Political News: ತಮ್ಮ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ದೋಷಾರೋಪ ನಿಗದಿಪಡಿಸಿ ವಿಚಾರಣೆಗೆ ಮುಂದಾಗಿರುವ ಸೆಷನ್ಸ್ ಕೋರ್ಟ್‌ನ ನ್ಯಾಯಿಕ ಪ್ರಕ್ರಿಯೆಯನ್ನು ಮುಂದೂಡಲು ನಿರ್ದೇಶನ ನೀಡಬೇಕೆಂದು ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಇನ್ನೂ ಈ ಸಂಬಂಧ ಸಲ್ಲಿಕೆಯಾಗಿದ್ದ ರಿಟ್ ಅರ್ಜಿಯನ್ನು ಶಾಸಕರು ಹಾಗೂ ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅರ್ಜಿಯ ವಿಚಾರಣೆ ನಡೆಸಿದ್ದಾರೆ. ಪ್ರಜ್ವಲ್ ಪರವಾಗಿ ಪದಾಂಕಿತ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿ, ಈ ಪ್ರಕರಣದಲ್ಲಿ ಯಾವುದೇ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿಲ್ಲ. ಕೇವಲ ಇದೊಂದು ರಾಜಕೀಯ ಪ್ರೇರಿತವಾಗಿ ದಾಖಲಿಸಿಕೊಂಡಿರುವ ದೂರಾಗಿದೆ. ಅಲ್ಲದೆ ಎಸ್‌ಐಟಿಗೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರದ ವ್ಯಾಪ್ತಿ ಇಲ್ಲ. ತನಿಖೆಯ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ಅಧಿಕಾರ ವ್ಯಾಪ್ತಿಯೇ ಇಲ್ಲ ಈ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಇದೇ ವೇಳೆ ಅರುಣ್ ಶ್ಯಾಮ್, ಈ ಅರ್ಜಿ ವಿಚಾರಣೆ ಮುಕ್ತಾಯವಾಗುವತನಕ ವಿಚಾರಣಾ ನ್ಯಾಯಾಲಯದ ಮುಂದಿನ ನ್ಯಾಯಿಕ ಪ್ರಕ್ರಿಯೆಯನ್ನು ಮುಂದೂಡುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ನಿರ್ದೇಶಿಸಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದಕ್ಕೆ ಒಪ್ಪದ ನ್ಯಾಯಪೀಠವು ಈ ಹಂತದಲ್ಲಿ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆಯನ್ನು ಮುಂದೂಡಲು ಆಗುವುದಿಲ್ಲ ಎಂಬ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿ, 47 ವರ್ಷದ ಸಂತ್ರಸ್ತ ಮಹಿಳೆ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆ ಮುಂದೂಡಿತು. ರಾಜ್ಯ ಹೆಚ್ಚುವರಿ ಪ್ರಾಸಿಕ್ಯೂಟರ್ ಬಿ.ಎನ್.ಜಗದೀಶ್ ಹಾಜರಿದ್ದರು.
ಇನ್ನೂ ಇದಕ್ಕೆ ಪ್ರತಿಯಾಗಿ ಈ ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪದಾಂಕಿತ ಹಿರಿಯ ವಕೀಲ ರವಿವರ್ಮ ಕುಮಾರ್, ಆರೋಪಿಯು ಮನೆಗೆಲಸದ ಮಧ್ಯವಯಸ್ಸಿನ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದಕ್ಕೆ ಸಾಕ್ಷ್ಯ ಇದೆ. ಅಲ್ಲದೆ ತನ್ನದೇ ಮೊಬೈಲ್‌ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ. ಅದರಲ್ಲಿಯ ಧ್ವನಿ ಮತ್ತು ಡಿಎನ್‌ಎ ಪರೀಕ್ಷೆಗಳೂ ಇದನ್ನು ದೃಢಪಡಿಸಿವೆ. ತನಿಖಾಧಿಕಾರಿಗಳು ಅತ್ಯಂತ ವೃತ್ತಿಪರತೆಯಿಂದ ನಡೆದುಕೊಂಡಿದ್ದಾರೆ. ಆದ್ದರಿಂದ, ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸದೆಯೇ ಅರ್ಜಿ ವಜಾಗೊಳಿಸಬೇಕು ಕೇಳಿಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರು ಅವರ ಪೀಠ, ಈ ಹಂತದಲ್ಲಿ ಪ್ರತಿವಾದಿಗಳ ವಾದ ಆಲಿಸದೆ ಮಧ್ಯಂತರ ಆದೇಶ ಮಾಡಲಾಗದು. ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಲಿ. ಅವರ ವಾದ ಆಲಿಸಿದ ನಂತರ ಮಧ್ಯಂತರ ಆದೇಶ ಮಾಡುವ ಕುರಿತು ಪರಿಶೀಲಿಸಲಾಗುವುದು ಎಂದು ತಿಳಿಸಿತು. ಬಳಿಕ ಅರ್ಜಿಯಲ್ಲಿ ಪ್ರತಿವಾದಿಯಾಗಿರುವ ಸಂತ್ರಸ್ತೆ ಮಹಿಳೆ ಮತ್ತು ಎಸ್‌ಐಟಿಗೆ ನೋಟಿಸ್ ಜಾರಿಗೊಳಿದೆ.
ಏನಿದು ಪ್ರಕರಣ?:
ಲೋಕಸಭಾ ಚುನಾವಣೆ ವೇಳೆ ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್‌ಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ದೃಶ್ಯಾವಳಿಗಳು ತುಂಬಿದ್ದ ಪೆನ್ ಡ್ರೈವ್ ಬಹಿರಂಗವಾಗಿತ್ತು. ಈ ಕೃತ್ಯ ಬೆಳಕಿಗೆ ಬಂದ ಬಳಿಕ ಹೊಳೆನರಸೀಪುರ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿ ಮಾಜಿ ಸಚಿವ ರೇವಣ್ಣ ಹಾಗೂ ಅವರ ಪುತ್ರ ಪ್ರಜ್ವಲ್ ವಿರುದ್ಧ ಅವರಮನೆ ಕೆಲಸದಾಳು ದೂರು ನೀಡಿದ್ದರು.
ಈ ದೂರಿನ ಮೇರೆಗೆ ಹೊಳೆನರಸೀಪುರ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಬಳಿಕ ಈ ಲೈಂಗಿಕ ಹಗರಣದ ಕುರಿತು ಎಸ್ ಐಟಿ ತನಿಖೆಗೆ ರಚಿಸಿತ್ತು. ಅಂತೆಯೇ ಹಾಸನ ಪೆನ್‌ಡೆವ್ ಪ್ರಕರಣದ ತನಿಖೆಗಿಳಿದ ಎಸ್ ಐಟಿ, ಹೊಳೆನರಸೀಪುರ ಠಾಣೆಯಲ್ಲಿ ತಂದೆ-ಮಗನ ವಿರುದ್ಧ ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿತ್ತು. 2144 ಪುಟಗಳು, 137 ಸಾಕ್ಷಿಗಳು, ಹೊಳೆ ನರಸೀಪುರ ಠಾಣೆಯಲ್ಲಿ ಕಳೆದ ವರ್ಷದ ಲೈಂಗಿಕ ದೌರ್ಜನ್ಯದಡಿ 47 ವರ್ಷದ ಮನೆಗೆಲಸದ ಮಹಿಳೆ ದೂರು ನೀಡಿದ್ದರು. ಮೊದಲು ತಂದೆ-ಮಗನ ವಿರುದ್ಧ ಲೈಂಗಿಕ ಕಿರುಕುಳ ಆರೋಪದಡಿ ಎಫ್ ಐಆರ್ ದಾಖಲಾಗಿತ್ತು. ಆದರೆ ತನಿಖೆ ವೇಳೆ ಸಂತ್ರಸ್ತೆ ಮೇಲೆ ಪ್ರಜ್ವಲ್ ಅತ್ಯಾಚಾರ ಎಸಗಿರುವುದು ಬಯಲಾಗಿತ್ತು. ಹೀಗಾಗಿ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಹಾಗೂ ಪ್ರಜ್ವಲ್ ಮೇಲೆ ಅತ್ಯಾಚಾರ ಆರೋಪದಡಿ 2144 ಪುಟಗಳ ದೋಷಾರೋಪಪಟ್ಟಿಯನ್ನು ಎಸ್‌ಐಟಿ ಸಲ್ಲಿಸಿತ್ತು. ಈ ಆರೋಪ ಪಟ್ಟಿಯಲ್ಲಿ 150ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ, ವೈಜ್ಞಾನಿಕ ವರದಿಗಳು ಹಾಗೂ ತಾಂತ್ರಿಕ ಪುರಾವೆಗಳನ್ನು ಸಹ ಲಗತ್ತಿಸಲಾಗಿದೆ ಎಂದು ಎಸ್‌ಐಟಿ ಹೇಳಿತ್ತು..
ಅತ್ಯಾಚಾರ ಎಸಗಿದ ಪ್ರಜ್ವಲ್:
ಇನ್ನೂ ಹೊಳೆನರಸೀಪುರದ ಮನೆಯಲ್ಲಿ ಕೆಲಸದ ಮಹಿಳೆಯನ್ನು ಪ್ರಜ್ವಲ್ ಲೈಂಗಿಕವಾಗಿ ಶೋಷಿಸಿದ್ದಾರೆ. ಆಗಾಗ ಸಂತ್ರಸ್ತೆಗೆ ಫೋನ್ ಕರೆ ಮಾಡಿ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅಲ್ಲದೆ 2020ರಲ್ಲಿ ಬೆಂಗಳೂರಿನ ಬಸವನಗುಡಿ ಮನೆ ಯಲ್ಲಿ ಪ್ರಜ್ವಲ್, ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದರು. ಆ ದಿನ ಅತ್ಯಾಚಾರ ಮಾಡುತ್ತಲೇ ತಮ್ಮ ಮೊಬೈಲ್‌ನಿಂದ ಕೃತ್ಯವನ್ನು ಪ್ರಜ್ವಲ್ ರೆಕಾರ್ಡ್ ಮಾಡಿಕೊಂಡಿದ್ದರು. ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನ ಗಂಡನನ್ನು ಜೈಲು ಪಾಲು ಮಾಡುತ್ತೇನೆ ಮತ್ತೆ ನಿನ್ನ ಮಗಳಿಗೂ ಇದೇ ಗತಿ ಮಾಡುತ್ತೇನೆ ಎಂದು ಪ್ರಜ್ವಲ್ ಬೆದರಿಕೆ ಹಾಕಿರುವುದು ತನಿಖೆಯಲ್ಲಿ ರುಜುವಾತಾಗಿತ್ತು.
ಹಲವು ಮಹಿಳೆಯರಿಗೆ ರೇಪ್ ಮಾಡಿ ವಿಡಿಯೋ!:
ಅತ್ಯಾಚಾರ ಪ್ರಕರಣದ ಇಬ್ಬರು ಸಂತ್ರಸ್ತೆಯರು ಮಾತ್ರವಲ್ಲದೆ ಮೂವರು ಸಾಕ್ಷಿಗಳು ಸೇರಿದಂತೆ ಮಹಿಳೆಯವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆ ಸಮಯದಲ್ಲಿ ತಾನು ಬಳಸುತ್ತಿದ್ದ ಮೊಬೈಲ್‌ನಲ್ಲಿ ಅದೆಲ್ಲವನ್ನು ಚಿತ್ರೀಕರಿಸಿಕೊಂಡಿದ್ದರು. ಈ ಮಾಹಿತಿ ತಮ್ಮ ಕ್ಷೇತ್ರದ ಜನರಲ್ಲಿ ಹರಡುತ್ತಿದ್ದಂತೆ ಕಾನೂನು ಕ್ರಮದಿಂದ ಉದ್ದೇಶಪೂರ್ವಕವಾಗಿ ವಿದೇಶಕ್ಕೆ ಪಲಾಯನಗೈದು ಮೊಬೈಲ್ ಸಾಕ್ಷ್ಯ ನಾಶ ಪಡಿಸಿದ್ದಲ್ಲದೇ ಈ ಹಿಂದೆ ತಾವು ಬಳಸಿದ್ದ ಫೋನ್‌ಗಳಲ್ಲಿ ವಿದ್ಯುಸ್ಥಾನ ಸಾಕ್ಷಿಗಳನ್ನು ನಾಶಪಡಿಸಿದ ಬಗ್ಗೆ ತನಿಖೆಯಿಂದ ದೃಢಪಟ್ಟದ ಎಂದು ಎಸ್‌ಐಟಿ ಹೇಳಿತ್ತು.