Political News: ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಾ ತಳಮಟ್ಟದಲ್ಲಿ ಜೆಡಿಎಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಲಭಿಸುವ ಸಾಧ್ಯತೆಗಳು ದಟ್ಟವಾಗಿವೆ. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಯುವಕರಲ್ಲಿ ಬೇರೂರುವಂತೆ ಮಾಡಿ ಜೆಡಿಎಸ್ ಪಕ್ಷವನ್ನು ಜನರ ಮನದಲ್ಲಿ ನೆಲೆಯೂರುವಂತೆ ಮಾಡಲು ನಿಖಿಲ್ ನಿರಂತರ ಶ್ರಮಿಸುತ್ತಿದ್ದಾರೆ.
ಇನ್ನೂ ಹಲವು ತಿಂಗಳುಗಳಿಂದ ಪಕ್ಷದಲ್ಲಿನ ಹಿರಿಯ ನಾಯಕರಿಗೆ ಈ ಜವಾಬ್ದಾರಿ ವಹಿಸುವ ಕುರಿತು ಪರಿಶೀಲನೆಗಳೂ ನಡೆದಿದ್ದವು. ಅಲ್ಲದೆ ಅನುಭವದ ಆಧಾರದ ಮೇಲೆ ಹಿರಿತನದ ಮಾನದಂಡವನ್ನು ಮುಂದಿಟ್ಟುಕೊಂಡು ನೂತನ ರಾಜ್ಯಾಧ್ಯಕ್ಷರ ಆಯ್ಕೆಗೆ ಜೆಡಿಎಸ್ ಕಸರತ್ತನ್ನು ನಡೆಸಿತ್ತು. ಆದರೆ ಅಧಿಕ ಕಾಲ ದೇವೇಗೌಡರ ಕುಟುಂಬದಲ್ಲೇ ಈ ಸ್ಥಾನ ಇರುವುದರಿಂದ ಪಕ್ಷಕ್ಕೆ ಲಾಭವಾಗಿದೆ. ಬೇರೆಯವರು ಇದರ ಸಾರಥ್ಯವಹಿಸಿದರೆ ಸಂಘಟನೆಯ ದೃಷ್ಟಿಯಿಂದ ಹಿನ್ನಡೆಯಾಗಲಿದೆ ಎನ್ನುವ ಅಭಿಪ್ರಾಯಗಳು ಪಕ್ಷದಲ್ಲೇ ವ್ಯಕ್ತವಾಗಿದ್ದವು.
ಜಿಟಿಡಿಗೆ ತಪ್ಪಿತ್ತು ಚಾನ್ಸ್..!
ಅಲ್ಲದೆ ಸದ್ಯ ಕೇಂದ್ರ ಸಚಿವರಾಗಿರುವ ಹೆಚ್.ಡಿ.ಕುಮಾರಸ್ವಾಮಿಯವರೇ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರ ಹೊಣೆ ನಿಭಾಯಿಸುತ್ತಿದ್ದಾರೆ. ಅವರು ಕೇಂದ್ರ ಸರ್ಕಾರದಲ್ಲಿ ಮಹತ್ವದ ಹುದ್ದೆಯಲ್ಲಿರುವುದರಿಂದ ಹೆಚ್ಚಿನ ಸಮಯವನ್ನು ಕೇಂದ್ರ ಸರ್ಕಾರದ ಕಾರ್ಯಗಳಿಗೆ ಹಾಗೂ ಕಾರ್ಯಕ್ರಮಗಳಿಗೆ ನೀಡಬೇಕಾಗುತ್ತಿದೆ. ಹೀಗಾಗಿ ಅವರಿಗೂ ಇದು ಒತ್ತಡದ ಕೆಲಸವಾಗಿದೆ. ಈ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರದಲ್ಲೇ ನೂತನ ರಾಜ್ಯಾಧ್ಯಕ್ಷರ ನೇಮಕವಾಗಬೇಕೆಂಬುದು ಪಕ್ಷದ ನಾಯಕರ ಕಾಳಜಿಯಾಗಿದೆ. ಪ್ರಮುಖವಾಗಿ ಕುಮಾರಸ್ವಾಮಿಯವರು ಕೇಂದ್ರ ಸಚಿವರಾದ ಬಳಿಕವಷ್ಟೇ ರಾಜ್ಯಾಧ್ಯಕ್ಷರ ಬದಲಾವಣೆಗೆ ಜೆಡಿಎಸ್ ಮುಂದಾಗಿತ್ತು, ಆಗ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಅವರಿಗೆ ಅಧ್ಯಕ್ಷಗಿರಿ ಪಕ್ಕಾ ಆಗಿತ್ತು. ಆದರೆ ಪಕ್ಷದಲ್ಲಿನ ಕೆಲ ನಾಯಕರು ಕುಮಾರಸ್ವಾಮಿಯವರೇ ಮುಂದುವರೆಯಬೇಕೆಂದು ಪಟ್ಟು ಹಿಡಿದಿದ್ದರು. ಈ ಕಾರಣಕ್ಕಾಗಿ ಅದು ಸಾಧ್ಯವಾಗಿರಲಿಲ್ಲ.
ಲೋಕಲ್ ಫೈಟ್‌ಗೆ ಪಕ್ಷ ಸಂಘಟನೆ ಆಗಬೇಕು..
ಅಂದಹಾಗೆ ತಮ್ಮ ಕೆಲಸದ ವ್ಯಾಪ್ತಿ ವಿಸ್ತಾರಗೊಂಡಿರುವ ಕಾರಣ ಕುಮಾರಸ್ವಾಮಿ ಅವರಿಗೆ ಪಕ್ಷದ ಹಿತ ದೃಷ್ಟಿಯಿಂದ ನಾಯಕತ್ವ ತ್ಯಜಿಸುವುದು ಅನಿವಾರ್ಯವಾಗಿದೆ. ಅಲ್ಲದೆ ಕೆಲವೇ ತಿಂಗಳಲ್ಲಿ ಎದುರಾಗಲಿರುವ ಜಿಲ್ಲಾ ಪಂಚಾ ಯತ್, ತಾಲೂಕಾ ಪಂಚಾಯತ್ ಹಾಗೂ ಬಿಬಿಎಂಪಿ ಸೇರಿದಂತೆ ಅನೇಕ ಚುನಾವಣೆಗಳಿಗೆ ಜೆಡಿಎಸ್ ಪಕ್ಷ ಸಂಘಟಿಸುವುದು ಅತ್ಯಂತ ಮುಖ್ಯವಾಗಿದೆ. ಕಾರ್ಯಕರ್ತರ ಒಟನಾಡ, ಜನ ಸಂಪರ್ಕವೂ ಅವಶ್ಯಕವಾಗಿದೆ. ಈ ಎಲ್ಲ ದೃಷ್ಟಿಯಿಂದ ಪಕ್ಷಕ್ಕಾಗಿ ಪೂರ್ಣ ಸಮಯ ನೀಡುವ ನಾಯಕರು ಬೇಕಾಗಿದ್ದಾರೆ. ಅಂತಿಮವಾಗಿ ಇದಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಸೂಕ್ತ ಎಂಬ ಅಭಿಪ್ರಾಯ ಪಕ್ಷದಲ್ಲಿ ವ್ಯಕ್ತವಾಗಿದೆ. ಈಗಾಗಲೇ ರಾಜ್ಯ ಸರ್ಕಾರದ ವಿರುದ್ಧ ಪಕ್ಷದ ನಿಲುವನ್ನು ಸಮರ್ಥವಾಗಿ ವ್ಯಕ್ತಪಡಿಸುತ್ತಿರುವ ಅವರು ಹೆಚ್ಚಾಗಿ ಯುವ ಸಮೂಹವನ್ನು ಪಕ್ಷದತ್ತ ಸೆಳೆಯುವಲ್ಲಿ ಯಶಸ್ವಿಯಾಗಲಿದ್ದಾರೆ ಎನ್ನುವ ನಿಟ್ಟಿನಲ್ಲಿಯೂ ಅವರ ನೇಮಕಕ್ಕೆ ಪಕ್ಷದಲ್ಲಿ ಒಲವು ಮೂಡಿದೆ.
ನಿಖಿಲ್ ಅಧ್ಯಕ್ಷ.. ದೇವೇಗೌಡರ ಗ್ರೀನ್ ಸಿಗ್ನಲ್..!
ಇನ್ನೂ ರಾಜಕಾರಣದಲ್ಲಿ ಅಪಾರ ಅನುಭವ ಇರುವ, ಸಾಧನೆ ಮಾಡಿರುವ ಹಿರಿಯ ಮುತ್ಸದ್ದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರೂ ಸಹ ಈ ಕುರಿತು ಸುದೀರ್ಘ ಆಲೋಚನೆ ನಡೆಸಿದ್ದಾರೆ. ಅವರೂ ಕೂಡ ಹಲವಾರು ಬಾರಿ ಸಾಧಕ – ಬಾಧಕಗಳ ಬಗ್ಗೆಯೂ ಯೋಚಿಸುವುದರ ಜೊತೆಗೆ ಪಕ್ಷದ ಶಾಸಕರು ಹಾಗೂ ಹಿರಿಯ ನಾಯಕರ ಅಭಿಪ್ರಾಯ ಪಡೆದು ನಿಖಿಲ್ ಕುಮಾರಸ್ವಾಮಿ ಅವರನ್ನು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗುತ್ತಿದೆ.