂಡಾಗಳಿಗೆ ರಕ್ಷಣೆ ನೀಡುತ್ತಿರುವುದೇ ನಿಮ್ಮ ಸಾಧನೆಯೇ? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಅಧಿಕಾರ ಮದದಿಂದ ಜನಸಾಮಾನ್ಯರ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ನೋಡಿಕೊಂಡು ಪಕ್ಷ ಸುಮ್ಮನಿರಲಾಗದು. ಒಬ್ಬ ಮಹಿಳಾ ಅಧಿಕಾರಿ ವಿರುದ್ಧ ದಬ್ಬಾಳಿಕೆ ನಡೆಸುವ ಇಂತಹ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದ್ದಾರೆ.

About The Author