ಗರ್ಭಿಣಿ ಪತ್ನಿಗೇ ದ್ರೋಹ! 2ನೇ ಮದುವೆಗೆ ರೆಡಿಯಾದ ಪತಿ!

ತುಮಕೂರಿನಲ್ಲಿ ಪ್ರೇಮ ವಿವಾಹದ ನಂತರ ಗರ್ಭಿಣಿಯಾಗಿರುವ ಪತ್ನಿಯನ್ನು ಬಿಟ್ಟು ಪತಿ ಮತ್ತೊಬ್ಬರೊಂದಿಗೆ ಮದುವೆಯಾಗಲು ಮುಂದಾದ ಆರೋಪ ಕೇಳಿಬಂದಿದೆ. ಪೀಡಿತೆ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪಾವಗಡ ತಾಲೂಕಿನ ವೈ.ಎನ್. ಹೊಸಕೋಟೆಯ ಯುವತಿ ಕಾಲೇಜು ದಿನಗಳಲ್ಲಿ ಜೆರಾಕ್ಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೇ ವೇಳೆ ಜೆರಾಕ್ಸ್ ಕೆಲಸಕ್ಕೆ ಬಂದಿದ್ದ ಬೊಮ್ಮ ನಾಯಕ್ ಎಂಬಾತನೊಂದಿಗೆ ಪರಿಚಯ ಬೆಳೆದು, ಬಳಿಕ ಅದು ಪ್ರೀತಿಯಾಗಿ ಮಾರ್ಪಟ್ಟಿತ್ತು. ಸುಮಾರು ಏಳು ವರ್ಷಗಳ ಕಾಲ ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದ ವಿರೋಧವನ್ನೂ ಲೆಕ್ಕಿಸದೇ ಮದುವೆಯಾಗಿದ್ದರು.

ಇದೀಗ ಆರು ತಿಂಗಳ ಗರ್ಭಿಣಿಯಾಗಿರುವ ಯುವತಿ, ಗರ್ಭಿಣಿಯಾದ ನಂತರ ಪತಿಯ ವರ್ತನೆ ಸಂಪೂರ್ಣ ಬದಲಾಗಿದೆ ಎಂದು ಆರೋಪಿಸಿದ್ದಾರೆ. ಜಾತಿ ಭೇದದ ಕಾರಣದಿಂದಲೇ ತಮ್ಮ ಮದುವೆಗೆ ಮೊದಲಿನಿಂದಲೂ ವಿರೋಧ ವ್ಯಕ್ತವಾಗಿದ್ದರೂ, ಇಬ್ಬರೂ ಮದುವೆಯಾಗಿದ್ದೇವೆ. ಆದರೆ ಈಗ ತನ್ನ ಕುಟುಂಬದ ಒತ್ತಡಕ್ಕೆ ಒಳಗಾಗಿ ಪತಿ ಮತ್ತೊಬ್ಬರೊಂದಿಗೆ ಮದುವೆಯಾಗಲು ಮುಂದಾಗಿದ್ದಾನೆ ಎಂದು ಯುವತಿ ದೂರಿದ್ದಾರೆ. ಪತಿ ಹಾಗೂ ಅತ್ತೆಯವರು ತಮ್ಮ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದು, ಬೇರೊಂದು ಮದುವೆಗೆ ಸಿದ್ಧತೆ ನಡೆಯುತ್ತಿದ್ದರೂ ಪತಿ ಮೌನವಾಗಿರುವುದು ಆತಂಕ ಉಂಟುಮಾಡಿದೆ ಎಂದು ಯುವತಿ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಯುವತಿ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಜಾತಿ ನಿಂದನೆ, ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಬೆದರಿಕೆ ಆರೋಪಗಳನ್ನು ಮಾಡಿದ್ದಾರೆ. ನನಗೆ ನ್ಯಾಯ ಬೇಕು, ನನ್ನ ಮಗುವಿಗೆ ತಂದೆ ಬೇಕು ಎಂದು ಯುವತಿ ಮನವಿ ಮಾಡಿದ್ದಾರೆ. ದೂರು ಆಧರಿಸಿ ಪೊಲೀಸರು ಪತಿ ಹಾಗೂ ಆತನ ತಾಯಿಯ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

About The Author