Political News: ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಬಹುಮತದಿಂದ ಅಂಗೀಕಾರಗೊಂಡು ರಾಷ್ಟ್ರಪತಿಗಳ ಅಂಕಿತ ಪಡೆದಿರುವ ವಕ್ಫ್ ತಿದ್ದುಪಡಿ ಮಸೂದೆಗೆ ಒಂದಿಲ್ಲೊಂದು ಸಂಕಟಗಳು ಎದುರಾಗುತ್ತಿವೆ. ಉಭಯ ಸದನಗಳಲ್ಲಿ ಮಂಡನೆಯಾಗಿದ್ದ ಬಳಿಕ ಸಾಕಷ್ಟು ವಿರೋಧಗಳನ್ನು ಅನುಭವಿಸಿದ್ದ ಬಿಲ್‌ಗೆ ಈಗ ಅಡ್ಡಿ ಆತಂಕಗಳು ಬಂದೊದಗುತ್ತಿವೆ. ಮಸೂದೆ ಎರಡೂ ಸದನಗಳಲ್ಲೂ ಪಾಸ್ ಆದ ಬಳಿಕ ಭಾರೀ ಆಕ್ರೋಶ ವ್ಯಕ್ತಪಡಿಸಿದ ವಿಪಕ್ಷಗಳು ಇದನ್ನು ಪ್ರಶ್ನಿಸಿ ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಅಲ್ಲದೆ ಈ ಕುರಿತು ದಾಖಲಾಗಿರುವ ಅರ್ಜಿಗಳ ವಿಚಾರಣೆಗೂ ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿಸಿರುವುದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ.
ವಿಚಾರಣೆಗೆ ಪಟ್ಟಿ ಮಾಡುತ್ತೇವೆ..
ಇನ್ನೂ ಸೋಮವಾರ ನ್ಯಾಯಾಲಯದಲ್ಲಿ ಈ ಬಗ್ಗೆ ದಾಖಲಾಗಿರುವ ಅರ್ಜಿಗಳನ್ನು ತುರ್ತು ವಿಚಾರಣೆಗೆ ಪಟ್ಟಿ ಮಾಡಬೇಕು ಎಂದು ಜಮೀಯತ್-ಐ-ಹಿಂದ್ ಪರ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಮಾಡಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಸಂಜಯ್ ಖನ್ನಾ ನೇತೃತ್ವದ ನ್ಯಾಯಪೀಠವು ಗಣನೆಗೆ ತೆಗೆದುಕೊಂಡಿತು. ಇವಲ್ಲದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಅರ್ಜಿಗಳು ಬಂದಿವೆ ಎಂದು ಕೋರ್ಟ್ ಗಮನಕ್ಕೆ ಅವರು ತಂದಿದ್ದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ್ದ ನ್ಯಾಯಮೂರ್ತಿಗಳು ನಾವು ಎಲ್ಲ ಪತ್ರಗಳನ್ನು ಪರಿಶೀಲಿಸುತ್ತೇವೆ, ಅವುಗಳ ಪಟ್ಟಿ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಕೋರ್ಟ್ ಮೆಟ್ಟಿಲೇರಿದ್ದ ಓವೈಸಿ..
ಅಲ್ಲದೆ ಈ ವಕ್ಫ್ ಮಸೂದೆಯ ವಿರೋಧವಾಗಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಕಾಂಗ್ರೆಸ್ ಸಂಸದ ಮೊಹಮ್ಮದ್ ಜಾವೇದ್ ಮತ್ತುಎಎಪಿ ಶಾಸಕ ಅಮಾನತುಲ್ಲಾ ಖಾನ್ ಸೇರಿದಂತೆ ಹಲವರು ಸುಪ್ರೀಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅಂದಹಾಗೆ ಜಮೀಯತ್ ಉಲೆಮಾ ಎ ಹಿಂದ್ ಹಾಗೂ ಅಸೋಸಿಯೇಷನ್ ಫಾರ್ ದಿ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಸೇರಿದಂತೆ ಅನೇಕ ಸಂಘಟನೆಗಳೂ ತಕರಾರು ಅರ್ಜಿ ದಾಖಲಿಸಿವೆ. ಇವುಗಳ ವಿಚಾರಣೆ ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿರುವುದು ವಿಪಕ್ಷಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.