ಉಮರ್ ಖಾಲಿದ್ ಓರ್ವ ರಾಷ್ಟ್ರೀಯವಾದಿ ಎಂದು ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾಗಿರುವ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ವಿರುದ್ಧ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿಂದೂಪರ ಹೋರಾಟಗಾರ ತೇಜಸ್ ಗೌಡ ಅವರು ಈ ದೂರು ನೀಡಿದ್ದು, ಹರಿಪ್ರಸಾದ್ ಅವರ ಹೇಳಿಕೆಗಳು ಸಮಾಜದಲ್ಲಿ ದ್ವೇಷಭಾವನೆ ಮೂಡಿಸುತ್ತಿವೆ ಎಂದು ಆರೋಪಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
2020ರ ದೆಹಲಿ ಗಲಭೆ ಪ್ರಕರಣದಲ್ಲಿ ಬಂಧಿತರಾಗಿ ಜೈಲಿನಲ್ಲಿರುವ ಉಮರ್ ಖಾಲಿದ್ ಅವರನ್ನು ರಾಷ್ಟ್ರೀಯವಾದಿ ಎಂದು ಬಣ್ಣಿಸಿದ್ದಲ್ಲದೆ, ಎಬಿವಿಪಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬಳಸಿದ್ದಾರೆ ಎಂದು ಹರಿಪ್ರಸಾದ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸಮಾಜದಲ್ಲಿ ಅಶಾಂತಿ ಹಾಗೂ ದ್ವೇಷ ಬಿತ್ತುವ ಇಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ದೂರುದಾರರು ಆಕ್ಷೇಪಿಸಿದ್ದಾರೆ.
ದೂರು ದಾಖಲಿಸಿದ ಬಳಿಕ ಮಾತನಾಡಿದ ತೇಜಸ್ ಗೌಡ, ಭಯೋತ್ಪಾದಕ ಚಟುವಟಿಕೆಗಳ ಆರೋಪ ಹೊತ್ತು ಜೈಲಲ್ಲಿರುವವರ ಪರವಾಗಿ ಮಾತನಾಡುವವರು ಮತ್ತು ಬೆಂಬಲಿಸುವವರು ಭಯೋತ್ಪಾದಕರಿಗೆ ಸಮಾನರು ಎಂದು ಕಿಡಿಕಾರಿದ್ದಾರೆ. ಪೊಲೀಸರು ಕಾನೂನು ತಜ್ಞರ ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಎಬಿವಿಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಈ ವಿವಾದ ಭುಗಿಲೆದ್ದಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.




