Political News: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಭೂಮಿಪೂಜೆ ನೆರವೇರಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕ“ಂಡಿರುವ ಅವರು, ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಮಠದಹಳ್ಳ ಕೆರೆಗೆ ನೀರು ಹರಿಸುವ ಏತ ನೀರಾವರಿ ಯೋಜನೆಗೆ ಭೂಮಿಪೂಜೆ ನೆರವೇರಿಸಿದೆ. ₹50 ಕೋಟಿ ವೆಚ್ಚದ ಈ ಯೋಜನೆಯಿಂದ 42 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ಗುಬ್ಬಿ ಶಾಸಕರಾದ ಶ್ರೀನಿವಾಸ್ ಅವರ ಕ್ಷೇತ್ರ ಬೇರೆ ಅಲ್ಲ ಈ ಡಿಕೆ ಶಿವಕುಮಾರ್ ಅವರ ಕ್ಷೇತ್ರ ಬೇರೆ ಅಲ್ಲ. ಇದು ನಮ್ಮ ಕ್ಷೇತ್ರ. ಯಾರೇ ಎಷ್ಟೇ ವಿರೋಧ ಮಾಡಿದರೂ ತೊಂದರೆ ಕೊಟ್ಟರೂ ಕ್ಷೇತ್ರದ ಜನರಿಗೆ ಏನು ಸಹಾಯ ಮಾಡಬೇಕು ಅದನ್ನು ಮಾಡುತ್ತೇವೆ. 1988 ರಿಂದ ಹಿರಿಯ ನಾಯಕರಾದ ಟಿ.ಬಿ. ಜಯಚಂದ್ರ ಅವರು ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ ರೈತರ ಹಿತಕ್ಕೆ ಕೆಲಸ ಮಾಡಿದ್ದರು. ಅದೇ ನಿಟ್ಟಿನಲ್ಲಿ ಶಾಸಕರಾದ ಶ್ರೀನಿವಾಸ್ ಅವರು ಸಹ ಕೆಲಸ ಮಾಡುತ್ತಿದ್ದಾರೆ ಎಂದು ಡಿಸಿಎಂ ಹೇಳಿದ್ದಾರೆ.
ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ಇನ್ನಿತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ನಿರ್ದೇಶನವನ್ನು ನನಗೆ ನೀಡಿದ್ದಾರೆ. ಹಾಗಾಗಿ ಕುಡಿಯುವ ನೀರಿನ ಯೋಜನೆಗಳಿಗೆ ಮೊದಲು ಆದ್ಯತೆ ನೀಡಲಾಗುತ್ತಿದೆ. ನಮಗೆ ರೈತರ ಕಷ್ಟ ಗೊತ್ತಿದೆ, ರೈತರ ಹಿತಕ್ಕೆ ಶ್ರಮಿಸಲು ನಮ್ಮ ಸರ್ಕಾರ ಬದ್ಧವಿದೆ.