Kolar News: ಕೋಲಾರ: ಕಳೆದ 20 ವರ್ಷಗಳಿಂದ ಸ್ವಂತ ಸೂರಿಲ್ಲದೆ ಪರದಾಡುತ್ತ ಕೂಲಿ ಕೆಲಸ ಮಾಡುತ್ತಿರುವ ಕಡೆಯೇ ಗುಡಿಸಿಲಲ್ಲಿ ವಾಸವಿದ್ದು , ಜೀವನ ಸಾಗಿಸುತ್ತಿದ್ದ ಮಹಿಳೆಗೆ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಆಶ್ರಯ ಕಲ್ಪಿಸಿದೆ. ಮುಳಬಾಗಿಲಿನ ನೂಗಲಬಂಡೆ ಗ್ರಾಮದಲ್ಲಿ ಚಂದ್ರಮ್ಮ ಎಂಬುವರ ಕುಟುಂಬಕ್ಕೆ ಟ್ರಸ್ಟ್ ವತಿಯಿಂದ ಸುಸಜ್ಜಿತ ಮನೆಯನ್ನು ಕಟ್ಟಿಸಿ ಕೊಟ್ಟಿಸಿಕೊಡುವ ಮೂಲಕ ನಿರಾಶ್ರಿತರ ಪಾಲಿಗೆ ಆಶಾಕಿರಣ ವಾಗಿದೆ ಇದು ಚಂದ್ರಮ್ಮ ಕುಟುಂಬದವರ ಪಾಲಿಗೆ ಸಂಭ್ರಮವಾಗಿದೆ.
ಗಂಡನಿಗೆ ಒಂದು ಕಾಲಿಲ್ಲ, ಈಗ ಮನೆಗೆ ಚಂದ್ರಮ್ಮನೇ ಮುಖ್ಯ ಆಧಾರ:
ಚಂದ್ರಮ್ಮ ಎಂಬುವರು ಕಳೆದ 10 ವರ್ಷಗಳಿಂದ ಮುಳಬಾಗಿಲಿನ ಜ್ಯೂನಿಯರ್ ಕಾಲೇಜಿನ ಕಾರ್ನರ್ ನಲ್ಲಿ ಸಣ್ಣದಾದ ಟೀ ಅಂಗಡಿ ಇಟ್ಟುಕೊಂಡಿದ್ದಾರೆ. ಇದಕ್ಕೂ ಮುನ್ನ ಎಳನೀರು ವ್ಯಾಪಾರ ಸೇರಿದಂತೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಚಂದ್ರಮ್ಮ ಗಂಡ ಶಂಕರಪ್ಪಗೆ ಶುಗರ್ ಹೆಚ್ಚಾದ ಕಾರಣ 6-7 ತಿಂಗಳ ಹಿಂದೆ ಆಸ್ಪತ್ರೆಯಲ್ಲಿ ಒಂದು ಕಾಲನ್ನೇ ತೆಗೆದಿದ್ದಾರಂತೆ. ಸದ್ಯ ಆರೋಗ್ಯ ಸರಿಯಿಲ್ಲದ ಕಾರಣ ಶಂಕರಪ್ಪ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮನೆಗೆ ಮುಖ್ಯ ಆಧಾರವಾಗಿರುವ ಚಂದ್ರಮ್ಮ ಅವರು ಕೂಲಿ ಮಾಡಿ ತನ್ನ ಮೂವರು ಹೆಣ್ಣು ಮಕ್ಕಳನ್ನೂ ಕಷ್ಟಪಟ್ಟು ಓದಿಸಿದ್ದಾರೆ. ಮೂವರು ಹೆಣ್ಣು ಮಕ್ಕಳಲ್ಲಿ ಈಗಾಗಲೇ ಇಬ್ಬರಿಗೆ ಮದುವೆಯಾಗಿದ್ದು, ಮತ್ತೊಬ್ಬ ಹೆಣ್ಣು ಮಗುವು ವಿದ್ಯಾಭ್ಯಾಸ ಮುಂದುವರಿಸಿದ್ದಾಳೆ.
ನಿರಾಶ್ರಿತ ಮಹಿಳೆಗೆ ಸುಸಜ್ಜಿತವಾದ ಮನೆ ನಿರ್ಮಿಸಿಕೊಟ್ಟ ಪ್ರಗತಿ ಚಾರಿಟೇಬಲ್ ಟ್ರಸ್ಟ್:
ಪ್ರಗತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜೋಗಲಕಾಷ್ಠಿ ಮುನೇಶ್ ಅವರು ಆಗಾಗ ಚಂದ್ರಮ್ಮ ಅವರ ಅಂಗಡಿಗೆ ಟೀ ಕುಡಿಯಲು ಹೋಗುತ್ತಿದ್ದರಂತೆ. ಈ ಸಂದರ್ಭದಲ್ಲಿ ಚಂದ್ರಮ್ಮಗೆ ಮನೆ ಇಲ್ಲದ ಬಗ್ಗೆ ಅಲ್ಲಿದ್ದವರು ಮುನೇಶ್ ಅವರ ಕಿವಿಗೆ ಹಾಕಿದ್ದಾರೆ. ಸದಾ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿರುವ ಜೋಗಲಕಾಷ್ಠಿ ಮುನೇಶ್ ಅವರು ಈ ಬಗ್ಗೆ ಮಾಹಿತಿಯನ್ನು ಕಲೆಹಾಕಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಆಗ ಚಂದ್ರಮ್ಮಗೆ ಮುನೇಶ್ ಅವರು ಮನೆ ಕಟ್ಟಿಕೊಡುವ ಭರವಸೆ ನೀಡಿದ್ದರು. ಅದರಂತೆ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆಯ ಸದಸ್ಯರ ಶ್ರಮದ ಪ್ರತಿಫಲವಾಗಿ ಚಂದ್ರಮ್ಮರಿಗೆ ಸುಸಜ್ಜಿತವಾದ ಮನೆಯನ್ನು ನಿರ್ಮಿಸಿ ಆಶ್ರಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ನೂರಾರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿರುವ ಟ್ರಸ್ಟ್:
ಗುಡಿಸಲು ಮುಕ್ತ ಮಾಡುವುದರಲ್ಲಿ ಪ್ರಗತಿ ಚಾರಿಟೇಬಲ್ ಟ್ರಸ್ಟ್ ಸಣ್ಣ ಹೆಜ್ಜೆಯನ್ನು ಇಟ್ಟಿದ್ದು, ಅಸಹಾಯಕರಿಗೆ ವಸತಿಯನ್ನು ಕಲ್ಪಿಸಿಕೊಡುವ ಯೋಜನೆಯನ್ನು ಹೊಂದಿದೆ. ಸದ್ಯ 8 ಮನೆಗಳ ಗುರಿ ಹೊಂದಿದ್ದು, ಈಗಾಗಲೇ ಟ್ರಸ್ಟ್ ವತಿಯಿಂದ ಐದು ಮನೆಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ಇನ್ನೂ ಮೂರು ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲೇ ಸಾಧ್ಯವಾದಷ್ಟು ನಿರಾಶ್ರಿತರಿಗೆ ಸುಸಜ್ಜಿತವಾದ ಮನೆ ಕೊಡುವುದಾಗಿ ಪ್ರಗತಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಜೋಗಲಕಾಷ್ಠಿ ಮುನೇಶ್ ತಿಳಿಸಿದರು.
ಇನ್ನು ಪ್ರಗತಿ ಚಾರಿಟೇಬಲ್ ಟ್ರಸ್ಟ್ ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಉದ್ದೇಶದಿಂದ ಇದುವರೆಗೂ 150ಕ್ಕೂ ಹೆಚ್ಚು ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಿದೆ. ಸರ್ಕಾರಿ ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿದು ಚಿತ್ತಾರಗಳನ್ನು ಬಿಡಿಸಿ ಕಲರ್ ಫುಲ್ ಆಗಿ ಮಿಂಚುವಂತೆ ಮಾಡಿದ್ದಾರೆ. ಅಲ್ಲದೆ ಶಾಲೆಗೆ ಹಾಗೂ ಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಮುಳಬಾಗಿಲು ತಾಲೂಕಿನಲ್ಲಿ ಅಪೌಷ್ಟಿಕತೆ ನಿವಾರಣೆಗಾಗಿ ಅಧಿಕಾರಿಗಳ ಜೊತೆಯೂ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಸರ್ಕಾರಿ ಶಾಲೆಗಳನ್ನು ಉಳಿಸಲು ಹಾಗೂ ಅಸಹಾಯಕರಿಗೆ ನೆರವಾಗುವುದಾಗಿ ಮುನೇಶ್ ಭರವಸೆ ನೀಡಿದರು.
ಟ್ರಸ್ಟ್ ನ ಸಹಾಯವನ್ನು ನೆನೆದ ಚಂದ್ರಮ್ಮ:
ಈಗ ಮನೆ ಕಟ್ಟಿರುವ ಜಾಗದಲ್ಲಿ 20 ವರ್ಷಗಳ ಹಿಂದೆ ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿದ್ದೆವು. ಆದ್ರೆ ಮಳೆಗಾಲದಲ್ಲಿ ತುಂಬಾ ಕಷ್ಟ ಆಗುತ್ತಿತ್ತು. ಹಾಗಾಗಿ ಕೆಲಸ ಮಾಡುವ ಕಡೆಯೇ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದೆವು. ಈಗ ಗುಡಿಸಲು ಇದ್ದ ಜಾಗದಲ್ಲಿಯೇ ಮುನೇಶಣ್ಣ ಅವರು ನಮಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ನಮ್ಮಂತ ಬಡವರಿಗೆ ಟ್ರಸ್ಟ್ ವತಿಯಿಂದ ತುಂಬಾ ಸಹಾಯ ಮಾಡಿದ್ದಾರೆ. ನಮ್ಮ ಪ್ರಾಣ ಇರೋವರೆಗೂ ನಾವು ಇವರನ್ನು ಮರೆಯೋದಿಲ್ಲ. ನಮ್ಮಂತ ಅಸಹಾಯಕರಿಗೆ ಸಹಾಯ ಮಾಡಿದ ಇವರು ನೂರ್ಕಾಲ ಸುಖವಾಗಿರಲಿ ಎಂದು ಟ್ರಸ್ಟ್ ನ ಸಹಾಯವನ್ನು ಚಂದ್ರಮ್ಮ ನೆನೆದಿದ್ದಾರೆ.
ಹುಬ್ಬಳ್ಳಿಗೆ ಆಗಮಿಸಿದ ವಂದೇ ಭಾರತ್ ಟ್ರಯಲ್ ರನ್: ಹಲವಾರು ವೈಶಿಷ್ಟ್ಯದ ಇಂಟರಸಿಟಿ..!
ಶಾಲಾ ಕಾಲೇಜು ವಿದ್ಯಾರ್ಥಿಗಳ ಜೀವಕ್ಕೆ ಕಂಟಕವಾಯಿತೇ ಫ್ರೀ ಬಸ್ ಸಂಚಾರ..?
ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡ್ತಾ ಇದೆ: ಅಕ್ಕಿ ಭಾಗ್ಯದ ಬಗ್ಗೆ ಸಚಿವ ಲಾಡ್ ಮಾತು..




