Political News: ಕಾಂಗ್ರೆಸ್ ಭಂಡತನವನ್ನು ನಾವು ಸಂಸದೀಯ ವ್ಯವಸ್ಥೆಯಲ್ಲೇ ಭೇದಿಸಿ, ಬಗ್ಗಿಸಿದ್ದೇವೆ: ಸುನೀಲ್ ಕುಮಾರ್

Political News: ವಾಲ್ಮೀಕಿ ಹಗರಣದ ಆರೋಪದ ಹಿನ್ನೆಲೆಯಲ್ಲಿ ಬಿ.ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಸರ್ಕಾರದ ನಡೆಗೆ ತೀವ್ರ ಟೀಕೆ ನಡೆಸಿದ್ದಾರೆ.

ವಾಲ್ಮೀಕಿ ಅಭಿವೃದ್ಧಿ‌ ನಿಗಮದಲ್ಲಿ ನಡೆದ ಹಗರಣದ ಆರೋಪಿ ಬಿ.ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕೆಂದು ಭಾರತೀಯ ಜನತಾ ಪಕ್ಷ ಸದನದಲ್ಲಿ‌ ನಡೆಸಿದ ನಿರಂತರ‌ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಪರಿಶಿಷ್ಟ ಪಂಗಡದ ಹಣ‌ ನುಂಗಿದ ನಾಗೇಂದ್ರ ಈಗ ತಾನು ದಲಿತ ಎಂಬ ಕಾರಣ ನೀಡಿ ತನಿಖೆಯಿಂದ, ನ್ಯಾಯಾಲಯದ ಆದೇಶದಿಂದ ತಪ್ಪಿಸಿಕೊಳ್ಳುವುದನ್ನು ಸಂವಿಧಾನ ಒಪ್ಪದು ಎಂದು ಸುನೀಲ್ ಕುಮಾರ್ ಕಿಡಿಕಾರಿದ್ದಾರೆ.

ಹಗರಣದ ಹೊಣೆ ಹೊತ್ತು ಈ ಹಿಂದೆ ರಾಜೀನಾಮೆ ನೀಡಿದ್ದ ಬಿ. ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿದ್ದು ಕಾಂಗ್ರೆಸ್ ಹೈಕಮಾಂಡ್ ಮಾತ್ರವಲ್ಲ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಭಂಡತನಕ್ಕೆ ಸಾಕ್ಷಿಯಾಗಿತ್ತು. ಆ ಭಂಡತನವನ್ನು ನಾವು ಸಂಸದೀಯ ವ್ಯವಸ್ಥೆಯಲ್ಲೇ ಭೇದಿಸಿ, ಬಗ್ಗಿಸಿದ್ದೇವೆ.

ಭ್ರಷ್ಟಾಚಾರದ ಬಗ್ಗೆ ‘ಶೂನ್ಯ ಸಹಿಷ್ಣುತೆ’ ಎಂದ‌‌ ಸಿಎಂ ಡಿ.ಕೆ.ಶಿವಕುಮಾರ್ ಅವರು, ಭ್ರಷ್ಟ ನಾಗೇಂದ್ರನನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇ ಇನ್ನೊಂದು ದೊಡ್ಡ ಭ್ರಷ್ಟಾಚಾರವಾಗಿತ್ತು. ಜನರ ಹಣಕ್ಕೆ ಲೆಕ್ಕ ಕೇಳುವ ಬದಲು, ಆರೋಪ ಹೊತ್ತವರಿಗೇ ಅಧಿಕಾರದ ರಕ್ಷಾಕವಚ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂಬುದು ಅರಿವಾಗುತ್ತದ್ದಂತೆ ನಾಗೇಂದ್ರ ರಾಜೀನಾಮೆ ಪಡೆದು ಕಾಂಗ್ರೆಸ್ ಮುಖ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದೆ ಎಂದು ಸುನೀಲ್ ಕುಮಾರ್ ವ್ಯಂಗ್ಯವಾಡಿದ್ದಾರೆ.

ನಾವು ಸದನದಲ್ಲಿ ಮೊದಲ ದಿನ ಈ ವಿಚಾರ ಪ್ರಸ್ತಾಪಿಸಿದಾಗಲೇ ನಾಗೇಂದ್ರ ರಾಜೀನಾಮೆ ಕೊಟ್ಟಿದ್ದರೆ, ಬರ, ಕೆಪಿಎಸ್ ಸಿ ಸೇರಿದಂತೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸುವುದಕ್ಕೆ ಅವಕಾಶವಾಗುತ್ತಿತ್ತು. ಆದರೆ ಸರ್ಕಾರ ಹರಿಬಿರಿಯಲ್ಲಿ ಕಲಾಪ ಮೊಟಕುಗಳಿಸಿ ಚರ್ಚೆಯಿಂದ ತಪ್ಪಿಸಿಕೊಂಡಿತು. ಭ್ರಷ್ಟರ ಪೋಷಣೆಗೆ ಕಾಂಗ್ರೆಸ್ ಕಲಾಪ ನುಂಗಿದ್ದನ್ನು ಜನ ಕ್ಷಮಿಸುವುದಿಲ್ಲ ಎಂದು ಸುನೀಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author