Hubli News: ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಎರಡನೇ ಬಾರಿ ಕ್ಯಾಬಿನೆಟ್ ಸಚಿವ ಸ್ಥಾನ ಅಲಂಕರಿಸಿರುವ ಸಂಸದ ಪ್ರಹ್ಲಾದ್ ಜೋಶಿಗೆ ಹುಬ್ಬಳ್ಳಿಯಲ್ಲಿ ಅದ್ದೂರಿ ಸ್ವಾಗತ ಕೋರಲಾಯಿತು.
ಚುನಾವಣೆ ಫಲಿತಾಂಶ ಪ್ರಕಟವಾಗುತ್ತಲೇ ದೆಹಲಿಗೆ ತೆರಳಿದ್ದ ಜೋಶಿ ಅವರು, ಆಹಾರ ಮತ್ತು ಗ್ರಾಹಕ ವ್ಯವಹಾರ ಖಾತೆ ಹಾಗೂ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿ ಮೊದಲ ಬಾರಿಗೆ ಹುಬ್ಬಳ್ಳಿಗೆ ಆಗಮಿಸುತ್ತಿದ್ದು, ಬಿಜೆಪಿ ಕಾರ್ಯಕರ್ತರು ಮೆತವಣಿಗೆ ನಡೆಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸಚಿವ ಜೋಶಿ ಅವರು ಬಂದಿಳಿಯುತ್ತಿದಂತೆ ಜೋಶಿ ಪರ ಘೋಷಣೆ ಕೂಗಿ ಪಟಾಕಿ ಸಿಡಿಸಿ ಭವ್ಯ ಸ್ವಾಗತ ಕೋರಿದ ಕಾರ್ಯಕರ್ತರು, ತೆರೆದ ವಾಹನದಲ್ಲಿ ವಿಮಾನನಿಲ್ದಾಣದ ಮುಖ್ಯ ದ್ವಾರದಿಂದ ಅಕ್ಷಯ ಪಾರ್ಕ್ ಮಾರ್ಗವಾಗಿ ಹೊಸೂರ ವೃತ್ತ, ಉತ್ತರ ಸಂಚಾರ ಠಾಣೆ, ಚನ್ನಮ್ಮ ವೃತ್ತದವರೆಗೆ ಮೆರವಣಿಗೆ ನಡೆಸಿದರು.
ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್ ಹಾಗೂ ಕೇಶ್ವಾಪುರ ಸರ್ಕಲ್‌ನಲ್ಲಿರುವ ಬಸವೇಶ್ವರ ಮೂರ್ತಿಗೆ ಮಾಲಾರ್ಪಣೆ ನೆರವೇರಿಸಿ, ಅಲ್ಲಿಂದ ಸಚಿವರು ತಮ್ಮ ನಿವಾಸಕ್ಕೆ ತೆರಳಿದರು. ಮನೆಯಲ್ಲೂ ಕೂಡ ಕುಟುಂಬ ಸದಸ್ಯರು ಆರತಿಬೆಳಗಿ ಬರಮಾಡಿಕೊಂಡರು.




