Political News: ಗೇಟ್‌ ಪಾಸ್‌ ಬಳಿಕ ಕೇಸರಿ ವಿರುದ್ಧ ಬೆಂಕಿಯುಂಡೆ ಉಗುಳಿದ ಯತ್ನಾಳ್‌

Political News: ಪಕ್ಷದ ಶಿಸ್ತನ್ನು ಉಲ್ಲಂಘಿಸಿದ ಬಳಿಕ ಬಿಜೆಪಿಯಿಂದ ವಿಜಯಪುರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಚಾಟನೆ ಮಾಡಲಾಗಿದೆ. ಈ ಬೆನ್ನಲ್ಲೇ ಅವರು ಯಾರ ಕೈಗೂ ಸಿಗುತ್ತಿಲ್ಲ, ದೆಹಲಿಯಿಂದ ನೇರವಾಗಿ ಕಲಬುರಗಿಯ ಚಿಂಚೋಳಿಯಲ್ಲಿರುವ ತಮ್ಮ ಕಾರ್ಖಾನೆಯ ಗೆಸ್ಟ್‌ಹೌಸ್‌ ನಲ್ಲಿರುವ ಮಾಹಿತಿ ಲಭ್ಯವಾಗಿದೆ. ಆದರೆ ನಿನ್ನೆ ಬಿಜೆಪಿಯಿಂದ ಅಧಿಕೃತವಾಗಿ ಗೇಟ್‌ ಪಾಸ್‌ ಆದೇಶ ಬಂದ ಬಳಿಕ ಮಾರ್ಮಿಕವಾಗಿ ಬಿಜೆಪಿಯನ್ನು ಕುಟುಕಿದ್ದ ಯತ್ನಾಳ್‌ ಇಂದೂ ಕೇಸರಿ ನಾಯಕರ‌ ವಿರುದ್ಧ ಗುಡುಗಿದ್ದಾರೆ.

ಇನ್ನೂ ಕೆಲ ರಾಜಕೀಯ ಪಟ್ಟಭದ್ರರು, ಅಡ್ಜಸ್ಟ್ಮೆಂಟ್ ರಾಜಕಾರಣದ ಹರಿಕಾರರಿಂದ ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ತೀವ್ರ ಹಿನ್ನಡೆಯಾಯಿತು. ಕಲಬುರಗಿ, ರಾಯಚೂರು, ಬಳ್ಳಾರಿ ಹಾಗೂ ಚಿಕ್ಕೋಡಿಯಲ್ಲಿ ಆದ ಸೋಲಿನ ಪರಾಮರ್ಶೆಯನ್ನು ಹೈ ಕಮಾಂಡ್ ಮಾಡದೆ ಇರುವುದು ಕಲ್ಯಾಣ ಕರ್ನಾಟಕದಲ್ಲಿ ಪಕ್ಷದ ಅವನತಿಗೆ ಕಾರಣವಾಗಿದೆ. ಅಲ್ಲದೆ ಕಾರ್ಯಕರ್ತರ ಪಕ್ಷ ಎಂದು ಹೆಸರುವಾಸಿಯಾಗಿದ್ದ ಭಾರತೀಯ ಜನತಾ ಪಕ್ಷ ಈಗ ಕುಟುಂಬ ರಾಜಕಾರಣದಲ್ಲಿ ಮುಳುಗಿರುವುದು ವಿಷಾದನೀಯ ಎಂದು ತಿವಿದಿದ್ದಾರೆ.

ಉತ್ತರ ಕರ್ನಾಟಕದ ನಾಯಕನ ಗೇಟ್‌ಪಾಸ್‌ ಬಿಜೆಪಿಯ ದ್ವಂದ್ವ..!

ಅಂದಹಾಗೆ ಪಕ್ಷದ ವಿರುದ್ದ ಬಹಿರಂಗವಾಗಿ ಮಾತನಾಡಿ ಹಾಗೂ ಆಡಳಿತಾರೂಢ ಪಕ್ಷದ ಸಭೆಯಲ್ಲಿ ಭಾಗವಹಿಸುತ್ತಿದ್ದ ಶಾಸಕರ ಉಚ್ಚಾಟನೆ ಮಾಡದೆ ಉತ್ತರ ಕರ್ನಾಟಕದ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಟೊಂಕಕಟ್ಟಿ ಕೆಲಸ ಮಾಡಿದ ನನ್ನಂತವರಿಗೆ ಉಚ್ಚಾಟನೆ ಮಾಡುವುದು ಪಕ್ಷದ ದ್ವಂದ್ವ ನೀತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಸಧೃಡವಾಗಿದ್ದ ಪಕ್ಷ ಲೋಕಸಭಾ ಚುನಾವಣೆಯಲ್ಲಿ ಮಕಾಡೆ ಮಲಗಿದ್ದು ಯಾರ ‘ಅಡ್ಜಸ್ಟ್ಮೆಂಟ್ ರಾಜಕಾರಣದಿಂದ’ ಎಂದು ಪಕ್ಷದ ಪ್ರಮುಖರು ವಿಶ್ಲೇಷಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಮಾಣಿಕ್ಯ ಡಾ.ವಿ.ಎಸ್‌ ಆಚಾರ್ಯ ಯಾವತ್ತೂ ಕುಟುಂಬ ರಾಜಕೀಯ ಮಾಡಿಲ್ಲ..

ಅಲ್ಲದೆ ಪ್ರಮುಖವಾಗಿ ಬಿ.ಬಿ.ಶಿವಪ್ಪ, ಮಲ್ಲಿಕಾರ್ಜುನಪ್ಪ ಹಾಗೂ ಡಾ. ವಿ.ಎಸ್.ಆಚಾರ್ಯರು ಸೇರಿದಂತೆ ಪಕ್ಷದ ಅನೇಕ ಧುರೀಣರು, ಸಾವಿರಾರು ಕಾರ್ಯಕರ್ತರು ಪಕ್ಷವನ್ನು ಸಂಘಟಿಸಿದ್ದಾರೆ. ಇದರ ಪರಿಣಾಮದಿಂದಲೇ ಪಕ್ಷವು ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದ್ದು. ಬಿಡಿಗಾಸಿಲ್ಲದೇ, ಕಾರ್ಯಕರ್ತರ ಓಡಾಟ, ಉಪಹಾರಕ್ಕೂ ಹಣವಿಲ್ಲದಿರುವ ಕಾಲಘಟ್ಟದಲ್ಲಿ ದಿವಂಗತ ಮಲ್ಲಿಕಾರ್ಜುನಪ್ಪನವರು ತಮ್ಮ ಸ್ವಂತ ಸಂಪನ್ಮೂಲದಿಂದ ಪಕ್ಷವನ್ನು ಮುನ್ನಡೆಸಿ ಕಾರ್ಯಕರ್ತರ ಮನೋಬಲವನ್ನು ಹೆಚ್ಚಿಸಿ ಸಂಘಟನೆಗೆ ಕಾರಣವಾಗಿದ್ದರು. ಇನ್ನೂ ಮಾತು ಕಡಿಮೆಯಾದರೂ ತಮ್ಮ ಕೆಲಸದಿಂದ ಕರಾವಳಿಯಲ್ಲಿ ಪಕ್ಷವನ್ನು ಸಂಘಟಿಸಿದ್ದು , ಪಕ್ಷವು ಮರೆಯಲಾಗದ ಮಾಣಿಕ್ಯ ಡಾ. ವಿ.ಎಸ್.ಆಚಾರ್ಯರು. ಆಯಕಟ್ಟಿನ ಸ್ಥಾನದಲ್ಲಿದ್ದರೂ ಅವರ ಕುಟುಂಬದವರು ಯಾರೂ ಸಹ ರಾಜಕಾರಣಕ್ಕೆ ಬರಲಿಲ್ಲ ಎಂಬುದು ಹಲವರಿಗೆ ಗೊತ್ತಿಲ್ಲ ಎನ್ನುವ ಮೂಲಕ ಯತ್ನಾಳ್ ಇತಿಹಾಸ ಕೆದಕುವ ಪ್ರಯತ್ನ ಮಾಡಿದ್ದಾರೆ.

ಪಕ್ಷ ಸಂಘಟನೆಯಾಗಿದ್ದು ಸ್ವಯಂಘೋಷಿತ ಪೂಜ್ಯರಿಂದಲ್ಲ..!

‌ಇಷ್ಟೇ ಅಲ್ಲದೆ ಹಿಂದುತ್ವವಾದದ ಬಗ್ಗೆ ರಾಜಿ ಮಾಡಿಕೊಳ್ಳದೆ, ಕುಟುಂಬ ರಾಜಕಾರಣದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ರಾಜ್ಯದಲ್ಲಿ ಪಕ್ಷವನ್ನು ಕಟ್ಟಿದ್ದ ಈಶ್ವರಪ್ಪನವರನ್ನು ಹೊರಗಿಟ್ಟರು. ನಿಸ್ವಾರ್ಥ ಕಾರ್ಯಕರ್ತರು, ತನು-ಮನ-ಧನದಿಂದ ದುಡಿದ ಮುಖಂಡರಿಂದ ಪಕ್ಷದ ಸಂಘಟನೆಯಾಯಿತೇ ಹೊರತು, ಸ್ವಯಂಘೋಷಿತ ‘ಪೂಜ್ಯ’ ರಿಂದಲ್ಲ ಎಂದು ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಪ್ರ ಪ್ರಥಮ ಬಾರಿಗೆ ವಕ್ಫ್ ಹೋರಾಟಕ್ಕೆ ಧರಣಿ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದು ನಾವೇ, ವಾಲ್ಮೀಕಿ ಹಗರಣ, ದಲಿತರಿಗೆ ಎಸ್‌ಸಿಪಿ/ಟಿಎಸ್‌ಪಿ ಅನುದಾನದ ದುರ್ಬಳಕೆಯನ್ನು ಖಂಡಿಸಿ ಹೋರಾಟ ರೂಪಿಸಿದ್ದು ನಾವೇ. ವಕ್ಫ್ ವಿರುದ್ಧ ನಾವು ಮಾಡಿದ್ದ ಮಾಹಿತಿ ಸಂಗ್ರಹಕ್ಕೆ ಜೆ.ಪಿ.ಸಿ ಅಧ್ಯಕ್ಷರಾದ ಜಗದಂಬಿಕಾ ಪಾಲ್ ಅವರು ಪ್ರಶಂಸೆ ಮಾಡಿದ್ದರು ಎಂದು ಬಿಜೆಪಿಯಲ್ಲಿನ ವೈಫಲ್ಯಗಳನ್ನು ಅವರು ಬಿಚ್ಚಿಟ್ಟಿದ್ದಾರೆ.

ಅಡ್ಜಸ್ಟ್ಮೆಂಟ್ ರಾಜಕಾರಣದಿಂದ ಪಕ್ಷ ಮಕಾಡೆ ಮಲಗುವುದು ಪಕ್ಕಾ..

ಮುಖ್ಯವಾಗಿ ಪ್ರತಿ ಬಾರಿ ಅಧಿವೇಶನ ನಡೆದಾಗಲೂ ಉತ್ತರ ಕರ್ನಾಟಕಕ್ಕೆ ಆಗುತ್ತಿರುವ ಮಲತಾಯಿ ಧೋರಣೆಯನ್ನು, ಕೃಷ್ಣಾ ಯೋಜನೆಯ ವಿಳಂಬದ ಬಗ್ಗೆ ಧ್ವನಿ ಎತ್ತಿದ್ದು ನಾವೇ, ಕರ್ನಾಟಕ ಲೋಕ ಸೇವಾ ಆಯೋಗದಲ್ಲಿರುವ ಭ್ರಷ್ಟರನ್ನು ಕಿತ್ತೊಗೆಯಲು ಸ್ಪರ್ಧಾರ್ಥಿಗಳ ಜೊತೆಗೆ ನಿಂತಿದ್ದು ನಾವೇ. ಬಾಣಂತಿಯರ ಸಾವಿನ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದು ನಾನೇ. ಪಕ್ಷದಲ್ಲಿ ಆಗಬೇಕಾದ ಕೆಲ ಬದಲಾವಣೆಗಳು, ಸುಧಾರಣೆಗಳನ್ನು ಸೂಚಿಸಿದಕ್ಕೆ ನಮ್ಮ ನಿಲುವು ಕೆಲವರಿಗೆ ‘ಅಪಥ್ಯ’ ವಾಗಿದೆ ಎಂದು ಹರಿಹಾಯ್ದಿದ್ದಾರೆ. ಇನ್ನೂ ಅಡ್ಜಸ್ಟ್ಮೆಂಟ್ ರಾಜಕಾರಣ ನಿಲ್ಲದಿದ್ದರೆ ಪಕ್ಷ ಮಕಾಡೆ ಮಲಗುವುದು ಖಚಿತ. ಕುಟುಂಬ ರಾಜಕಾರಣಕ್ಕೆ ಕಡಿವಾಣ ಹಾಕಿ, ನಿಜವಾದ ಜನ ಪರ ಕಾಳಜಿ ಇರುವ ನಾಯಕರಿಗೆ ಪಕ್ಷ ಅವಕಾಶ ನೀಡಬೇಕು. ಕಾಟಾಚಾರಕ್ಕೆ ಸರ್ಕಾರದ ನೀತಿಗಳನ್ನು ಖಂಡಿಸಿ ಸಂಜೆ ವೇಳೆ ಅವರ ಮನೆಯಲ್ಲಿ ಭೋಜನ ಕೂಟದಲ್ಲಿ ಭಾಗವಹಿಸುವ ನಾಯಕರ ಅವಶ್ಯ ಪಕ್ಷಕ್ಕಿಲ್ಲ ಎಂದು ಉಚ್ಚಾಟನೆಯ ಬಳಿಕ ಯತ್ನಾಳ್‌ ಬಿಜೆಪಿ ಕಿವಿ ಹಿಂಡಿದ್ದಾರೆ.
ರಾಷ್ಟ್ರ ಮೊದಲು, ಪಕ್ಷ ನಂತರ ಹಾಗೂ ಸ್ವಇಚ್ಚೆ ಕೊನೆಗೆ ಎಂಬ ತತ್ವದಡಿ ಕೆಲಸ ಮಾಡುವ ನನ್ನ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ತಮ್ಮ ಟ್ವಿಟ್‌ನಲ್ಲಿ ಪುರುಚ್ಚರಿಸಿದ್ದಾರೆ.

About The Author