ರಾಜ್ಯದಲ್ಲಿ ನಡೆಯುತ್ತಿರುವ ಜಾತಿಗಣತಿ ವಿಚಾರವನ್ನು, ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಯಾಕಂದ್ರೆ ಜಾತಿಗಣತಿ ವಿರುದ್ಧ ರಾಜ್ಯಾದ್ಯಂತ ವಿರೋಧ ಭುಗಿಲೆದ್ದಿದ್ದು, ಸಚಿವ ಸಂಪುಟದ ಸದಸ್ಯರು ಮುಂದೂಡುವಂತೆ ಒತ್ತಾಯಿಸಿದ್ದರು.
ಜಾತಿಗಣತಿ ವಿರುದ್ಧ ಲಿಂಗಾಯತ, ಒಕ್ಕಲಿಗ ನಾಯಕರು ತಮ್ಮ ಸಮುದಾಯಗಳ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಭಾರೀ ವಿರೋಧದ ನಡುವೆಯೂ ಸಿಎಂ ಸಿದ್ದರಾಮಯ್ಯ, ಜಾತಿಗಣತಿಗೆ ಇಟ್ಟ ಹೆಜ್ಜೆ ಹಿಂದಿಟ್ಟಿಲ್ಲ. ಇದು ಕಾಂಗ್ರೆಸ್ ಇಮೇಜ್‌ಗೆ ಡ್ಯಾಮೇಜ್ ಆಗುವ ಆತಂಕ ಎದುರಾಗಿತ್ತು. ಹೀಗಾಗಿ ಹೈಕಮಾಂಡ್ ಸ್ವಲ್ಪ ಸೀರಿಯಸ್ ಆಗಿದೆ.
ಸೆಪ್ಟೆಂಬರ್ 24ರಂದು ಬಿಹಾರಕ್ಕೆ ಹೋಗಿದ್ದ ಸಿಎಂ ಸಿದ್ದರಾಮಯ್ಯ, ಜಾತಿಗಣತಿ ಬಗ್ಗೆ ರಾಹುಲ್ ಗಾಂಧಿಗೆ ಪಿನ್ ಟು ಪಿನ್ ವಿವರಣೆ ನೀಡಿದ್ದಾರಂತೆ. ಇದ್ರಿಂದ ಖುಷಿಯಾಗಿರುವ ರಾಗಾ, ಸಿದ್ದುಗೆ ಶಹಬ್ಬಾಷ್ ಹೇಳಿದ್ದಾರೆ ಎನ್ನಲಾಗಿದೆ. ಸಿಡಬ್ಲ್ಯೂಸಿ ಸಭೆ ಬಳಿಕ, ಇಬ್ಬರೂ ಕೆಲ ಹೊತ್ತು ಮಾತುಕತೆ ನಡೆಸಿದ್ದಾರೆ.
ಈ ವೇಳೆ ಜಾತಿಗಣತಿ ಸಮೀಕ್ಷೆ, ವಿಪಕ್ಷಗಳ ವಿರೋಧ, ಸ್ವಪಕ್ಷದವರ ಒತ್ತಡಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ನಡೆಗೆ ರಾಹುಲ್ ಗಾಂಧಿ ಮೆಚ್ಚುಗೆ ಸೂಚಿಸಿದ್ದು, ಯಾವುದೇ ವಿರೋಧ ಇದ್ರೂ ಸಮೀಕ್ಷೆ ಪೂರ್ಣಗೊಳಿಸುವಂತೆ ಸಲಹೆ ನೀಡಿದ್ದಾರೆ.
ದೇಶಾದ್ಯಂತ ಜಾತಿಗಣತಿ ಮಾಡಬೇಕು ಎಂಬುದು ರಾಹುಲ್ ಗಾಂಧಿ ಆಗ್ರಹವಾಗಿತ್ತು. ಹೀಗಾಗಿ ಜಾತಿಗಣತಿಗೆ ರಾಹುಲ್ ಗಾಂಧಿ, ಹೈಕಮಾಂಡ್ ಬೆಂಬಲ ಇರೋದ್ರಿಂದ, ವಿರೋಧಿಸುತ್ತಿದ್ದ ಕಾಂಗ್ರೆಸ್ ನಾಯಕರು ಸೈಲೆಂಟ್ ಆಗಿದ್ದಾರೆ ಎನ್ನಲಾಗಿದೆ. ಜೊತೆಗೆ ಕೆಲವು ಸಚಿವರು, ಸಮುದಾಯ ಮತ್ತು ಪಕ್ಷದ ನಡುವೆ ಇಕ್ಕಟ್ಟಿಗೆ ಸಿಲುಕಿದ್ದಾರೆ.