Saturday, April 19, 2025

Latest Posts

Political News: ವಿಜಯೇಂದ್ರ ನಂತರ ಯಾರಾಗ್ತಾರೆ ಅಧ್ಯಕ್ಷ..? : ನಡ್ಡಾ ಬಳಿಕ ಇವರಿಗೆ ಹೊಣೆ..?

- Advertisement -

Political News: ಬಿಜೆಪಿಯು ತನ್ನ ನೂತನ ರಾಷ್ಟ್ರೀಯ ಅಧ್ಯಕ್ಷರ ಅಯ್ಕೆಯ ಪ್ರಕ್ರಿಯೆಗೆ ಶೀಘ್ರದಲ್ಲೇ ಚಾಲನೆ ನೀಡಲಿದೆ. ಆದರೆ ಅದರ ಮೊದಲ ಭಾಗವಾಗಿ ಎಲ್ಲ ರಾಜ್ಯಗಳ ಅಧ್ಯಕ್ಷರನ್ನು ನೇಮಕ ಮಾಡುವ ಕಾರ್ಯವನ್ನು ಮುಂದುವರೆಸಿದೆ. ಈ ಮೂಲಕ ಕೇಂದ್ರ ಸಚಿವ ಜೆ.ಪಿ. ನಡ್ಡಾ ಬಳಿಕ ಮುಂದೆ ಯಾರು ಎಂಬ ಪ್ರಶ್ನೆಗೆ ಆದಷ್ಟು ಬೇಗನೇ ಉತ್ತರಿಸಲು ಬಿಜೆಪಿ ಹೈಕಮಾಂಡ್‌ ಮುಂದಾಗಿದೆ.

ಇನ್ನೂ ಪಕ್ಷದಲ್ಲಿನ ಹುದ್ದೆಗಳ ನೇಮಕಕ್ಕೆ ಸಂಬಂಧಿಸಿದ್ದಂತೆ ಕೆಲ ಪ್ರಮುಖ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರನ್ನು ಅಂತಿಮಗೊಳಿಸುವ ನಿಟ್ಟನಲ್ಲಿ ಬಿಜೆಪಿ ಹೈಕಮಾಂಡ್‌ ಉನ್ನತ ಮಟ್ಟದ ನಾಯಕರು ಸಭೆ ನಡೆಸಿದ್ದಾರೆ. ಅಲ್ಲದೆ ಯಾವ್ಯಾವ ರಾಜ್ಯಕ್ಕೆ ಯಾರು ಸೂಕ್ತ ವ್ಯಕ್ತಿಯಾಗಬಹುದು..? ಹೊಸ ಮುಖಗಳಿಗೆ ಮಣೆ ಹಾಕಬೇಕಾ ಅಥವಾ ಪಕ್ಷದಲ್ಲಿನ ಹಿರಿಯರಿಗೆ ಜವಾಬ್ದಾರಿ ವಹಿಸಬೇಕಾ..? ಎನ್ನುವ ಕುರಿತು ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರಿದಂತೆ ಹಲವು ನಾಯಕರು ಮಹತ್ವದ ಚರ್ಚೆ ನಡೆಸಿದ್ದಾರೆ.

ಪ್ರಮುಖವಾಗಿ ಕರ್ನಾಟಕ, ಉತ್ತರ ಪ್ರದೇಶ, ಗುಜರಾತ್, ಮಧ್ಯಪ್ರದೇಶ, ಮತ್ತು ಒಡಿಶಾದಂತಹ ದೊಡ್ಡ ರಾಜ್ಯಗಳಿಗೆ ನೂತನ ರಾಜ್ಯಾಧ್ಯಕ್ಷರ ನೇಮಕದ ಕುರಿತು ಚರ್ಚೆನಡೆದಿದೆ. ಅಲ್ಲದೆ ಇದೇ ವಿಚಾರವಾಗಿ ಪಕ್ಷದ ಸೈದ್ದಾಂತಿಕ ಹಾಗೂ ಆರ್‌ಎಸ್‌ಎಸ್‌ ನಾಯಕರೊಂದಿಗೂ ಮಾತುಕತೆಯಾಗಿದೆ. ಇನ್ನೂ ಉಳಿದ ಪ್ರಮುಖ ರಾಜ್ಯಗಳ ರಾಜ್ಯಾಧ್ಯಕ್ಷರ ಹೆಸರುಗಳನ್ನು ಶೀಘ್ರದಲ್ಲೇ ಅಂತಿಮಗೊಳಿಸುವ ಸಾಧ್ಯತೆಯಿದೆ. ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ, ಬಿಜೆಪಿಯ ರಾಷ್ಟ್ರೀಯ ಚುನಾವಣಾ ಅಧಿಕಾರಿ ಮುಂದಿನ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ವೇಳಾಪಟ್ಟಿಯನ್ನು ಔಪಚಾರಿಕವಾಗಿ ಘೋಷಣೆ ಮಾಡಲಿದ್ದಾರೆ.

ಬಿಜೆಪಿ ಸಂವಿಧಾನ ಏನು ಹೇಳುತ್ತೆ..?

ಇನ್ನೂ ಬಿಜೆಪಿಯ ಆಂತರಿಕ ಸಂವಿಧಾನದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯಾಗಬೇಕಾದರೆ 37 ಸಂಘಟನಾ ರಾಜ್ಯಗಳಲ್ಲಿನ ಪೈಕಿ 19 ಘಟಕಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಿರಬೇಕಾಗುತ್ತದೆ. ಅಲ್ಲದೆ ಬಿಜೆಪಿಯು 15 ರಾಜ್ಯಗಳಿಗೆ ಈಗಾಗಲೇ ಅಧ್ಯಕ್ಷರನ್ನು ನೇಮಿಸಿದೆ. ಈ ಹಿನ್ನೆಲೆಯಲ್ಲಿ ಇನ್ನುಳಿದ ಅಧ್ಯಕ್ಷರನ್ನು ನೇಮಕ ಮಾಡಿಕೊಂಡ ಬಳಿಕವೇ ಬಿಜೆಪಿಯು ನೂತನ ರಾಷ್ಟ್ರೀಯ ಅಧ್ಯಕ್ಷರನ್ನು ಘೋಷಿಸಲಿದೆ.

ನಡ್ಡಾ ಬಳಿಕ ಯಾರು..?

ಇನ್ನೂ ನಡ್ಡಾ ಬಳಿಕ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಖಾತೆ ಸಚಿವ ಭೂಪೇಂದ್ರ ಯಾದವ್‌ ಹಾಗೂ ಕೇಂದ್ರ ನಗರಾಭಿವೃದ್ಧಿ ಮತ್ತು ವಸತಿ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಹೆಸರುಗಳು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿವೆ. ಆದರೆ ಖಟ್ಟರ್‌ ಪ್ರಧಾನಿ ನರೇಂದ್ರ ಮೋದಿಯವರೊಂದಿಗೂ ಆತ್ಮೀಯ ಒಡನಾಟ ಹೊಂದಿದ್ದಾರೆ. ಅಲ್ಲದೆ ಮೋದಿ ಹಾಗೂ ಅಮಿತ್‌ ಶಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇವರನ್ನೂ ಬಿಜೆಪಿಯು ಪರಿಗಣಿಸಬಹುದು. ಅಲ್ಲದೆ ಯಾದವ್‌ ಅವರೂ ಸಹ ಆರ್‌ಎಸ್‌ಎಸ್‌ ಹಿನ್ನೆಲೆಯಿಂದ ಬಂದವರಾಗಿದ್ದಾರೆ, ಪಕ್ಷದ ಸಂಘಟನೆಗಾಗಿ ದುಡಿದ ಅನುಭವ ಹೊಂದಿದ್ದಾರೆ. ಹೀಗಾಗಿ ಇವರ ಹೆಸರು ಕೇಳಿ ಬರುತ್ತಿದೆ.

ಮೂಲಗಳ ಪ್ರಕಾರ, ಈ ತಿಂಗಳ ಅಂತ್ಯದ ವೇಳೆಗೆ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಚುನಾವಣೆ ನಡೆಯಬಹುದು. ಹವಾಮಾನ ವೈಪರೀತ್ಯದಿಂದಾಗಿ ಜಮ್ಮುವಿಗೆ ನಿಗದಿಪಡಿಸಲಾಗಿದ್ದ ಭೇಟಿಯನ್ನು ಮುಂದೂಡಲಾಗಿದ್ದರಿಂದ, ಪ್ರಧಾನಿಯವರ ವೇಳಾಪಟ್ಟಿಯಲ್ಲಿ ಬದಲಾವಣೆಗಳ ಮಧ್ಯೆ ಆಂತರಿಕ ಬೆಳವಣಿಗೆಗಳು ಸಂಭವಿಸಿವೆ. ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಪ್ರಧಾನಿ ಮತ್ತು ರಾಷ್ಟ್ರಪತಿಗಳ ನಡುವಿನ ಇತ್ತೀಚಿನ ಸಭೆಯನ್ನು ನಿಯಮಿತ ಶಿಷ್ಟಾಚಾರ ಎಂದು ಹೇಳಲಾಗುತ್ತಿದೆ. ಪ್ರಮುಖವಾಗಿ ಈ ವರ್ಷಾಂತ್ಯಕ್ಕೆ ಬಿಹಾರ ಹಾಗೂ ಮುಂದಿನ ವರ್ಷ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದನೆಲ್ಲ ಗಮನದಲ್ಲಿಟ್ಟುಕೊಂಡು ಹೈಕಮಾಂಡ್‌ ಮಹತ್ವದ ನಿರ್ಧಾರಗಳನ್ನು ಮಾಡಲಿದೆ.

ವಿಜಯೇಂದ್ರ ಕಥೆ ಏನು..?

ಇನ್ನೂ ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ತಾತ್ಕಾಲಿಕ ಬ್ರೇಕ್‌ ಬಿದ್ದರೂ ಸಹ ಆಂತರಿಕವಾಗಿ ಅಧ್ಯಕ್ಷ ವಿಜಯೇಂದ್ರ ವಿರುದ್ಧ ರೆಬಲ್ ನಾಯಕರು ಕಿಡಿ ಕಾರುತ್ತಲೇ ಇದ್ದಾರೆ. ಅಲ್ಲದೆ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ ಬಳಿಕ ರಾಜ್ಯ ಬಿಜೆಪಿಯಲ್ಲಿನ ಚಟುವಟಿಕೆಗಳು ವೇಗ ಪಡೆದುಕೊಂಡಿವೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅನೇಕ ಪ್ರತಿಭಟನೆಗಳು ನಡೆಯುತ್ತಿವೆ. ಇದನ್ನೆಲ್ಲ ಹೈಕಮಾಂಡ್‌ ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಅಲ್ಲದೆ ವಿಜಯೇಂದ್ರ ಕಾರ್ಯವೈಖರಿಯೂ ಸಹ ದಿಲ್ಲಿ ನಾಯಕರಿಗೂ ಸಮಾಧಾನ ನೀಡಿದಂತಾಗಿದೆ.

ಈ ಬೆಳವಣಿಗೆಗಳ ಆಧಾರದ ಮೇಲೆ ರಾಜ್ಯ ಬಿಜೆಪಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಮಹತ್ವದ ತೀರ್ಮಾನಗಳು ಆಗುವ ಸಾಧ್ಯತೆಗಳಿದೆ. ಬಿ.ವೈ ವಿಜಯೇಂದ್ರ ಅವರನ್ನು ಬದಲಿಸಬೇಕು ಎನ್ನುವ ಒತ್ತಡಗಳಿದ್ದು, ಆದರೆ ಹೈಕಮಾಂಡ್ ವಿಜಯೇಂದ್ರ ಅವರನ್ನು ಮುಂದುವರೆಸುವ ಇರಾದೆಯಲ್ಲಿದೆ. ಒಂದು ವೇಳೆ ಬದಲಾವಣೆ ಮಾಡಿದರೆ ಯಡಿಯೂರಪ್ಪ ಹಾಗೂ ಲಿಂಗಾಯತ ಸಮಾಜ ಬೇಸರ ಹೊರ ಹಾಕಬಹುದು ಎನ್ನುವ ಅಳುಕು ಬಿಜೆಪಿಗಿದೆ. ಹೀಗಾಗಿ ರಾಜ್ಯ ಬಿಜೆಪಿ ವಿಚಾರದಲ್ಲಿ ಹೈಕಮಾಂಡ್‌ ಎಚ್ಚರಿಕೆಯ ಹೆಜ್ಜೆ ಇಡಲಿದೆ.

- Advertisement -

Latest Posts

Don't Miss