Friday, April 11, 2025

Latest Posts

ರಾಘವೇಂದ್ರ ರಾಜಕುಮಾರ್ ನಟನೆಯ “ರಾಜಿ” ಹಾಡುಗಳ ಬಿಡುಗಡೆ

- Advertisement -

ಪ್ರೀತಿ ಎಸ್ ಬಾಬು ನಿರ್ದೇಶನದಲ್ಲಿ ರಾಘವೇಂದ್ರ ರಾಜಕುಮಾರ್ ಹಾಗೂ ಪ್ರೀತಿ ಎಸ್ ಬಾಬು ಮುಖ್ಯಭೂಮಿಕೆಯಲ್ಲಿ ನಟಿಸಿರುವ “ರಾಜಿ” ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಶ್ರೀನಗರ ಕಿಟ್ಟಿ ಹಾಗೂ ವಿಜಯ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿ ಶುಭ ಕೋರಿದರು.

ಈ ಸಿನಿಮಾ ನನಗೆ ವಿಶೇಷ. ಏಕೆಂದರೆ, ಇದರ ಮುಹೂರ್ತ ಕಳೆದವರ್ಷ ಅಕ್ಟೋಬರ್ 30 ರಂದು ನಿಗದಿಯಾಗಿತ್ತು. ನನ್ನ ತಮ್ಮ ಅಪ್ಪು ಕ್ಲ್ಯಾಪ್ ಮಾಡಲು ಬರಬೇಕಿತ್ತು. ಆದರೆ ಅಕ್ಟೋಬರ್ 29 ಅಪ್ಪು ನಮ್ಮನ್ನು ಬಿಟ್ಟು ದೂರವಾದ. ಒಂದು ನಿಮಿಷ ನನ್ನ ಎದೆ ನಿಂತು. ಮತ್ತೇ ಬಡೆಯಲು ಆರಂಭವಾದ ದಿನವದು. ಆನಂತರ ಕೆಲವು ದಿನಗಳ ನಂತರ ಮುಹೂರ್ತ ನಡೆಯಿತು. ಅದೇ ಕಂಠೀರವ ಸ್ಟುಡಿಯೋದಲ್ಲಿ. ಅಪ್ಪು ಸಮಾಧಿ ಬಳಿ. ಈಗ ಕಾಕತಾಳೀಯವಾಗಿ ಇದೇ ಇಪ್ಪತ್ತೊಂಭತ್ತರಂದು ಚಿತ್ರ ಬಿಡುಗಡೆಯಾಗುತ್ತಿದೆ. ಅಪ್ಪುವಿನ ಏಳನೇ ತಿಂಗಳ ಪುಣ್ಯತಿಥಿಯಂದು. ಸಿನಿಮಾ ಬಗ್ಗೆ ಹೆಚ್ಚು ಹೇಳುವುದೇನು ಇಲ್ಲ. ಪ್ರೇಕ್ಷಕರ ಹೇಳುತ್ತಾರೆ ಎಂದರು ರಾಘವೇಂದ್ರ ರಾಜಕುಮಾರ್.

ನಾನು ಇಪ್ಪತ್ತೈದು ವರ್ಷಗಳಿಂದ ಪೋಷಕ ಕಲಾವಿದೆಯಾಗಿ ಚಿತ್ರರಂಗದಲ್ಲಿದ್ದೀನಿ. ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದೀನಿ. ರಾಘಣ್ಣ ಅವರೊಂದಿಗೆ ಮುಖ್ಯಪಾತ್ರದಲ್ಲೂ ನಟಿಸಿದ್ದೀನಿ. ಪಿ.ವಿ.ಆರ್ ಸ್ವಾಮಿ ಅವರ ಮೂಲಕ ರಾಘಣ್ಣ ಅವರ ಪರಿಚಯವಾಯಿತು. ಮೊದಲು ಅವರ ಬಳಿ ಕಥೆ ಹೇಳಲು ಭಯವಾಯಿತು. ನಂತರ ಅವರ ಮಾತಿನ ಶೈಲಿ ನೋಡಿ ಭಯವೆಲ್ಲಾ ದೂರವಾಯಿತು. ಅವರ ಮೇಲಿನ ಗೌರವ ಇಮ್ಮಡಿಯಾಯಿತು. ಅಂತಹ ಸರಳ ವ್ಯಕ್ತಿ ನಮ್ಮ ರಾಘಣ್ಣ. ದಾಂಪತ್ಯದ ಮಹತ್ವ ಸಾರುವ ಕಥೆ ಇದು. “ರಾಜಿ” ಅಂದರೆ ರಾ ಎಂದರೆ ರಾಘವೇಂದ್ರ ರಾಜಕುಮಾರ್, ಜಿ ಎಂದರೆ ಜೀವಿತ ಎಂದು. ಬಸವರಾಜು ಮೈಸೂರು ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನನ್ನ ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಇದೇ 29 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ದೇಶಕಿ, ನಟಿ ಪ್ರೀತಿ ಎಸ್ ಬಾಬು ತಿಳಿಸಿದರು.

ಚಿತ್ರದಲ್ಲಿ ಏಳು ಹಾಡುಗಳಿದೆ. ಎಲ್ಲಾ ಹಾಡುಗಳನ್ನು ಡಾ|| ಹೆಚ್ ಎಸ್ ವೆಂಕಟೇಶ್ ಮೂರ್ತಿ ಅವರೆ ಬರೆದಿದ್ದಾರೆ ಎಂದು ಸಂಗೀತ ಸಂಯೋಜಕ ಉಪಾಸನ ಮೋಹನ್ ತಿಳಿಸಿದರು. ಚಿತ್ರ ನಿರ್ಮಾಣವಾದ ಬಗ್ಗೆ ಬಸವರಾಜ್ ಮೈಸೂರು ಹಾಗೂ ತಮ್ಮ ಅಭಿನಯದ ಕುರಿತು ಪ್ರತಾಪ್ ಸಿಂಹ ಮಾತನಾಡಿದರು.

ಅತಿಥಿಗಳಾಗಿ ಆಗಮಿಸಿದ್ದ ಶ್ರೀನಗರ ಕಿಟ್ಟಿ, ವಿಜಯ ರಾಘವೇಂದ್ರ, ಡಾ||ವಿ.ನಾಗೇಂದ್ರ ಪ್ರಸಾದ್, ಕೆಂಪ್ಪಣ್ಣ ಚೆಟ್ಟಿ, ಮುನಿರಾಜು ರಾಮಯ್ಯ, ತಬಲಾ ನಾಣಿ , ಸಾಗರ್ ಪುರಾಣಿಕ್ ಮುಂತಾದ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.

- Advertisement -

Latest Posts

Don't Miss