ಅಯ್ಯೋ ನನ್ ಕೈಯಲ್ಲಿ ಆಗಲ್ಲ – ಜೈಲಿನಲ್ಲಿ ಪ್ರಜ್ವಲ್ ಕಣ್ಣೀರು?

ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಸಲಿ ಕಷ್ಟ ಶುರುವಾಗಿದೆ. ಜೈಲಿನಲ್ಲೂ ಮೊಬೈಲ್ ಬಳಸಿ ಬಿಂದಾಸ್ ಆಗಿದ್ದ ಪ್ರಜ್ವಲ್ ಅವರ ಅಹಂಕಾರ ಈಗ ಇಳಿದಿದ್ದು, ಸಾಮಾನ್ಯ ಕೈದಿಗಳ ಜೊತೆ ಸೆಲ್‌ನಲ್ಲಿರಲು ಪರದಾಡುತ್ತಿದ್ದಾರೆ. ‘ಅಯ್ಯೋ ನನ್ನ ಕೈಯಲ್ಲಿ ಆಗಲ್ಲ ಸ್ವಾಮಿ, ಭಯ ಆಗ್ತಿದೆ’ ಅಂತ ಜೈಲಾಧಿಕಾರಿಗಳ ಬಳಿ ಅವರು ಗೋಳಾಡುತ್ತಿದ್ದಾರೆ.

ಹೌದು, ಇತ್ತೀಚೆಗೆ ಪ್ರಜ್ವಲ್ ಬ್ಯಾರಕ್‌ನಲ್ಲಿ ಮೊಬೈಲ್ ಪತ್ತೆಯಾಗಿ ಕಾರಾಗೃಹ ಇಲಾಖೆಗೆ ಭಾರೀ ಮುಜುಗರ ತಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಡಿಜಿಪಿ, ತಕ್ಷಣವೇ ಪ್ರಜ್ವಲ್ ಅವರನ್ನು ಬೇರೆ ಬ್ಯಾರಕ್‌ಗೆ ಶಿಫ್ಟ್ ಮಾಡಲು ಆದೇಶಿಸಿದ್ದರು. ಅದರಂತೆ, ವಿಶೇಷ ಭದ್ರತೆಯಲ್ಲಿದ್ದ ಪ್ರಜ್ವಲ್ ಅವರನ್ನು ಬರೋಬ್ಬರಿ 25 ಜನ ಕೈದಿಗಳಿರುವ ಸಾಮಾನ್ಯ ಸೆಲ್‌ಗೆ ಸ್ಥಳಾಂತರಿಸಲಾಗಿದೆ. ಇಲ್ಲಿಂದಲೇ ಅಸಲಿ ಗೋಳಾಟ ಶುರುವಾಗಿದೆ ನೋಡಿ!

ಹೊಸ ಬ್ಯಾರಕ್‌ಗೆ ಹೋಗುತ್ತಿದ್ದಂತೆ ಪ್ರಜ್ವಲ್ ರೇವಣ್ಣಗೆ ಹೊಸ ಸಮಸ್ಯೆ ಎದುರಾಗಿದೆ. ಈ ಸೆಲ್‌ನಲ್ಲಿರುವ ಕೆಲವರಿಗೆ ಕೆಮ್ಮು, ಕಜ್ಜಿ ತರಹದ ಕಾಯಿಲೆಗಳಿದ್ದು, ಅವರಿಂದ ನನಗೂ ಸೋಂಕು ಹರಡುವ ಭಯವಿದೆ ಎಂದು ಪ್ರಜ್ವಲ್ ಅಳಲು ತೋಡಿಕೊಂಡಿದ್ದಾರೆ. ‘ನನಗೆ ಇಲ್ಲಿ ಇರೋಕೆ ಆಗಲ್ಲ, ದಯವಿಟ್ಟು ಬೇರೆ ಸೆಲ್‌ಗೆ ಶಿಫ್ಟ್ ಮಾಡಿ’ ಎಂದು ಜೈಲು ಅಧಿಕಾರಿಗಳ ಮುಂದೆ ಕೈಮುಗಿದು ಕೇಳಿಕೊಂಡಿದ್ದಾರಂತೆ. ಆದರೆ ಅಧಿಕಾರಿಗಳು ಸದ್ಯಕ್ಕೆ ಇದಕ್ಕೆ ಒಪ್ಪಿಲ್ಲ ಎನ್ನಲಾಗಿದೆ.

ಒಂದೇ ಸೆಲ್‌ನಲ್ಲಿ 25 ಮಂದಿ ಕೈದಿಗಳಿದ್ದು, ಎಲ್ಲರೂ ಒಂದೇ ಶೌಚಾಲಯ ಬಳಸಬೇಕಿದೆ. ಈ ವಾತಾವರಣ ತಮಗೆ ಒಗ್ಗುತ್ತಿಲ್ಲ ಎಂದು ಪ್ರಜ್ವಲ್ ಪರದಾಡುತ್ತಿದ್ದಾರೆ. ಇನ್ನು ತಮ್ಮ ಸೆಲ್ ಮೇಲೆ ಸಿಸಿಬಿ ದಾಳಿ ನಡೆದಿರುವುದರ ಹಿಂದೆ ದೊಡ್ಡ ಸಂಚಿದೆ ಎಂದಿರುವ ಪ್ರಜ್ವಲ್, ದಾಳಿಗೂ ಒಂದು ಗಂಟೆ ಮುನ್ನ ಸಹ ಕೈದಿ ಪ್ರತಾಪ್ ರಾಯ್ ತಂದು ಮೊಬೈಲ್ ಇಟ್ಟಿದ್ದ ಎಂದೂ ಹೇಳಿದ್ದಾರೆ. ರೌಡಿ ಭರತ್ ತನಗೆ ಮೊಬೈಲ್ ಕೊಟ್ಟಿದ್ದ ಎಂದೆಲ್ಲಾ ಹೇಳಿ ಜೈಲಾಧಿಕಾರಿಗಳ ಮುಂದೆ ಕಣ್ಣೀರು ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಾಜಭೋಗದ ಜೀವನ ನಡೆಸುತ್ತಿದ್ದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಈಗ ಜೈಲಿನ ಕಂಬಿ ಹಿಂದೆ ಸಾಮಾನ್ಯ ಕೈದಿಯ ನರಕಯಾತನೆ ಅನುಭವಿಸುವಂತಾಗಿದೆ.

About The Author