Hubballi News: ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಒಂದಿಲ್ಲೊಂದು ಸಮಸ್ಯೆ ತಲೆದೂರುತ್ತಲೇ ಇದೆ. ಇಲ್ಲಿ ಶ್ರಮ ಜೀವಿಗಳ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿಯೇ ಇಲ್ಲವಾಗಿದೆ. ಖಾಸಗಿ ಕಂಪನಿಯ ಬೇಜವಾಬ್ದಾರಿಯೋ ಅಥವಾ ಕಮೀಷನ್ ದಂಧೆಯ ಕೈವಾಡವೋ ಅವ್ಯವಸ್ಥೆ ಮಾತ್ರ ದೊಡ್ಡಮಟ್ಟದಲ್ಲಿ ಬೇರು ಬಿಟ್ಟಿದೆ.
ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಹೌದು.. ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ಒದಗಿಸಲು ಪಾಲಿಕೆಯು ತಲಾ ಒಬ್ಬ ಪೌರಕಾರ್ಮಿಕರಿಗೆ ಮೊಟ್ಟೆ ಸೇರಿದಂತೆ ಉಪಹಾರ ಒದಗಿಸಲು 35 ರೂಪಾಯಿ ವ್ಯಯಿಸುತ್ತಿದೆ. ಆದರೆ ಕಳಪೆ ಆಹಾರ ಹಾಗೂ ಅರೆ ಬರೆ ಬೆಂದಿರುವ ಆಹಾರವನ್ನು ವಿತರಣೆ ಮಾಡಲಾಗುತ್ತಿದೆ. ಈಗಾಗಲೇ ಖಾಸಗಿ ಕಂಪನಿಗೆ ಟೆಂಡರ್ ನೀಡಿದ್ದು, ಇಲ್ಲಿ ಪೌರಕಾರ್ಮಿಕರಿಗೆ ಗುಣಮಟ್ಟದ ಆಹಾರ ಮಾತ್ರ ಪೂರೈಕೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪೌರಕಾರ್ಮಿಕರು ಆಹಾರವನ್ನು ಚೆಲ್ಲುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಅವಳಿನಗರದಲ್ಲಿ ಎರಡು ಸಾವಿರ ಪೌರಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಪೌರಕಾರ್ಮಿಕರಿಗೆ ನೀಡುವ ಆಹಾರದಲ್ಲಿಯೂ ಅಧಿಕಾರಿಗಳ ಕಮೀಷನ್ ದಂಧೆಯಿಂದ ಇಂತಹದೊಂದು ದೊಡ್ಡಮಟ್ಟದ ಅವ್ಯವಸ್ಥೆ ತಲೆದೂರಿರುವ ಬಗ್ಗೆ ಕೂಡ ಸಾರ್ವಜನಿಕ ವಲಯದಲ್ಲಿ ಆರೋಪ ಕೇಳಿ ಬಂದಿದೆ. ಪೌರಕಾರ್ಮಿಕರ ಆಹಾರದಲ್ಲಿ ಕಮಿಷನ್ ಕರಾಳ ದಂಧೆ ನಡೆಯುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ.
ಒಟ್ಟಿನಲ್ಲಿ ಅವಳಿನಗರದ ಸ್ವಚ್ಚತೆಗಾಗಿ ಶ್ರಮಿಸುವ ಶ್ರಮಜೀವಿಗಳ ಬಗ್ಗೆ ಯಾಕಿಷ್ಟು ಬೇಜವಾಬ್ದಾರಿ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕಿದೆ.
ಹುಬ್ಬಳ್ಳಿ ಇಎಸ್ಐ ಆಸ್ಪತ್ರೆಯಲ್ಲಿ ಹಾವುಗಳ ಹಾವಳಿ: ಆತಂಕದಲ್ಲಿಯೇ ಸಿಬ್ಬಂದಿ ಹಾಗೂ ಸಾರ್ವಜನಿಕರು