ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದಲ್ಲಿ ಭಾರೀ ಲೋಪಗಳಾಗಿವೆ ಎಂದು ಆರೋಪಿಸಿ ನಟ ಪ್ರಕಾಶ್ ರಾಜ್ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ಸಂತ್ರಸ್ತ ನಾಗರಿಕರು ಹಾಗೂ ನಾಗರಿಕ ಸಂಘಟನೆಗಳ ಪರವಾಗಿ ಪತ್ರಿಕಾಗೋಷ್ಠಿ ನಡೆಸಿದರು.
ಬೂತ್ ಮಟ್ಟದ ಅಧಿಕಾರಿಗಳ (BLO) ಮೇಲಿನ ಕೆಲಸದ ಒತ್ತಡ ಮತ್ತು ಸೂಕ್ತ ತರಬೇತಿಯ ಕೊರತೆಯಿಂದಾಗಿ ಗುಳೆ ಹೋಗುವ ಕಾರ್ಮಿಕರು ಸೇರಿದಂತೆ ಸಾವಿರಾರು ಮಂದಿಯ ಹೆಸರುಗಳನ್ನು ಸೂಕ್ತ ಪರಿಶೀಲನೆ ಇಲ್ಲದೇ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಅಥವಾ ‘Shifted’ ಎಂದು ತಪ್ಪಾಗಿ ಗುರುತಿಸಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದರು.
ಈ ಸಂದರ್ಭದಲ್ಲಿ ಅವರು ಚುನಾವಣಾ ಆಯೋಗದ ಮುಂದೆ ಹಲವು ಬೇಡಿಕೆಗಳನ್ನು ಮಂಡಿಸಿದರು. ಮತದಾರರ ಪಟ್ಟಿಯಿಂದ ಯಾವುದೇ ಹೆಸರು ತೆಗೆದುಹಾಕುವ ಮುನ್ನ ಸಂಬಂಧಪಟ್ಟ ಮತದಾರರ ಮನೆಗೆ ಖುದ್ದು ಭೇಟಿ ನೀಡಿ, ಸೂಕ್ತ ಪ್ರತಿಕ್ರಿಯೆ ಪಡೆದು ದಾಖಲಿಸಬೇಕು ಎಂದು ಒತ್ತಾಯಿಸಿದರು. ಮನೆಯಲ್ಲಿ ಯಾರೂ ಇಲ್ಲದಿದ್ದ ಸಂದರ್ಭದಲ್ಲಿ, ಆ ಬಗ್ಗೆ ಸ್ಪಷ್ಟ ದಾಖಲೆ ಮತ್ತು ಫೋಟೋ ಸಾಕ್ಷ್ಯ ಇಡಬೇಕು ಎಂದು ಸಲಹೆ ನೀಡಿದರು.
ಇಡೀ ಪ್ರಕ್ರಿಯೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು, ದೂರುಗಳಿಗಾಗಿ 24×7 ಸಹಾಯವಾಣಿ ಆರಂಭಿಸಬೇಕು ಮತ್ತು ಪ್ರಕ್ರಿಯೆಯ ಮೇಲೆ ನಿಗಾ ಇಡಲು ಸಮಿತಿ ರಚಿಸಬೇಕು ಎಂದು ಆಗ್ರಹಿಸಲಾಯಿತು. ಲೋಪ ಎಸಗಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಮುಂದಿಡಲಾಯಿತು.
“ಸ್ಪಷ್ಟೀಕರಣ ಇಲ್ಲದೇ ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರುಗಳನ್ನು ತೆಗೆದುಹಾಕುವುದು ಸರಿಯಲ್ಲ” ಎಂದು ಪ್ರಕಾಶ್ ರಾಜ್ ಪ್ರಶ್ನಿಸಿದರು. ಚುನಾವಣಾ ಆಯೋಗ ಈ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಮತ್ತು ಇಂತಹ ಕ್ರಮಗಳನ್ನು ಕರ್ನಾಟಕದಲ್ಲಿ ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಅವರು ಬಲವಾಗಿ ಆಗ್ರಹಿಸಿದರು




