ಎದೆ ಸೀಳಿದರೆ ಅಲ್ಲಾ ಮಾತ್ರ ಕಾಣ್ತಾನೆ – ಸರ್ಕಾರದ ವಿರುದ್ಧ ಅಶೋಕ್ ಕಿಡಿ!

ಕಾಂಗ್ರೆಸ್ ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ಅಡ್ಡಿಪಡಿಸಬಾರದು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ. ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕ್ರಮಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಪೊಲೀಸ್ ಅಧಿಕಾರಿಗಳ ವಿಚಾರದಲ್ಲೂ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆರ್. ಅಶೋಕ್, ಕೆಲ ಅಧಿಕಾರಿಗಳು ಜನರಿಗೆ ಧಮ್ಕಿ ಹಾಕುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ದೂರಿದರು. ಗಣೇಶೋತ್ಸವದ ಸಂದರ್ಭದಲ್ಲಿ ಹಿಂದೂಗಳಿಗೆ ಮಾತ್ರ ಕಠಿಣ ನಿಯಮಗಳನ್ನು ವಿಧಿಸಲಾಗುತ್ತಿದೆ. ಇತರ ಸಮುದಾಯಗಳ ವಿಚಾರದಲ್ಲಿ ಇದೇ ರೀತಿಯ ಕ್ರಮ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರ ಎದೆ ಸೀಳಿದರೆ ಆಂಜನೇಯ ಅಥವಾ ಶ್ರೀರಾಮ ಕಾಣುತ್ತಾರೆ, ಕಾಂಗ್ರೆಸ್ ನಾಯಕರ ಎದೆ ಸೀಳಿದರೆ ಅಲ್ಲಾ ಕಾಣುತ್ತಾರೆ ಎಂದು ಹೇಳುವ ಮೂಲಕ ಆರ್. ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದರು. ಕಾಂಗ್ರೆಸ್ ವಿರುದ್ಧ ದೇಶ ವಿಭಜನೆ ಸೇರಿದಂತೆ ಹಲವು ರಾಜಕೀಯ ಆರೋಪಗಳನ್ನು ಮಾಡಿದ್ದು, ನಮಗೆ ದೇಶಭಕ್ತಿಯ ಪಾಠದ ಅಗತ್ಯವಿಲ್ಲ ಎಂದರು.

ಮಸೀದಿಗಳ ಮುಂಭಾಗ ಗಣೇಶ ಮೆರವಣಿಗೆಗೆ ನಿರ್ಬಂಧ ವಿಧಿಸುವುದಾದರೆ, ಎಲ್ಲಾ ಧಾರ್ಮಿಕ ಸ್ಥಳಗಳಿಗೂ ಒಂದೇ ರೀತಿಯ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಮದ್ದೂರಿನಲ್ಲಿ ನಡೆದ ಕಲ್ಲು ತೂರಾಟದ ಪ್ರಕರಣದಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಹಿಂದೂ ಮುಖಂಡರಿಗೆ ನೋಟಿಸ್ ನೀಡಿರುವುದನ್ನೂ ಪ್ರಶ್ನಿಸಿದರು.

ಗಣೇಶೋತ್ಸವಕ್ಕೆ ಅತಿಯಾದ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂದು ಆರೋಪಿಸಿದ ಆರ್. ಅಶೋಕ್, ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಸರ್ಕಾರ ಎಲ್ಲರಿಗೂ ಸಮಾನ ನಿಯಮಗಳನ್ನು ಅನ್ವಯಿಸಬೇಕು ಎಂದು ಹೇಳಿದರು. ಅಗತ್ಯವಿದ್ದರೆ ಮದ್ದೂರಿಗೆ ತೆರಳಿ ಹಿಂದೂ ಮುಖಂಡರಿಗೆ ಬೆಂಬಲ ನೀಡುವುದಾಗಿ ತಿಳಿಸಿದರು.

About The Author