Political News: ಅಪ್ಪಟ ಸುಳ್ಳುಗಾರ ಮಿ.ಬಿದರಿ: ಸಚಿವ ಎಂ.ಬಿ.ಪಾಟೀಲ್ ಆಕ್ರೋಶ

Political News: ವೀರಶೈವ ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ್ ಬಿದರಿ ಮತ್ತು ಸಚಿವರಾದ ಎಂ.ಬಿ.ಪಾಟೀಲ್ ನಡುವೆ ಮಾತಿನ ಜಟಾಪಟಿ ಜೋರಾಗಿದೆ.

ಬಸವ ಮಂಟಪ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಬಿದರಿಯವರು ಭಾಗವಹಿಸಿದ್ದಾರೆಂದು ಸಚಿವರು ಆರೋಪ ಮಾಡಿದ್ದು, ಬಸವಣ್ಣನವರ ಅವಹೇಳನ ಮಾಡಿದ್ದರೂ ಈ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಮಾತನಾಡಿದ್ದ ಬಿದರಿ, ನಾನು ಈಗ ಬೆಂಗಳೂರಿನಿಂದ ಹೊರಗಿದ್ದೇನೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ನನ್ನ ಭಾಗವಹಿಸುವಿಕೆಗೆ ಸಂಬಂಧಿಸಿದ ಪ್ರಕರಣದ ಪೂರ್ಣ ಸತ್ಯಾಸತ್ಯತೆಗಳನ್ನು ತಿಳಿಯದೆ ಅವರು ನನ್ನ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಬಿದರಿ ಹೇಳಿದ್ದರು.

ಇದೀಗ ಮತ್ತೆ ತಮ್ಮ ಎಕ್ಸ್ ಖಾತೆಯಲ್ಲಿ ಬಿದರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಅಪ್ಪಟ ಸುಳ್ಳುಗಾರ ಮಿ.ಬಿದರಿ ಎಂದು ಜರಿದಿದ್ದಾರೆ.

ಬಸವಣ್ಣನನ್ನು ಹೀಯಾಳಿಸಿರುವ ವ್ಯಕ್ತಿ ಜೊತೆ ಕೈಜೋಡಿಸಿರುವ ಇವರು, ವೀರಶೈವ ಮಹಾಸಭೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತಮ್ಮ ಮರ್ಯಾದೆ ಉಳಿಸಿಕೊಳ್ಳುವ ಕನಿಷ್ಟ ಸೌಜನ್ಯವೂ ಇಲ್ಲದೆ ಅಸಂಬದ್ಧವಾಗಿ ಮಾತನಾಡುತ್ತಾರೆ. ರಾಜಕಾರಣಿಗಳು ಏನು ಬೇಕಾದರೂ ಮಾತನಾಡುತ್ತಾರೆ ಎನ್ನುವ ಇವರು 3-4 ಪಕ್ಷಗಳನ್ನು ಬದಲಾಯಿಸಿ, ಚುನಾವಣೆಗೆ ನಿಂತು, ಠೇವಣಿ ಕಳೆದುಕೊಂಡಿರುವ ಹೀನ ಮನಸ್ಸಿನ ವ್ಯಕ್ತಿಯಿಂದ ನಮ್ಮ ಸಮಾಜಕ್ಕೆ ಉಪದೇಶದ ಅವಶ್ಯಕತೆಯಿಲ್ಲ! ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಮ್ಮ ಪೂರ್ವಜರು ಸಿರಸಂಗಿ ಲಿಂಗರಾಜರು ತಮ್ಮ ಸಮಸ್ತ ಆಸ್ತಿಯನ್ನೇ ಲಿಂಗರಾಜ ಫಂಡ್ ಮೂಲಕ ಸಮಾಜದ ಒಳಿತಿಗೆ-ಶಿಕ್ಷಣಕ್ಕೆ ದಾನ ನೀಡಿದವರು. ಲಿಂಗರಾಜ ಫಂಡ್ ಮೂಲಕ ಶಿಕ್ಷಣ ಪಡೆದ ಬಿದರಿಯ ಎಲ್ಲಾ ದಾನಗಳೂ ಗೊತ್ತಿವೆ. ವಚನಪಿತಾಮಹ ಫ.ಗು. ಹಳಕಟ್ಟಿಯವರ ಕುರಿತು ನಾನು ಮಾಡಿರುವ ಕಾರ್ಯಗಳನ್ನು ಇಡೀ ನಾಡೇ ಗಮನಿಸುತ್ತಿದೆ, ಇವರಿಂದ ಸರ್ಟಿಫಿಕೇಟ್ ಬೇಕಾಗಿಲ್ಲ.

ತಾನು ಸತ್ಯವಂತ, ಬಸವಣ್ಣ ಅನುಯಾಯಿ ಎಂದೆಲ್ಲಾ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಬಿದರಿ ಬಗ್ಗೆ, ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಇವರು ಮಾಡಿರುವ ಅನಾಚಾರಗಳು, ಅನೈತಿಕ ಅವಾಂತರಗಳು ಮತ್ತು ಅಕ್ರಮಗಳನ್ನು ಮುಂದಿನ ದಿನಗಳಲ್ಲಿ ಜನರಿಗೆ ತಿಳಿಸಲಿದ್ದೇನೆ. ಸಿದ್ದಗಂಗಾ ಹಿರಿಯ ಶ್ರೀಗಳ ವಿಷಯದಲ್ಲಿ ನಡೆದ ಷಡ್ಯಂತ್ರದ ಸತ್ಯದರ್ಶನವನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಸಿದ್ದಗಂಗಾ ಹಿರಿಯ ಶ್ರೀಗಳನ್ನು ಭೇಟಿ ಮಾಡಿಸುವಂತೆ ಆ ಸಂದರ್ಭದಲ್ಲಿ ನಾನು ಬಿದರಿ ಆಫೀಸಿಗೆ ಹೋಗಿದ್ದೆ ಎಂದು ಹೇಳಿರುವುದು ಹಸಿಸುಳ್ಳು, ನಾನು ಅವರ ಆಫೀಸಿಗೆ ಹೋಗಿಯೇ ಇಲ್ಲ…ಇದು ಅಪ್ಪಟ ಕಟ್ಟುಕಥೆ…! ನಾನು ಯಾರ ಮನೆಯ ಬಾಗಿಲಿಗೂ ಹೋಗಿ ಸ್ವಾಭಿಮಾನ ಬಿಟ್ಟುಕೊಟ್ಟವನಲ್ಲ. ನನ್ನ ಆತ್ಮಗೌರವವನ್ನು ಬದಿಗಿಟ್ಟು ಯಾರ ಮುಂದೆಯೂ ತಲೆತಗ್ಗಿಸುವಂತಹ ಪ್ರಶ್ನೆಯೇ ಇಲ್ಲ! ಎಂದು ಸಚಿವರು ಖಡಾಖಂಡಿತವಾಗಿ ಹೇಳಿದ್ದಾರೆ.

About The Author