Political News: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಡಾ.ಕೆ.ಸುಧಾಕರ್ ಅವರು ನನ್ನ ಸವಾಲು ಸ್ವೀಕಾರ ಮಾಡಿರಲಿಲ್ಲ. ಒಂದು ವೇಳೆ ನನ್ನ ಸವಾಲು ಸ್ವೀಕಾರ ಮಾಡಿದ್ದರೆ ನಾನು ರಾಜೀನಾಮೆ ನೀಡುತ್ತಿದ್ದೆ ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ. ಸುಧಾಕರ್‌ಗೆ ಒಂದು ವೋಟ್ ಲೀಡ್ ಬಂದರೂ ರಾಜೀನಾಮೆ ಕೊಡೋದಾಗಿ ಹೇಳಿದ್ದರಿಂದ ಪ್ರದೀಪ್ ಈಶ್ವರ್ ರಾಜೀನಾಮೆಗೆ ಒತ್ತಾಯಗಳು ಕೇಳಿಬಂದಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಅವರು, ಚುನಾವಣೆಗಳಲ್ಲಿ ಸೋಲು-ಗೆಲುವು ಸಹಜ. ನೀವು ಪ್ರಶ್ನೆ ಪತ್ರಿಕೆಯನ್ನೇ ಕೊಡದೆ ಉತ್ತರ ತಪ್ಪು ಬರೆದಿದ್ದೇನೆ ಎಂಬ ಆರೋಪ ನನ್ನ ಮೇಲೆ ಹಾಕಿದರೆ ಹೇಗೆ ಎಂದರು. ರಾಜಕಾರಣದಲ್ಲಿ ಇವೆಲ್ಲಾ ನಡಿತಾ ಇರುತ್ತವೆ. ಅಖಾಡದಲ್ಲಿ ನಾನು ಇದ್ದಿದ್ರೆ ಗೇಮ್ ಬೇರೆ ರೀತಿ ಇರೋದು ಎಂದು ಟಾಂಗ್ ಕೊಟ್ಟಿದ್ದಾರೆ.
ನೂತನ ಸಂಸದ ಸುಧಾಕರ್ ಅವರು ಒಳ್ಳೆಯ ಕೆಲಸ ಮಾಡಿಕೊಂಡು ಹೋಗಲಿ. ಜನಾಭಿಪ್ರಾಯ ಸುಧಾಕರ್ ಪರವಾಗಿ ಬಂದಿದೆ. ಕಳೆದ ಒಂದು ವಾರದಿಂದ ಕ್ಷೇತ್ರದಲ್ಲಿ ಗಲಾಟೆಗಳಾಗುತ್ತಿವೆ. ನನ್ನ ಮನೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ತಕ್ಷಣ ನಾನು ರಿಯಾಕ್ಟ್ ಮಾಡಿದ್ರೆ ನಮ್ಮ ಕಾರ್ಯಕರ್ತರು, ಅವರ ಕಾರ್ಯಕರ್ತರು ಹೊಡೆದಾಡಿಕೊಳುತ್ತಾರೆ. ನಾನು ಬೈಯ್ಯಬೇಕಾ, ನಾನೇ ಅಖಾಡಕ್ಕೆ ಇಳಿಯುತ್ತೇನೆ. ನನ್ನ ಕಾರ್ಯಕರ್ತರನ್ನು ಯಾವುದೇ ಕಾರಣಕ್ಕೂ ಬಲಿ ಕೊಡಲ್ಲ. ನನ್ಮ ಅಸ್ತಿತ್ವದ ಪ್ರಶ್ನೆ ನಾನೇ ಕಾಪಾಡಿಕೊಳ್ತೀನಿ ಎಂದು ಪ್ರದೀಪ್ ಈಶ್ವರ್ ಹೇಳಿದ್ದಾರೆ.
4-5 ಕಡೆ ದಾಳಿಯಾದರೂ ನಾನು ತಾಳ್ಮೆಯಿಂದ ಇದ್ದೇನೆ. ಕೆ.ಸುಧಾಕರ್ ದೆಹಲಿಯಲ್ಲಿ ಆರಾಮಾಗಿ ಇರುತ್ತಾರೆ. ನಾನು ಬೆಂಗಳೂರಿನಲ್ಲಿ ಆರಾಮಾಗಿ ಇರುತ್ತೇನೆ. ನಾವು ನಮ್ಮ ಹೆಂಡತಿ, ಮಕ್ಕಳ ಜೊತೆ ಆರಾಮಾಗಿರ್ತೀವಿ. ನೀವ್ಯಾಕೆ ನಮಗೋಸ್ಕರ ಹೊಡೆದಾಡ್ತೀರಾ? ಯಾಕೆ ಸುಮ್ಮನೆ ಬಟ್ಟೆ ಹರ್ಕೋತೀರಾ? ನಮಗೆಲ್ಲಾ ನಮ್ಮ ಹೆಂಡತಿ ಮಕ್ಕಳೇ ಮುಖ್ಯ ಎಂದು ಹೇಳುವ ಮೂಲಕ ನಾವೆಲ್ಲಾ ಒಂದೇ ಎನ್ನುವ ಅರ್ಥದಲ್ಲಿ ಕಾರ್ಯಕರ್ತರಿಗೆ ಸಂದೇಶ ನೀಡಿದರು.
ಇನ್ನೂ, ಪೊಲೀಸ್ ಬಂದೋಬಸ್ತ್‌ನಲ್ಲಿ ಶುಕ್ರವಾರ ʼನಮಸ್ತೆ ಚಿಕ್ಕಬಳ್ಳಾಪುರʼ ಕಾರ್ಯಕ್ರಮ ನಡೆಸಲಾಯಿತು. ನಗರದ 17ನೇ ವಾರ್ಡ್‌ನಲ್ಲಿ ಮನೆಮನೆಗೆ ತೆರಳಿ ಶಾಸಕ ಪ್ರದೀಪ್ ಈಶ್ವರ್, ಜನರ ಅಹವಾಲು ಆಲಿಸಿದರು.
ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕೆ.ಸುಧಾಕರ್ ಒಂದು ಮತ ಹೆಚ್ಚು ಲೀಡ್ ಪಡೆದರೆ ನಾನು ರಾಜೀನಾಮೆ ನೀಡುತ್ತೇನೆಂದು ಪ್ರದೀಪ್ ಈಶ್ವರ್ ಸವಾಲ್ ಹಾಕಿದ್ದು ಗೊತ್ತೇ ಇದೆ. ಆದರೆ, ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಸುಧಾಕರ್ 20941 ಮತಗಳ ಮುನ್ನಡೆ ಪಡೆದಿದ್ದರು.
ಬಿಎಸ್‌ವೈ ವಿರುದ್ಧ ರಾಜಕೀಯ ವೈಷಮ್ಯ: ಕಾಂಗ್ರೆಸ್ ವಿರುದ್ಧ ಪ್ರಹ್ಲಾದ್ ಜೋಶಿ ಕಿಡಿ
ಹಲವು ಒತ್ತಡಗಳ ನಡುವೆಯೇ ದರ್ಶನ್‌ನನ್ನು ಅರೆಸ್ಟ್ ಮಾಡಿದ ಪೊಲೀಸ್ ಅಧಿಕಾರಿ ಯಾರು ಗೊತ್ತಾ..?