Political News: ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ವಿಚಾರಕ್ಕೆ ಯತ್ನಾಳ್- ಪ್ರಿಯಾಂಕ್ ವಾಗ್ವಾದ

Political News: “ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡೋರು ಸನಾತನ ಧರ್ಮದ ಮಹಿಳೆಯೇ ಆಗಿರಬೇಕು, ಸಾಮಾನ್ಯ ದಲಿತ ಮಹಿಳೆಗೂ ಹಾಕಲಿಕ್ಕೆ ಅಧಿಕಾರ ಇಲ್ಲ” ಎಂದು ಬಿಜೆಪಿ ಉಚ್ಛಾಟಿತ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಹೇಳಿಕೆಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನುವಾದದ ಅಣಿಮುತ್ತುಗಳು ಯತ್ನಾಳರ ಬಾಯಿಯಿಂದ ಉದುರಿವೆ, ಇದು ಯತ್ನಾಳರ ಮಾತುಗಳಷ್ಟೇ ಅಲ್ಲ RSS ನ ಅಂತರಂಗದ ಧೋರಣೆ.ದಲಿತರಿಗೆ ಪುಷ್ಪಾರ್ಚನೆಗೆ ಅಧಿಕಾರವಿಲ್ಲ, ದಲಿತರಿಗೆ ನೀರು ಕುಡಿಯುವ ಅಧಿಕಾರವಿಲ್ಲ, ದಲಿತರಿಗೆ ಆಡಳಿತದ ಅಧಿಕಾರವಿಲ್ಲ, ದಲಿತರಿಗೆ ಶಿಕ್ಷಣ ಪಡೆಯುವ ಅಧಿಕಾರವಿಲ್ಲ, ದಲಿತರಿಗೆ ವ್ಯವಹಾರ ನಡೆಸುವ ಅಧಿಕಾರವಿಲ್ಲ, ದಲಿಗರಿಗೆ ಬದುಕುವ ಅಧಿಕಾರವೂ ಇಲ್ಲ. ಇದು ಮನುವಾದಿಗಳ ಅಂತರಂಗ, ಬಹಿರಂಗ ಎಲ್ಲವೂ.. ಎಂದು ಪ್ರಿಯಾಂಕ್ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ.

ಅಲ್ಲದೇ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ..

ದಲಿತರು ಹಿಂದೂ ಧರ್ಮದ ವ್ಯಾಪ್ತಿಯೊಳಗಿಲ್ಲವೇ? – ಇದೇ ಧೋರಣೆಯಿಂದಲೇ ರಾಷ್ಟ್ರಪತಿಗಳಾದ ಶ್ರೀಮತಿ ದ್ರೌಪದಿ ಮುರ್ಮುರವರನ್ನು ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಿಂದ ಹೊರಗಿಟ್ಟಿದ್ದಲ್ಲವೇ?

– ಇದೇ ಧೋರಣೆಯಿಂದಲೇ ಮಾಜಿ ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರಿಗೆ ದೇವಾಲಯದ ಪ್ರವೇಶಕ್ಕೆ ನಿರಾಕರಿಸಿದ್ದಲ್ಲವೇ?

ಈ ಶೋಷಣೆಯ ಧೋರಣೆಗಾಗಿಯೇ ಅಲ್ಲವೇ ಬಾಬಾ ಸಾಹೇಬರು ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯುವುದಿಲ್ಲ ಎಂದಿದ್ದು?

ಬಾಬಾ ಸಾಹೇಬರ ಸಂವಿಧಾನದ ಕಾಲಘಟ್ಟದಲ್ಲೇ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ದಲಿತರ ಬಗ್ಗೆ ಈ ಪರಿ ತಿರಸ್ಕಾರವಿರುವಾಗ ಹಿಂದಿನ ವ್ಯವಸ್ಥೆ ದಲಿತರೆಡೆಗೆ ಇನ್ನೆಷ್ಟರ ಮಟ್ಟಿಗೆ ಕ್ರೂರವಾಗಿದ್ದಿರಬಹುದು.

ಸಾಮಾಜಿಕ ವ್ಯವಸ್ಥೆಯಲ್ಲಿ ಧಾರ್ಮಿಕ ಬಣ್ಣ ಲೇಪಿಸಿ ಒಂದು ವರ್ಗದ ಮನುಷ್ಯರನ್ನು ನಿಷ್ಕೃಷ್ಟವಾಗಿ ಕಾಣುತ್ತಿರುವಾಗ ಹಿಂದೂ ಧರ್ಮದಲ್ಲಿ ಯಾವ ಶ್ರೇಷ್ಠತೆಯನ್ನು ಹುಡುಕುತ್ತೀರಿ? ದಲಿತರನ್ನು ಹೊರಗಿಟ್ಟು ಅದ್ಯಾವ ಬಾಯಿಯಲ್ಲಿ ನಾವೆಲ್ಲ ಹಿಂದೂ ನಾವೆಲ್ಲ ಒಂದು ಎನ್ನುತ್ತಾರೆ?

ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ ಎಂದು ಶ್ರೀ ಸಿದ್ದರಾಮಯ್ಯನವರು ಹೇಳಿದಾಗ ಬಾಯಿ ಬಡಿದುಕೊಂಡಿದ್ದ ಬಿಜೆಪಿ ನಾಯಕರು ಯತ್ನಾಳರ ಮಾತಿಗೆ ಮೌನವಾಗಿರುವುದೇಕೆ? BJP ನಾಯಕರ ಕಣ್ಣು, ಕಿವಿ, ಬಾಯಿಗಳಿಗೆ ಬೀಗ ಹಾಕಿಕೊಂಡಿರುವುದೇಕೆ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಈ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಯತ್ನಾಳ್, ನೀವು ಒಬ್ಬ ಮೂರ್ಖನಿಗೆ ಶಿಕ್ಷಣ ನೀಡಬಹುದು, ಆದರೆ ಅವನನ್ನು ಯೋಚಿಸುವಂತೆ ಮಾಡಲು ಸಾಧ್ಯವಿಲ್ಲ.

ಕಾಂಗ್ರೆಸ್ ಪಕ್ಷದಲ್ಲಿ ಬುದ್ದಿಹೀನ ವಿಡಂಬನಕಾರರ ಸಾಲು ಎಂದಿಗೂ ಮುಗಿಯುವುದಿಲ್ಲ. ಕಾಂಗ್ರೆಸ್ ಪಕ್ಷದ ಕೆಲವು ಹಣ ಪಡೆಯುವ ಕುಚೇಷ್ಟೆಗಾರರು ತಮ್ಮ ಮೇಲಧಿಕಾರಿಗಳೊಂದಿಗೆ ಸೇರಿ ನಕಲಿ ವೀಡಿಯೊವನ್ನು ಚಿತ್ರಿಸುತ್ತಿದ್ದಾರೆ ಮತ್ತು ರಾಜಕೀಯ ಲಾಭ ಪಡೆಯಲು ಸುಳ್ಳು ಮಾಹಿತಿಯನ್ನು ಹರಡುತ್ತಿದ್ದಾರೆ. ತಪ್ಪು ಮಾಹಿತಿಯ ವೈರಸ್ ಸತ್ಯಗಳನ್ನು ಬದಲಾಯಿಸಲು ಸಾಧ್ಯವಿಲ್ಲ.

ಒಬ್ಬ ವಂಚಕ ತನ್ನ ಗುಪ್ತ ಉದ್ದೇಶಗಳನ್ನು ಪ್ರಕಟಿಸಲು ಏನು ಬೇಕಾದರೂ ಮಾಡುತ್ತಾನೆ. ಈ ತಿರಸ್ಕಾರದ ವೈಯಕ್ತಿಕ ಹಾಸ್ಯಗಳು ಅವುಗಳನ್ನು ಮಾಡುವವರ ಮೇಲೆ ಕೆಟ್ಟದಾಗಿ ಪ್ರತಿಫಲಿಸುತ್ತವೆ. ನಕಲಿ ವೀಡಿಯೊ ಮತ್ತು ನಿಜವಾದ ವೀಡಿಯೊದ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದವರು ರಾಜಕೀಯ ಅಂಕಗಳನ್ನು ಗಳಿಸಲು ಇಂತಹ ವರ್ತನೆಗಳನ್ನು ಆಶ್ರಯಿಸುತ್ತಿದ್ದಾರೆ; ಆದಾಗ್ಯೂ, ಇದು ಅವರನ್ನು ಅತ್ಯಂತ ಮೂರ್ಖರನ್ನಾಗಿ ಮಾಡುತ್ತಿದೆ ಎಂದು ಹೇಳಿದ್ದಾರೆ.

About The Author