Political News: ಬೆಂಗಳೂರಿನಲ್ಲಿಂದು ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೇ ಸಿಂಹಪಾಾಲು ಎಂದಿದ್ದಾರೆ.
ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಬೆಂಗಳೂರು ಮೆಟ್ರೋ ರೈಲು ಅನ್ನು ಪ್ರಾರಂಭ ಮಾಡಿದರು. ಮೆಟ್ರೋ ರೈಲು ಯೋಜನೆಯ ವೆಚ್ಚದಲ್ಲಿ ಶೇ.50 ರಷ್ಟು ಕೇಂದ್ರ ಸರ್ಕಾರ ಮತ್ತು ಶೇ.50 ರಷ್ಟು ರಾಜ್ಯ ಸರ್ಕಾರ ಒದಗಿಸಬೇಕು ಎಂಬುದು ಒಪ್ಪಂದ. ಆದರೆ, ರಾಜ್ಯ ಸರ್ಕಾರವೇ ಹೆಚ್ಚು ಅನುದಾನ ಖರ್ಚು ಮಾಡುತ್ತಿದೆ ಎಂದು ಸಿಎಂ ಹೇಳಿದ್ದಾರೆ.
ಬೆಂಗಳೂರು ಮೆಟ್ರೋ ಜಾಲವು ಈಗ 96.10 ಕಿ.ಮೀ. ನಷ್ಟು ಉದ್ದವಿದೆ. ಇದಕ್ಕೆ ರಾಜ್ಯ ಸರ್ಕಾರವು ₹25,387 ಕೋಟಿ ವೆಚ್ಚ ಮಾಡಿದ್ದರೆ, ಕೇಂದ್ರ ಸರ್ಕಾರ ಖರ್ಚು ಮಾಡಿರುವುದು ₹7,468 ಕೋಟಿ ಮಾತ್ರ. ಹೀಗಾಗಿ ಮೆಟ್ರೋ ಯೋಜನೆಯಲ್ಲಿ ರಾಜ್ಯ ಸರ್ಕಾರದ್ದೇ ಸಿಂಹಪಾಲು. ಮೆಟ್ರೋ ಯೋಜನೆಗೆ ಕೇಂದ್ರವು ನೀಡಿದ್ದ ಸಾಲದಲ್ಲಿ ₹3,987 ಕೋಟಿಯಷ್ಟನ್ನು ಬಡ್ಡಿಯ ಸಮೇತ ಈಗಾಗಲೇ ನಾವು ವಾಪಸ್ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
19.15 ಕಿ.ಮೀ. ಉದ್ದದ ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಯಾಗಿದ್ದು, ಇದಕ್ಕೆ ತಗುಲಿರುವ ವೆಚ್ಚ 7,160 ಕೋಟಿ ರೂಪಾಯಿ. ಹಳದಿ ಮೆಟ್ರೋ ಪ್ರಾರಂಭದಿಂದ ಪ್ರತಿನಿತ್ಯ ಮೂರೂವರೆ ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈಗ ಸರಾಸರಿ 9 ಲಕ್ಷ ಮಂದಿ ಪ್ರತಿನಿತ್ಯ ಮೆಟ್ರೋ ಬಳಸುತ್ತಿದ್ದಾರೆ. ಹಳದಿ ಮಾರ್ಗವೂ ಸೇರಿ ಇನ್ನು ಮುಂದೆ ದಿನನಿತ್ಯದ ಸರಾಸರಿ ಪ್ರಯಾಣಿಕರ ಸಂಖ್ಯೆ 12 ಲಕ್ಷ ಆಗಲಿದೆ ಎಂದು ಸಿಎಂ ಹೇಳಿದರು.
ಮೆಟ್ರೋ 3ಎ ಹಂತದ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದೆ. ಅದಕ್ಕೆ ತ್ವರಿತವಾಗಿ ಅನುಮತಿ ನೀಡಬೇಕು ಮತ್ತು ಪ್ರಧಾನಿಯವರು ಅಗತ್ಯ ನೆರವು ಒದಗಿಸಬೇಕು. 2030ರ ವೇಳೆಗೆ ನಗರದ ಮೆಟ್ರೋ ಜಾಲವನ್ನು 220 ಕಿ.ಮೀ.ಗೆ ವಿಸ್ತರಿಸುವ ಗುರಿ ಹಾಕಿಕೊಳ್ಳಲಾಗಿದೆ. ಅದು ಅನುಷ್ಟಾನಕ್ಕೆ ಬಂದರೆ ದಿನನಿತ್ಯದ ಪ್ರಯಾಣಿಕರ ಸಂಖ್ಯೆ 30 ಲಕ್ಷ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.