Friday, April 25, 2025

Latest Posts

Political News : ಸಿದ್ದು ಸಂಪುಟ ಸರ್ಜರಿ ಸರ್ಕಸ್‌! : ಏಪ್ರಿಲ್‌ನಲ್ಲಿ ಕೈನಲ್ಲಾಗುತ್ತಾ ತಳಮಳ?

- Advertisement -

Political News : ರಾಜ್ಯದಲ್ಲಿ ಮುಂದುವರೆದಿರುವ ಹನಿಟ್ರ್ಯಾಪ್‌ ಹಂಗಾಮಾದ ನಡುವೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ಇದೀಗ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ ಈ ವೇಳೆ ಉಭಯ ನಾಯಕರು ರಾಜಕಾರಣದಲ್ಲಿನ ಪ್ರಸ್ತುತ ಬೆಳವಣಿಗೆಗಳ ಬಗ್ಗೆಯೂ ಚರ್ಚಿಸಿದ್ದಾರೆ. ಇನ್ನೂ ಪ್ರಮುಖವಾಗಿ ರಾಜ್ಯದಲ್ಲಿ ಖಾಲಿ ಇರುವ ವಿಧಾನಪರಿಷತ್‌ನ ಸ್ಥಾನಗಳಿಗೆ ನಾಮನಿರ್ದೇಶನ ಮಾಡುವುದು ಸೇರಿದಂತೆ ಸಚಿವ ಸಂಪುಟದ ವಿಸ್ತರಣೆಯ ವಿಚಾರದ ಕುರಿತೂ ಅಲ್ಲಿ ಮಹತ್ವದ ಟಾಕ್‌ ಆಗಿದೆ.

ಅಲ್ಲದೆ ಪ್ರಮುಖವಾಗಿ ವಿಧಾನಪರಿಷತ್‌ನಲ್ಲಿ ಯು.ಬಿ. ವೆಂಕಟೇಶ್‌, ಪ್ರಕಾಶ್‌ ರಾಥೋಡ್‌, ಸಿ.ಪಿ. ಯೋಗೇಶ್ವರ್‌ ಹಾಗೂ ತಿಪ್ಪೇಸ್ವಾಮಿ ಅವರಿಂದ ನಾಲ್ಕು ಸದಸ್ಯ ಸ್ಥಾನಗಳು ತೆರವಾಗಿವೆ. ಇವುಗಳಿಗೆ ನೂತನ ಸದಸ್ಯರ ನೇಮಕ ಮಾಡಬೇಕಾಗಿದ್ದು, ಈ ನಿಟ್ಟಿನಲ್ಲಿಯೂ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇನ್ನೂ ಇದಕ್ಕೆ ಸಂಬಂಧಿಸಿದ್ದಂತೆ ಸಂಭವನೀಯರ ಪಟ್ಟಿಯ ಬಗ್ಗೆ ದೆಹಲಿಯಲ್ಲಿ ಚರ್ಚಿಸಿ ಹೈಕಮಾಂಡ್‌ ನಾಯಕರು ಸೂಕ್ತ ನಿಲುವು ಪ್ರಕಟಿಸಲಿದ್ದಾರೆ.

ಅಂದಹಾಗೆ ಈ ವಿಧಾನಪರಿಷತ್ ನೇಮಕದ ಜೊತೆಗೆಯೇ ಮುಖ್ಯವಾಗಿ ಸಚಿವ ಸಂಪುಟದ ವಿಸ್ತರಣೆಯ ಬಗ್ಗೆಯೂ ಕೇಂದ್ರ ನಾಯಕತ್ವದಲ್ಲಿ ಚರ್ಚೆಯಾಗಿದೆ. ಇನ್ನೂ ಇಷ್ಟು ದಿನ ಶಾಂತರಾಗಿದ್ದ ಶಾಸಕರಲ್ಲಿ ಇದೀಗ ಈ ನಾಯಕರ ಭೇಟಿಯಿಂದ ಮಂತ್ರಿಗಿರಿಯ ಕನಸು ಚಿಗುರೊಡೆದಿದ್ದು, ಈ ಮೂಲಕ ಸಂಪುಟ ಸರ್ಜರಿಯ ವಿಚಾರ ಮತ್ತೆ ಮುನ್ನೆಲೆಗೆ ಬಂದಂತಾಗಿದೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಸಮೀಪಿಸುತ್ತಿವೆ. ಸಚಿವ ಸಂಪುಟದಲ್ಲಿ ಯಾರನ್ನು ಉಳಿಸಿಕೊಳ್ಳಬೇಕು? ಯಾರನ್ನು ಕೈಬಿಡಬೇಕು ಎಂಬ ಬಗ್ಗೆಯೂ ಸುದೀರ್ಘ ಸಮಾಲೋಚನೆ ನಡೆದಿದೆ. ಏಪ್ರಿಲ್‌ನಲ್ಲಿ 5-6 ಸಚಿವರಿಗೆ ಸಿದ್ದರಾಮಯ್ಯ ಸಂಪುಟದಿಂದ ಕೊಕ್‌ ನೀಡುವ ಸಾಧ್ಯತೆಯಿದ್ದು, ಈ ಹಿನ್ನೆಲೆಯಲ್ಲಿ ಅವಕಾಶವಂಚಿತರಿಗೆ ಕ್ಯಾಬಿನೆಟ್‌ನಲ್ಲಿ ಸ್ಥಾನ ಕಲ್ಪಿಸುವ ಕುರಿತು ಮಹತ್ವದ ಮಾತುಕತೆಗೆ ದೆಹಲಿಗೆ ಬರುವಂತೆ ಕೇಂದ್ರ ನಾಯಕತ್ವ ಸಿದ್ದರಾಮಯ್ಯ ಅವರಿಗೆ ಬುಲಾವ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರ ಸಿಎಂ ದೆಹಲಿಗೆ ತೆರಳಲಿದ್ದಾರೆ.

ಇನ್ನೂ ಈಗಾಗಲೇ ಸರ್ಕಾರದಲ್ಲಿ ಸಚಿವರಾಗಿರುವ ಕೆಲವು ಜನರ ಬಗ್ಗೆ ಆಕ್ಷೇಪಗಳು ಕೇಳಿ ಬಂದಿವೆ. ಪ್ರಮುಖವಾಗಿ ತಮ್ಮ ಇಲಾಖೆಗಳಲ್ಲಿ ಕಳಪೆ ಸಾಧನೆ ತೋರಿರುವುದು, ಜನರ ಹಾಗೂ ಶಾಸಕರ ಕೈಗೆ ಸಿಗದಿರುವ ಸಚಿವರನ್ನು ಗುರುತಿಸುವ ಕಾರ್ಯ ನಡೆಯಲಿದೆ. ಎಲ್ಲ ಕಡೆಗಳಿಂದಲೂ ಸಚಿವರ ಕುರಿತು ಅಳೆದು-ತೂಗಿ ಮೌಲ್ಯ ಮಾಪನ ಮಾಡಿದ ಬಳಿಕ ಕೈ ಬಿಡುವ ಹಾಗೂ ಸೇರ್ಪಡೆ ಪ್ರಕ್ರಿಯೆಗಳಿಗೆ ಚಾಲನೆ ದೊರೆಯಲಿದೆ. ಅಲ್ಲದೆ ಈ ವಿಚಾರವೂ ಸಹ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಬಣಗಳ ಮುಸುಕಿನ ಗುದ್ದಾಟಕ್ಕೆ ಕಾರಣವಾಗಲಿದೆ ಎನ್ನಲಾಗಿದೆ. ಯಾಕೆಂದರೆ ಈಗಾಗಲೇ ಎರಡೂ ಬಣದ ಶಾಸಕರು ಮಂತ್ರಿಗಿರಿಯ ಇಂಗಿತ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿಗೆ ನೂತನ ಅಧ್ಯಕ್ಷ ಯಾರು..?

ಇನ್ನೂ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ತ್ಯಜಿಸುವ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ ಹಿನ್ನೆಲೆಯಲ್ಲಿ ಮುಂದಿನ ಬೆಳವಣಿಗೆಗಳನ್ನು ನಾಯಕರು ಸೂಕ್ಷ್ಮವಾಗಿ ಅವಲೋಕಿಸಿದ್ದಾರೆ. ಅಲ್ಲದೆ ಇದರ ಬಗ್ಗೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಒತ್ತಾಯಗಳು ಕೇಳಿ ಬರುತ್ತಿರುವೆ. ಈ ವಿಚಾರದಲ್ಲೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗಿನ ಸಿದ್ದರಾಮಯ್ಯರ ಈ ಮಾತುಕತೆಯು ಮಹತ್ವ ಪಡೆದುಕೊಂಡಿದೆ. ಪ್ರಮುಖವಾಗಿ ಒಂದು ವೇಳೆ ಹುದ್ದೆಯ ಬದಲಾವಣೆಯಾದರೆ ಆ ಜಾಗದಲ್ಲಿ ಲಿಂಗಾಯತರನ್ನು ಅಥವಾ ಹಿಂದುಳಿದ ವರ್ಗಕ್ಕೆ ಸೇರಿರುವವರನ್ನು ಕೂರಿಸುವುದು ಪಕ್ಷಕ್ಕೆ ಲಾಭವಾಗಲಿದೆ ಎಂಬ ಸಲಹೆಯನ್ನು ಸಿದ್ದರಾಮಯ್ಯ ಖರ್ಗೆ ಅವರಿಗೆ ನೀಡಿದ್ದಾರೆ. ಅಲ್ಲದೆ ಇದು ಕೇವಲ ಸಲಹೆ ಅಷ್ಟೇ ಅಲ್ಲ, ನೀವೂ ಸಹ ಈ ರಾಜ್ಯದವರೇ ಆಗಿರುವುದರಿಂದ ಅಂತಿಮ ನಿರ್ಧಾರವು ನಿಮ್ಮದೇ ಆಗಿರಲಿದೆ ಎಂದು ಅವರು ಖರ್ಗೆ ಅವರಿಗೆ ತಿಳಿಸಿದ್ದಾರೆ.

ಅಂದಹಾಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ 100 ಕಚೇರಿಗಳ ಶಂಕುಸ್ಥಾಪನೆ ಬಳಿಕ ತಾವೇ ಸ್ವಯಂ ಪ್ರೇರಿತರಾಗಿ ಹೊಣೆಗಾರಿಕೆ ಬೇರೆಯವರಿಗೆ ಬಿಟ್ಟುಕೊಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಹಿರಂಗ ಹೇಳಿಕೆಯನ್ನು ಕೆಲ ದಿನಗಳ ಹಿಂದಷ್ಟೇ ನೀಡಿದ್ದರು. ಅಲ್ಲದೆ ದೆಹಲಿಯಲ್ಲಿ ವರಿಷ್ಠರ ಭೇಟಿ ವೇಳೆಯೂ ಜಿಲ್ಲಾ ಪಂಚಾಯತ್., ತಾಲೂಕಾ .ಪಂಚಾಯತ್ ಚುನಾವಣೆಗಳ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಟ್ಟುಕೊಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ರಾಜ್ಯದಲ್ಲಿ ಒಂದಲ್ಲಾ ಒಂದು ರೀತಿ ಚರ್ಚೆಗೆ ಬರುತ್ತಿದೆ.

ಇದೊಂದು ಸೌಜನ್ಯಯುತ ಭೇಟಿ ಎಂದ ಖರ್ಗೆ..

ಇನ್ನೂ ಸಿಎಂ ಸಿದ್ದರಾಮಯ್ಯ ಭೇಟಿಯ ಕುರಿತು ಪ್ರತಿಕ್ರಿಯಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಅವರು ನಮ್ಮ ಮನೆಗೆ ಬರುವುದಾಗಿ ಹೇಳಿದ್ದರು. ಆಗ ನಾನೇ ಆರೋಗ್ಯ ವಿಚಾರಿಸಲು ಬರುತ್ತೇನೆ ಎಂದಿದ್ದೆ. ಈಗ ಆರೋಗ್ಯ ವಿಚಾರಿಸಲು ಭೇಟಿ ಮಾಡಿದ್ದು ಇದು ಸೌಜನ್ಯದ ಭೇಟಿ ಅಷ್ಟೇ. ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಹಿನ್ನೆಲೆ ಸಂಭ್ರಮಾಚರಣೆ ಮತ್ತಿತರ ವಿಚಾರಗಳ ಬಗ್ಗೆ ಚರ್ಚಿಸಲು ಅವರೇ ದೆಹಲಿಗೆ ಬರುತ್ತೇನೆ ಎಂದು ಹೇಳಿದ್ದಾರೆ. ಅವುಗಳ ಬಗ್ಗೆ ಅಲ್ಲೇ ಚರ್ಚೆ ಮಾಡುತ್ತೇವೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದ ಕೆಲವು ಮಹತ್ವದ ಬೆಳವಣಿಗೆಗಳನ್ನು ದೆಹಲಿಗೆ ರವಾನಿಸಿದ್ದಾರೆ. ಹಲವು ದಿನಗಳಿಂದ ಭಾರೀ ಚರ್ಚೆಯಲ್ಲಿದ್ದ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಬದಲಾವಣೆಯ ಕುರಿತು ಅಂತಿಮವಾಗಿ ನಾಯಕರು ತಮ್ಮ ನಿಲುವನ್ನು ಹೊರಹಾಕಿದ್ದಾರೆ.

ಒಟ್ನಲ್ಲಿ.. ಹಲವು ದಿನಗಳಿಂದ ಎದುರು ನೋಡುತ್ತಿದ್ದ ಸಚಿವ ಸಂಪುಟದ ವಿಸ್ತರಣೆಗೆ ಅಂತೂ ಕಾಲ ಕೂಡಿ ಬಂದಿದ್ದು, ಆಕಾಂಕ್ಷಿಗಳ ಪಟ್ಟಿಯು ಇನ್ನಷ್ಟು ಉದ್ದವಾಗಲಿದೆ. ಅಲ್ಲದೆ ಪ್ರಮುಖವಾಗಿ ಸಂಕಷ್ಟದ ಕಾಲದಲ್ಲಿ ತಮ್ಮ ಬೆನ್ನಿಗೆ ನಿಂತಿರುವ ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಒಂದು ಕಡೆ ಸಿದ್ದರಾಮಯ್ಯ ಉತ್ಸುಕರಾಗಿದ್ದರೆ, ಇನ್ನೊಂದೆಡೆ ಡಿಕೆ ಶಿವಕುಮಾರ್‌ ಅವರೂ ಸಹ ತಮ್ಮ ಬೆಂಬಲಿಗ ಶಾಸಕರನ್ನು ಮಂತ್ರಿ ಮಾಡುವ ತವಕಲಿದ್ದಾರೆ. ಹೀಗಾಗಿ ಈ ಸಂಪುಟ ವಿಸ್ತರಣೆಯಲ್ಲೂ ಕೂಡ ಅಸಮಾಧಾನದ ಹೊಗೆಯಾಡುವ ಲಕ್ಷಣಗಳು ಕಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಸಿಎಂ ಹಾಗೂ ಡಿಸಿಎಂ ಇಬ್ಬರಿಗೂ ಸಂಪುಟ ಸರ್ಜರಿಯ ಟೆನ್ಷನ್‌ ಶುರುವಾಗಿದೆ. ಅದೇನೆ ಇರಲಿ.. ಮಂಡಿನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ನೆಪದಲ್ಲಿ ಖರ್ಗೆ ನಡೆಸಿರುವ ಈ ಮಹತ್ವದ ಮಾತುಕತೆಯು ಕಾಂಗ್ರೆಸ್‌ ವಲಯದಲ್ಲಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದ್ದು ಸುಳ್ಳಲ್ಲ.. ಗ್ಯಾರಂಟಿ ಬಲದ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರದ ಮೊದಲ ಸಂಪುಟ ವಿಸ್ತರಣೆಯಲ್ಲಿ ಯಾರು ಇನ್‌? ಹಾಗೂ ಯಾರು ಔಟ್‌ ಆಗುತ್ತಾರೆ ಅನ್ನೋದು ಸದ್ಯ ಮಂತ್ರಿಗಳ ಚಿಂತೆಯಾಗಿರುವುದನ್ನು ನಾವಿಲ್ಲಿ ಅಲ್ಲಗಳೆಯುವಂತಿಲ್ಲ. ಈ ಎಲ್ಲದಕ್ಕೆ ಶೀಘ್ರದಲ್ಲೇ ನಡೆಯಲಿರುವ ಸಂಪುಟ ಸರ್ಜರಿಯೇ ಉತ್ತರವಾಗಲಿದೆ.

- Advertisement -

Latest Posts

Don't Miss