Political News: ರಾಜ್ಯದಲ್ಲಿ ಗ್ರಾಮೀಣ ಹಂತದಲ್ಲಿ ಆಡಳಿತದ ಕೇಂದ್ರವಾಗಿರುವ ಗ್ರಾಮ ಪಂಚಾಯಿತಿಗಳಲ್ಲಿ ರಾಜಕೀಯ ಹಸ್ತಕ್ಷೇಪವಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಅಭಿವೃದ್ದಿಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂಬ ಆಘಾತಕಾರಿ ಅಂಶವನ್ನು 2024-25ರ ಆರ್ಥಿಕ ಸಮೀಕ್ಷೆಯು ಬಹಿರಂಗಗೊಳಿಸಿದೆ.
ಪ್ರಮಖವಾಗಿ ರಾಜಕೀಯ ವ್ಯಕ್ತಿಗಳ ಹಸ್ತಕ್ಷೇಪ, ಸಂಪನ್ಮೂಲಗಳ ಲಭ್ಯತೆ ಇಲ್ಲದಿರುವುದು ಹಾಗೂ ಯುವ ಸಮೂಹದ ಪಾಲ್ಗೊಳ್ಳುವಿಕೆಯ ಕೊರತೆಯು ಈ ಸಮಸ್ಯೆಗೆ ಕಾರಣವಾಗಿವೆ. ಅಲ್ಲದೆ ಮೂಲ ಸೌಲಭ್ಯಗಳ ಕೊರತೆ, ಸರಿಯಾದ ರಸ್ತೆ ಸಂಪರ್ಕ, ಸಾರಿಗೆ ಸೌಲಭ್ಯ ಹಾಗೂ ಆರೋಗ್ಯ ರಕ್ಷಣೆಗಾಗಿ ಮೂಲ ಭೂತ ಸೌಕರ್ಯಗಳು ಇಲ್ಲದಿರುವಿಕೆಯು ಗ್ರಾಮೀಣ ಭಾಗದ ಅಭಿವೃದ್ದಿಗೆ ಅಡ್ಡಿಯಾಗಿದೆ ಎಂದು ಸಮೀಕ್ಷೆಯು ಹೇಳಿದೆ. ಇನ್ನೂ ಕಳೆದ 2024-25ನೇ ಸಾಲಿನ ಆಯವ್ಯಯದಲ್ಲಿ 21,616 ಕೋಟಿ ರೂಪಾಯಿಗಳ ಅನುದಾನವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದ್ದು, 2024ರ ಡಿಸೆಂಬರ್ ಅಂತ್ಯದಲ್ಲಿ 10,888 ಕೋಟಿ ರೂಪಾಯಿಗಳಷ್ಟು ಅನುದಾನ ಖರ್ಚು ಮಾಡಲಾಗಿದೆ ಎಂಬ ಅಂಶವನ್ನು ಸಮಿತಿಯು ತಿಳಿಸಿದೆ.
ಗ್ರಾಮೀಣಾಭಿವೃದ್ದಿ ಕೊರತೆಗೆ ಸಮಸ್ಯೆಗಳೇನು..?
ಅಲ್ಲದೆ ಪ್ರಮುಖವಾಗಿ ಗ್ರಾಮೀಣ ಪ್ರದೇಶದಲ್ಲಿ ಆದಾಯದ ಅಸಮಾನತೆ, ನಿರಂತರ ಕಿತ್ತು ತಿನ್ನುವ ಬಡತನವಿದೆ. ಇಷ್ಟೇ ಅಲ್ಲದೆ ಅಧಿಕಾರದ ವಿಕೇಂದ್ರಿಕರಣವೂ ಅತೀ ಕಡಿಮೆಯಾಗಿದೆ. ಹೀಗಾಗಿ ಆಡಳಿತಕ್ಕೆ ಹಾಗೂ ಅಭಿವೃದ್ದಿಗೆ ಸಂಬಂಧಪಟ್ಟ ಕಾರ್ಯಗಳ ಅನುಷ್ಠಾನದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳು ಕಠಿಣ ಸವಾಲುಗಳನ್ನು ಎದುರಿಸುತ್ತಿವೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸಿದೆ. ಇನ್ನೂ ಮುಖ್ಯವಾಗಿ ಸಾಂಪ್ರದಾಯಿಕ ಕೃಷಿ ಪದ್ದತಿಗಳ ಅನುಸರಣೆಯ ಜೊತೆಗೆ ತಾಂತ್ರಿಕ ಉನ್ನತಿಯ ಕೊರತೆ, ಅಲ್ಲದೆ ಕೃಷಿ ಉತ್ಪಾದಕತೆಯ ಮೇಲೆ ಪರಿಣಾಮ ಪರಿಣಾಮ ಬೀರುವ ಅಂಶಗಳಾದ ಪ್ರವಾಹ, ಬರಗಾಲಗಳಂತಹ ನೈಸರ್ಗಿಕ ವಿಕೋಪದ ಕಾರಣದಿಂದ ಗ್ರಾಮೀಣ ಭಾಗದ ಜನತೆ ನಗರಗಳಿಗೆ ವಲಸೆ ಹೋಗಲು ಕಾರಣವಾಗಿದೆ. ಇನ್ನೂ ಉದ್ಯೋಗಾವಕಾಶಗಳ ಕೊರತೆ ಸೇರಿದಂತೆ ಕಡಿಮೆ ಪ್ರಮಾಣದ ಉದ್ಯೋಗಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹ ವಲಸೆ ಹೋಗಲು ಕಾರಣವಾಗಿದೆ ಎಂದು ಸಮೀಕ್ಷೆಯು ಹೇಳಿದೆ.
ಇನ್ನೂ ಎಲ್ಲಕ್ಕಿಂತ ಮುಖ್ಯವಾಗಿ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡಲು ಅಧಿಕಾರದ ವಿಕೇಂದ್ರಿಕರಣದ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಅನುಷ್ಠಾನ ಮಾಡಬೇಕಾಗಿದೆ ಎಂಬ ಸಲಹೆಯನ್ನು ಆರ್ಥಿಕ ಸಮೀಕ್ಷೆಯು ಒತ್ತಿ ಹೇಳಿದೆ.
ಒಟ್ನಲ್ಲಿ.. ಹಳ್ಳಿಗಳಿಂದಲೇ ದೇಶದ ಅಭಿವೃದ್ದಿಯಾಗುತ್ತದೆ. ಗ್ರಾಮಗಳು ಉದ್ದಾರವಾದರೆ ರಾಷ್ಟ್ರದ ಏಳಿಗೆಯಾಗುತ್ತದೆ ಎಂಬ ಮಾತನ್ನು ನಾವು ಆಗಾಗ್ಗೆ ಹೇಳುತ್ತಿರುತ್ತೇವೆ. ಆದರೆ ಗ್ರಾಮೀಣಭಾಗದಲ್ಲಿ ಉತ್ತಮ ಆಡಳಿತದ ಜೊತೆಗೆ ಗ್ರಾಮ ಸ್ವರಾಜ್ಯದ ರಥವನ್ನು ಎಳೆಯಬೇಕಿದ್ದ ಗ್ರಾಮ ಪಂಚಾಯಿತಿಗಳು ರಾಜಕೀಯದ ಹಸ್ತಕ್ಷೇಪದ ಸುಳಿಗೆ ಸಿಲುಕಿ ಅಕ್ಷರಶಃ ಭ್ರಷ್ಟಾಚಾರದ ಕೂಪಗಳಾಗುತ್ತಿವೆ ಎನ್ನುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯಾಗಿದೆ. ಅಲ್ಲದೆ ಮುಖ್ಯವಾಗಿ ಅಭಿವೃದ್ದಿ ವಿಚಾರದಲ್ಲಿ ಅನವಶ್ಯಕವಾಗಿ ರಾಜಕೀಯದ ಉದ್ದೇಶವನ್ನು ಹೊಂದಿರುವ ಕೈಗಳ ಹಸ್ತಕ್ಷೇಪದಿಂದ ಗ್ರಾಮೀಣಾಭಿವೃದ್ದಿಯು ತೀವ್ರ ಕುಂಠಿತಗೊಂಡಿದ್ದು ಸತ್ಯವಾದ ಅಂಶವಾಗಿದೆ. ಅದೇನೆ ಇರಲಿ.. ಆರ್ಥಿಕ ಸಮೀಕ್ಷೆಯು ಸಲಹೆ ನೀಡಿರುವಂತೆಯೇ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರಗಳ ನೀಡುವ ನಿಟ್ಟಿನಲ್ಲಿ ಅಧಿಕಾರದ ವಿಕೇಂದ್ರಿಕರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳುವುದರ ಜೊತೆಗೆ ರಾಜಕೀಯದ ಮೂಗು ತೋರಿಸುವಿಕೆಯನ್ನು ತಡೆಯಲು ಮುಂದಾಗಬೇಕಿದೆ.