Political News: ರಾಜ್ಯದೆಲ್ಲೆಡೆ ಕಲುಷಿತ ನೀರು ಕುಡಿದು ಜನರು ಅಸ್ವಸ್ಥರಾಗಿ ಹಲವಾರು ಸಾವು ನೋವುಗಳು ಸಂಭವಿಸಿದ್ದರೂ ಈ ಅಧಿಕಾರಿಗಳು ಮಾತ್ರ ಎಚ್ಚೆತ್ತಿಲ್ಲ. ಇದರ ನಡುವೆಯೇ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತೆಲೆಕುಣಿ ಗ್ರಾಮಸ್ಥರು ಕಲುಷಿತ ನೀರನ್ನು ಸೇವಿಸಿ ಅನಾರೋಗ್ಯದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಕೂಡಲೇ ನಮಗೆ ಶುದ್ದ ಕಡಿಯುವ ನೀರನ್ನು ಕಲ್ಪಿಸುವಂತೆ ಅವರು ಆಗ್ರಹಿಸಿದ್ದಾರೆ. ಇಲ್ಲಿನ ಕಿಣ್ಣಿಸುಲ್ತಾನ್ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಈ ಗ್ರಾಮವು ಶುದ್ಧ ಕುಡಿಯುವ ನೀರಿನ ಭಾಗ್ಯದಿಂದ ವಂಚಿತವಾಗಿದೆ.
ಇನ್ನೂ ನಮ್ಮ ಮನವಿಗೆ ಸ್ಪಂದಿಸದೆ ಗ್ರಾಮ ಪಂಚಾಯತಿಯವರು ಬರೀ ಕಲುಷಿತ ನೀರನ್ನು ಬಿಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಲ್ಲದೆ ಈ ನೀರಿನ ಸೇವನೆಯಿಂದ ಗ್ರಾಮದ ಜನರಲ್ಲಿ ವಾಂತಿ ಭೇದಿ ಶುರುವಾಗಿದ್ದು, ಹೊಟ್ಟೆ ನೋವು, ಕಿಡ್ನಿ ಸ್ಟೋನ್ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿವೆ. ಪ್ರಮುಖವಾಗಿ ಗ್ರಾಮಕ್ಕೆ ಬಾವಿಯ ನೀರು ಸರಬರಾಜು ಮಾಡಲಾಗುತ್ತಿದ್ದು, ರೋಗ ಉಲ್ಬಣಕ್ಕೆ ಇದೂ ಸಹ ಕಾರಣವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಕಲುಷಿತ ನೀರು ಸೇವನೆಯಿಂದ ಗ್ರಾಮಸ್ಥರಲ್ಲಿ ಇಷ್ಟೆಲ್ಲ ಕಾಯಿಲೆಗಳು ಹೆಚ್ಚುತ್ತಿವೆ, ಆದರೆ ಇದುವರೆಗೂ ಸಹ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನೂ ನಮಗೆ ಕುಡಿಯಲು ಶುದ್ಧ ಕುಡಿಯುವ ನೀರನ್ನು ಒದಗಿಸಿ ಎಂದು ಹಲವು ಬಾರಿ ಗ್ರಾಮ ಪಂಚಾಯಿತಿ, ತಾಲೂಕಾ ಪಂಚಾಯಿತಿ ಸೇರಿದಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಮನವಿ ಮಾಡಿದರೂ ಸಹ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಅಲ್ಲದೆ ಈ ವಿಚಾರದಲ್ಲಿ ಯಾರೇ ಮಾತನಾಡಿದರೂ ಸಹ ಅವರನ್ನು ಹೆದರಿಸಲಾಗುತ್ತದೆ ಎನ್ನುವುದು ಗ್ರಾಮಸ್ಥರ ಅಳಲಾಗಿದೆ.
ಒಟ್ನಲ್ಲಿ.. ಕೇಂದ್ರ, ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದ ಅಭಿವೃದ್ದಿಗೆ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಅಲ್ಲದೆ ದೇಶದ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರು ಜಲ ಜೀವನ ಮಿಷನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಸ್ವತಃ ಕಲಬುರಗಿ ಜಿಲ್ಲೆಯನ್ನೇ ಪ್ರತಿನಿಧಿಸುತ್ತಿರುವ ರಾಜ್ಯದ ಗ್ರಾಮೀಣಾಭಿವೃದ್ದಿ ಮತ್ತು ಮಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ತವರಲ್ಲೇ ಇನ್ನೂ ಕಲುಷಿತ ನೀರನ್ನು ಜನರು ಸೇವಿಸುತ್ತಿರುವುದು ನಿಜಕ್ಕೂ ಶೋಚನೀಯ ಸಂಗತಿ.. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಮ್ಮ ಗಾಢನಿದ್ರೆಯಿಂದ ಎಚ್ಚೆತ್ತು ಶುದ್ಧ ಕುಡಿಯುವ ನೀರಿಗಾಗಿ ಪರಿ ಪರಿಯಾಗಿ ಬೇಡಿಕೊಳ್ಳುತ್ತಿರುವ ತೆಲೆಕುಣಿ ಗ್ರಾಮಸ್ಥರ ದಾಹವನ್ನು ತಣಿಸುವಂತಾಲಿ ಎನ್ನುವುದೇ ನಮ್ಮ ಆಶಯ..