Political News: ರಾಜ್ಯ ಬಿಜೆಪಿಯಲ್ಲಿ ಮುಂದುವರೆದಿರುವ ಬಣ ಬಡಿದಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ಬಹಿರಂಗ ಸಮರ ಸಾರಿರುವ ಬಿಜೆಪಿ ರೆಬಲ್ ಶಾಸಕರು ಇದೀಗ ಇನ್ನೊಂದು ತಂತ್ರಕ್ಕೆ ಮುಂದಾಗಿದ್ದಾರೆ. ಇಷ್ಟು ದಿನಗಳ ಕಾಲ ನೇರವಾಗಿ ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಲೇ ಬಂದಿರುವ ಶಾಸಕ ಯತ್ನಾಳ್ ಬಣವು ವಿಜಯೇಂದ್ರ ಹಣಿಯಲು ಮಹಾರಾಷ್ಟ್ರ ಮುಖ್ಯಮಂತ್ರಿಯ ಮೊರೆ ಹೋಗಲು ಸಿದ್ದತೆ ನಡೆಸಿದ್ದಾರೆ.
ಇನ್ನೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರೆಬಲ್ ಶಾಸಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂಲಕ ದೇವೇಂದ್ರ ಫಡ್ನವೀಸ್ ಬಳಿ ವಿಜಯೇಂದ್ರ ವಿಚಾರವನ್ನು ಪ್ರಸ್ತಾಪಿಸಲು ಭಿನ್ನರ ಬಣವು ಪ್ಲಾನ್ ರೂಪಿಸುತ್ತಿದೆ. ಅಲ್ಲದೆ ಈ ಮೊದಲಿನಿಂದಲೂ ಫಡ್ನವೀಸ್ ಜೊತೆಗೆ ಜಾರಕಿಹೊಳಿ ಉತ್ತಮ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಕಳೆದ 2019ರಲ್ಲಿ ನಡೆದಿದ್ದ ಆಪರೇಷನ್ ಕಮಲದ ವೇಳೆ ಆಗ ಮಹಾರಾಷ್ಟ್ರದಲ್ಲಿದ್ದ ಫಡ್ನವೀಸ್ ಸರ್ಕಾರವೇ ಎಲ್ಲ ಕೈ ಶಾಸಕರಿಗೆ ರಕ್ಷಣೆಯನ್ನು ನೀಡಿತ್ತು. ಈ ಮೂಲಕ ಫಡ್ನವೀಸ್ ಹಾಗೂ ರಮೇಶ್ ಜಾರಕಿಹೊಳಿ ನಡುವಿನ ಬಾಂಧವ್ಯ ಕರ್ನಾಟಕದಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರಲು ಕಾರಣವಾಗಿತ್ತು.
ಅಲ್ಲದೆ ರಮೇಶ್ ಜಾರಕಿಹೊಳಿ ಮಾತಿಗೆ ಇಷ್ಟೆಲ್ಲ ಸಹಾಯ, ಸಹಕಾರ ನೀಡಿರುವ ದೇವೇಂದ್ರ ಫಡ್ನವೀಸ್ ಹೇಗೂ ಈಗ ಮತ್ತೆ ಅಲ್ಲಿ ಸಿಎಂ ಆಗಿದ್ದಾರೆ. ಈಗಲೂ ನಮ್ಮ ಮನವಿಗೆ ಸ್ಪಂದಿಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿರುವ ಭಿನ್ನರ ಬಣವು ಹೇಗಾದರೂ ಮಾಡಿ ವಿಜಯೇಂದ್ರ ಅವರನ್ನು ಕೆಳಗಿಳಿಸಲು ನೆರವಾಗುವಂತೆ ಕೇಳಿಕೊಳ್ಳಲಿದೆ. ಇನ್ನೂ ಪ್ರಮುಖವಾಗಿ ದೆಹಲಿಯ ಬಿಜೆಪಿಯ ಹೈಕಮಾಂಡ್ ನಾಯಕರೊಂದಿಗೆ ಫಡ್ನವೀಸ್ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಈ ಮೂಲಕ ವರಿಷ್ಠರ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯನ್ನು ಅನುಸರಿಸಲು ವಿಜಯೇಂದ್ರ ವಿರೋಧಿ ಬಣ ಮುಂದಾಗಿದೆ.
ಅಂದಹಾಗೆ ಇದೇ ವಿಚಾರಕ್ಕೆ ಅಂತಿಮ ಕಸರತ್ತು ಎಂಬಂತೆ ಶಾಸಕ ಯತ್ನಾಳ್ ಬಣ ನವದೆಹಲಿಗೆ ಹಾರಿದ್ದು ತೀವ್ರ ಕುತೂಹಲ ಕೆರಳಿಸಿದೆ. ವಿಜಯೇಂದ್ರ ವಿರುದ್ಧ ದೂರಿನೊಂದಿಗೆ ಬಿಜೆಪಿ ವರಿಷ್ಠರನ್ನು, ರಾಜ್ಯದ ಬಿಜೆಪಿ ಸಂಸದರನ್ನೂ ಶಾಸಕ ಯತ್ನಾಳ್ ಬಣ ಭೇಟಿಯಾಗಲಿದೆ. ಇನ್ನೂ ಕಳೆದ ವಾರವಷ್ಟೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಮಾಜಿ ಸಚಿವ ಅರವಿಂದ ಲಿಂಬಾವಳಿ ರಾಜ್ಯ ಬಿಜೆಪಿಯಲ್ಲಿ ಮುಂದುವರೆದಿರುವ ಆಂತರಿಕ ಕಲಹಕ್ಕೆ ಸಂಬಂಧಿಸಿದಂತೆ ಲಿಖಿತ ದೂರನ್ನು ನೀಡಲು ಮುಂದಾಗಿದ್ದರು. ಆದರೆ ಈ ವಿಚಾರವನ್ನು ಚರ್ಚಿಸಲು ದೆಹಲಿಗೆ ಬರುವಂತೆ ಲಿಂಬಾವಳಿಗೆ ಶಾ ಸೂಚನೆ ನೀಡಿದ್ದರು.
ಯಾರೋ ಹೇಳಿದರೆಂದು ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದ ಅಗರ್‌ವಾಲ್..
ಇನ್ನೂ ಇತ್ತೀಚಿಗಷ್ಟೇ ರಾಜ್ಯಕ್ಕೆ ಭೇಟಿ ನೀಡಿದ್ದ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ಅಗರ್‌ವಾಲ್ ಅವರು ವಿಜಯೇಂದ್ರ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ನೀಡಿ ಹೋಗಿದ್ದರು. ಅಲ್ಲದೆ ರಾಜ್ಯ ಘಟಕದ ಅಧ್ಯಕ್ಷ ಹುದ್ದೆಯ ಬದಲಾವಣೆಯ ಅಧಿಕಾರ ಇರುವುದು ಪಕ್ಷದ ಸಾಮಾನ್ಯ ಕಾರ್ಯಕರ್ತ ಹಾಗೂ ವರಿಷ್ಠರಿಗೆ ಮಾತ್ರ. ಯಾರೋ ಮಧ್ಯದಲ್ಲಿ ಇರುವವರು ಹೇಳಿದರೆಂದು ಅಧ್ಯಕ್ಷರನ್ನು ಇಳಿಸಲಾಗದು. ಅಧ್ಯಕ್ಷ ಹುದ್ದೆಗೆ ಆಯ್ಕೆಯು ಮಹತ್ವದ ನಿರ್ಧಾರ. ಯಾವ ಕಾಲಕ್ಕೆ, ಯಾರ ನಾಯಕತ್ವ ಅಗತ್ಯವಿದೆ ಎಂದು ವರಿಷ್ಠರಿಗೆ ಅನಿಸುತ್ತದೆಯೋ ಆ ಸಮಯದಲ್ಲಿ ಅವರು ಬದಲಾವಣೆಯ ಕ್ರಮಕ್ಕೆ ಮುಂದಾಗುತ್ತಾರೆ. ಈಗ ಕರ್ನಾಟಕಕ್ಕೆ ವಿಜಯೇಂದ್ರ ಅವರ ನಾಯಕತ್ವ ಸೂಕ್ತ ಎಂದು ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವ ಮೂಲಕ ರಾಧಾಮೋಹನ್ ಅಗರ್‌ವಾಲ್ ಪರೋಕ್ಷವಾಗಿ ವಿಜಯೇಂದ್ರ ಬೆನ್ನಿಗೆ ನಿಂತಿದ್ದರು. ಒಟ್ನಲ್ಲಿ.. ಪ್ರಸ್ತುತ ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಈ ಎಲ್ಲ ಬೆಳವಣಿಗೆಗಳ ನಡುವೆ ದೇವೇಂದ್ರ ಫಡ್ನವೀಸ್ ಎಂಟ್ರಿ ಎಷ್ಟು ಫಲಿಸುತ್ತೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ.