Spiritual: ಮನೆ ಎಂದರೆ ನಮ್ಮ ಮಾನಸಿಕ ನೆಮ್ಮದಿಯನ್ನು ನಿರ್ಧರಿಸುವ ಸ್ಥಳ. ಅಲ್ಲಿನ ವಾತಾವರಣ ಉತ್ತಮವಾಗಿದ್ದರೆ, ನಾವು ನೆಮ್ಮದಿಯಾಗಿ, ಆರೋಗ್ಯವಾಗಿರಲು ಸಾಧ್ಯ. ಹಾಗಾದ್ರೆ ಮನೆಯಲ್ಲಿ ನೆಮ್ಮದಿ ನೆಲೆಸಿರಬೇಕು ಅಂದ್ರೆ ನಾವು ಏನೇನು ಮಾಡಬೇಕು ಅಂತಾ ತಿಳಿಯೋಣ ಬನ್ನಿ.
ಹಿರಿಯರನ್ನು ಗೌರವಿಸಿ, ಕಿರಿಯರನ್ನು ಪ್ರೀತಿಸಿ: ಮನೆಯಲ್ಲಿರುವ ಹಿರಿಯರು ಕಿರಿಯರನ್ನು ಪ್ರೀತಿಸಬೇಕು. ಮತ್ತು ಮನೆಯಲ್ಲಿರುವ ಕಿರಿಯರು ಹಿರಿಯರನ್ನು ಗೌರವಿಸಬೇಕು. ಹೀಗಾಗಬೇಕು ಅಂದ್ರೆ, ಮನೆಯಲ್ಲಿರುವ ಹಿರಿಯರು ಉತ್ತಮವಾಗಿ ಮಾತನಾಡಬೇಕು. ಯಾರ ಬಗ್ಗೆಯೂ ಕೀಳಾಗಿ ಮಾತನಾಡಬಾರದು. ಪ್ರೀತಿ, ಕಾಳಜಿ ಹಂಚುವುದರಲ್ಲಿ ನಂಬಿಕೆ ಇರಬೇಕು. ಇಲ್ಲವಾದಲ್ಲಿ ನಿಮ್ಮ ಮಕ್ಕಳು ನಿಮಗೂ ಎಂದಿಗೂ ಗೌರವಿಸುವುದಿಲ್ಲ. ಮತ್ತು ನಿಮ್ಮನ್ನು ಗೌರವಿಸದ ಮಕ್ಕಳನ್ನು ನೀವೆಂದೂ ಪ್ರೀತಿಸಲು ಸಾಧ್ಯವಿಲ್ಲ.
ಅತಿಥಿಗಳನ್ನು ಗೌರವಿಸಿ: ಮನೆಗೆ ಬಂದ ಅತಿಥಿಗಳನ್ನು ಗೌರವಿಸಿ, ಸತ್ಕರಿಸಿ. ಏಕೆಂದರೆ ಅತಿಥಿಗಳನ್ನು ನೀವು ಮನಸ್ಸಿನಿಂದ ಗೌರವಿಸಿದರೆ, ಬರೀ ಅತಿಥಿಗಳ ಮನಸ್ಸಿನಲ್ಲಿ ನಿಮ್ಮ ಬಗೆಗಿನ ಗೌರವ ಹೆಚ್ಚಾಗುವುದಿಲ್ಲ. ಬದಲಾಗಿ ಅವರು ನಿಮ್ಮ ಬಗ್ಗೆ ಇರುವ ಗೌರವವನ್ನು, ನೀವು ತೋರಿಸಿದ ಪ್ರೀತಿ, ಕಾಳಜಿಯ ಬಗ್ಗೆ ಇತರರಿಗೂ ಹೇಳುತ್ತಾರೆ. ಆಗ ನಿಮ್ಮ ಬಗ್ಗೆ ಇರುವ ಉತ್ತಮ ಅಭಿಪ್ರಾಯ ಇನ್ನೂ ಹೆಚ್ಚಾಗುತ್ತದೆ.
ಪಿತೃಗಳನ್ನು ಮರೆಯಬೇಡಿ: ನಿಮ್ಮ ಮನೆಯ ಪಿತೃಗಳನ್ನು ಎಂದಿಗೂ ಮರೆಯಬೇಡಿ. ಕೆಲವರ ಜೀವನದಲ್ಲಿ ಸದಾ ನಷ್ಟದ ವಾತಾವರಣವೇ ಇರುತ್ತದೆ. ಪದೇ ಪದೇ ಆರೋಗ್ಯ ಹಾಳಾಗುವುದು. ಆರ್ಥಿಕವಾಗಿ ಹಿಂದುಳಿಯುವುದು. ಮಾನಸಿಕ ನೆಮ್ಮದಿ ಇಲ್ಲದಿರುವುದು. ಜಗಳವಾಗುವುದು. ಹೀಗೆ ಮನೆಯಲ್ಲಿ ಸಮಸ್ಯೆಗಳಾಗುತ್ತದೆ. ಇದಕ್ಕೆ ಕಾರಣ ಪಿತೃಗಳನ್ನು ನಾವು ಮರೆಯುವುದು. ಹಾಗಾಗಿ ಸರಿಯಾದ ಸಮಯಕ್ಕೆ ನಾವು ಶ್ರಾದ್ಧ ಕಾರ್ಯಗಳನ್ನು ಮಾಡಬೇಕು.




