Political News: ಬಿ.ವೈ.ವಿಜಯೇಂದ್ರ ಸಿಎಂ ಸಿದ್ದರಾಮಯ್ಯ ವಿರುದ್ಧ ಟ್ವೀಟ್ ಮಾಡಿ, ಆಕ್ರೋಶ ಹೊರಹಾಕಿದ್ದಾರೆ. ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ವಿಜಯೇಂದ್ರ ಟ್ವೀಟ್ ಮಾಡಿದ್ದು, ಆರೋಪ ಮುಚ್ಚಿಹಾಕಲು ಸಮಾವೇಶ ನಡೆಸುತ್ತೀರಿ ಎಂದು ಹರಿಹಾಯ್ದಿದ್ದಾರೆ.
ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಕುಟುಂಬ ಪಡೆದ 14 ನಿವೇಶನಗಳೂ ಸೇರಿದಂತೆ ಮುಡಾದಲ್ಲಿ ಲೂಟಿಯಾದ ಸಾವಿರಾರು ಕೋಟಿ ಬೆಲೆ ಬಾಳುವ ಐದು ಸಾವಿರಕ್ಕೂ ಹೆಚ್ಚು ನಿವೇಶನಗಳ ಹಗರಣದ ಕುರಿತು ನಾವು ‘ಮೈಸೂರು ಚಲೋ ಬೃಹತ್ ಪಾದಯಾತ್ರೆ’ ಕೈಗೊಂಡರೆ ಅದಕ್ಕೆ ಪರ್ಯಾಯವಾಗಿ ನಿಮ್ಮ ಭ್ರಷ್ಟತೆಯ ಮುಖ ಮುಚ್ಚಿಕೊಳ್ಳಲು ಮೈಸೂರಿನಲ್ಲಿ ಭಂಡತನದ ಪ್ರಾಯೋಜಿತ ಸಮಾವೇಶ ಏರ್ಪಡಿಸುತ್ತೀರಿ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಇದೀಗ ವಿಧಾನಸೌಧವನ್ನು ಖಾಲಿಮಾಡಿ ಮಂತ್ರಿ ಮಹೋದಯರೆಲ್ಲರನ್ನೂ ಕಡ್ಡಾಯವಾಗಿ ಕರೆದುಕೊಂಡು ಹೋಗಿ ಕೋಟಿ ಕೋಟಿ ಖರ್ಚು ಮಾಡಿ ಸಮಾವೇಶಗಳನ್ನು ಸಂಘಟಿಸುತ್ತಿರುವ ನೀವು ಮಾಡಿರುವ ಭ್ರಷ್ಟಾತಿ ಭ್ರಷ್ಟ ಹಗರಣಗಳಿಂದ ಕಾನೂನಿನ ಕುಣಿಕೆಗೆ ಸಿಲುಕಿ ಅಧಿಕಾರ ಕಳೆದುಕೊಳ್ಳುವ ಭಯದಿಂದ ಹಾಗೂ ನಿಮ್ಮ ಸ್ವವೈಭವೀಕರಣಕ್ಕಾಗಿ ಸಂಘಟಿಸುತ್ತಿರುವ ಸಮಾವೇಶಗಳು ಜನಕಲ್ಯಾಣ ಎಂದು ಹೇಗೆ ಅರ್ಥೈಸುತಿದ್ದೀರಿ, ಇದು ಜನ ಕಲ್ಯಾಣ ವಿರೋಧಿ ಸಮಾವೇಶ, ಅಭಿವೃದ್ಧಿ ವಿರೋಧಿ ಸಮಾವೇಶ, ಭ್ರಷ್ಟತೆಯನ್ನು ಸಮರ್ಥಿಸುವ ಸಮಾವೇಶ, ಆತ್ಮವಂಚನೆ ಮಾಡಿಕೊಂಡು ನೈತಿಕತೆಯನ್ನು ಗಾಳಿಗೆ ತೂರಿ ಲಜ್ಜೆಗೆಟ್ಟ ವರ್ತನೆಯ ಪ್ರತೀಕವಾಗಿ ಸಂಘಟಿಸುವ ಇಂತಹ ಸಮಾವೇಶಗಳಿಗೆ ಕಾಲವೇ ಉತ್ತರ ಹೇಳಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಇಂತಹ ಸಮಾವೇಶಗಳಿಂದ ನಾಡಿನ ಜನರ ತೆರಿಗೆದಾರರ ಹಣ ಎಷ್ಟು ಪೋಲಾಗುತ್ತಿದೆ, ಸರ್ಕಾರಿ ಯಂತ್ರ ಹಾಗೂ ಮಾನವ ಸಂಪನ್ಮೂಲ ಹೇಗೆ ದುರ್ಬಳಕೆ ಯಾಗುತ್ತಿದೆ, ಎಂಬುದರ ಬಗ್ಗೆ ಪರಾಮರ್ಶೆ ನಡೆಯಲಿ. ಆಡಳಿತ ಪಕ್ಷ ಸಂಘಟಿಸುವ ಇಂತಹ ಸಮಾವೇಶಗಳು ಎಷ್ಟು ಸಮರ್ಥನೀಯ ಎಂಬುದರ ಬಗ್ಗೆ ಮುಕ್ತ ಚರ್ಚೆಯಾಗಲಿ ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.