Mandya News: ಮದ್ದೂರು: ‘ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ (ಮನ್‌ಮುಲ್) ಫೆ. 2ರಂದು ನಿರ್ದೇಶಕರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ (ಎನ್‌ಡಿಎ) ಪಕ್ಷಗಳ ಅಭ್ಯರ್ಥಿಯಾಗಿ ಎನ್.ಮಹೇಶ್ ಅವರನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ಮಾಜಿ ಶಾಸಕ ಸುರೇಶ್ ಗೌಡ ತಿಳಿಸಿದರು.
ಪಟ್ಟಣದ ಮಾಜಿ ಶಾಸಕ ಡಿ.ಸಿ. ತಮ್ಮಣ್ಣ ಅವರ ನಿವಾಸದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್‌ನ ಕೋಣಸಾಲೆ ಮಧು ಅವರು ನಿರ್ದೇಶಕ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿಯಾಗಿದ್ದರು. ಅವರಿಗೆ ಮುಂದೆ ಪಕ್ಷದಿಂದ ಉನ್ನತ ಸ್ಥಾನಮಾನಗಳನ್ನು ನೀಡುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಅವರು ಚುನಾವಣೆಯಲ್ಲಿ ಎಸ್.ಮಹೇಶ್ ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ ಈ ಬಗ್ಗೆ ಯಾವುದೇ ಗೊಂದಲ ಬೇಡ’ ಎಂದರು.
ಮನ್‌ಮುಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಕೋಣಸಾಲೆ ಮಧು ಸೇರಿದಂತೆ ಹಲವಾರು ಮಂದಿ ಆಕಾಂಕ್ಷಿತರಿದ್ದರು. ಅವರೆಲ್ಲರನ್ನು ಸಹ ವಿಶ್ವಾಸಕ್ಕೆ ತೆಗೆದುಕೊಂಡು ಎಸ್.ಮಹೇಶ್ ಅವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದ್ದು ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲು ಪಕ್ಷದ ಎಲ್ಲಾ ಮುಖಂಡರು ಕಾರ್ಯಕರ್ತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘದ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಶ್ರಮಿಸಬೇಕು’ ಎಂದು ಮನವಿ ಮಾಡಿದರು.
ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಘೋಷಿತ ಅಭ್ಯರ್ಥಿ ಎಸ್.ಮಹೇಶ್ ಮುಖಂಡರಾದ ಕೋಣಸಾಲೆ ಮಧು ಹೊಸಕೆರೆ ದಯಾನಂದ ಅಂಕನಾಥಪುರ ಬಿಳಿಯಪ್ಪ ಹಾಜರಿದ್ದರು.