ಕುಮಾರಸ್ವಾಮಿ ನನ್ನ ಅಣ್ಣನಿದ್ದಂತೆ : ರಮೇಶ್ ಬಂಡಿಸಿದ್ದೇಗೌಡ

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಕೈಗಾರಿಕಾ ಸ್ಥಾಪನೆಗೆ ಸಂಬಂಧಿಸಿದಂತೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಶುರುವಾಗಿದೆ. ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ಕೈಗಾರಿಕೆ ಸ್ಥಾಪನೆಗೆ 800 ಎಕರೆ ಸರ್ಕಾರಿ ಜಮೀನು ಲಭ್ಯವಿದೆ ಎಂಬ ತಹಶೀಲ್ದಾರ್ ವರದಿ ಹೊರಬಿದ್ದ ಬೆನ್ನಲ್ಲೇ, ಕಾಂಗ್ರೆಸ್ ಶಾಸಕ ರಮೇಶ್ ಬಾಬು ಮಹತ್ವದ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ಮಾತನಾಡಿದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಈ ವಿಚಾರವಾಗಿ ಮಾತುಕತೆ ನಡೆಸಲು ತಾನು ಸದಾ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. 

ʼಕುಮಾರಸ್ವಾಮಿ ನನ್ನ ಅಣ್ಣನಂತವರು. ನಾವು ಹೊಡೆದಾಡಿಕೊಂಡಿಲ್ಲ, ಕಿತ್ತಾಡಿಕೊಂಡಿಲ್ಲ. ರಾಜಕೀಯ ತೀರ್ಮಾನಗಳು ಬೇರೆ ಆಗಿರಬಹುದು, ಆದರೆ ಪರಸ್ಪರ ವಿಶ್ವಾಸ ಮತ್ತು ಸಂಬಂಧದಲ್ಲಿ ಯಾವುದೇ ಕೊರತೆ ಇಲ್ಲʼ ಎಂದು ರಮೇಶ್ ಬಾಬು ತಿಳಿಸಿದ್ದಾರೆ. ಮುಂದುವರೆದು ಮಾತನಾಡಿದ ಅವರು, ʼಅಣ್ಣ-ತಮ್ಮಂದಿರ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಅದರಿಂದ ಸಂಬಂಧಗಳು ಮುರಿಯುವುದಿಲ್ಲ. ಮನೆತನದ ಬಾಂಧವ್ಯ ಬೇರೆ, ರಾಜಕೀಯ ಬೇರೆ. ಮದುವೆ-ಕಾರ್ಯಕ್ರಮಗಳಲ್ಲಿ ನಾವು ಇಂದಿಗೂ ಭೇಟಿಯಾಗುತ್ತೇವೆ. ಆ ಸಂಬಂಧವನ್ನು ನಾನು ಎಂದಿಗೂ ಬಿಡುವುದಿಲ್ಲʼ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಕೈಗಾರಿಕಾ ಅಭಿವೃದ್ಧಿ ಕುರಿತ ಚರ್ಚೆಗಳು ಜೋರಾಗುತ್ತಿರುವ ನಡುವೆಯೇ, ರಮೇಶ್ ಬಾಬು ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

About The Author