ಮುಂಬೈ: ಐಪಿಎಲ್‍ನ 43ನೇ ಪಂದ್ಯದಲ್ಲಿ ಇಂದು ಆರ್‍ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ.
ಇಲ್ಲಿನ ಬ್ರಾಬೋರ್ನ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಆರ್‍ಸಿಬಿ ಗೆಲ್ಲಲ್ಲೇಬೇಕಾದ ಒತ್ತಡವನ್ನು ಎದುರಿಸುತ್ತಿದೆ. ಆರ್‍ಸಿಬಿ ಕಳೆದ ಎರಡು ಪಂದ್ಯಗಳನ್ನು ಕೈಚೆಲ್ಲಿದೆ.
ಫಾಫ್ ಡುಪ್ಲೆಸಿಸ್ ನೇತೃಥ್ವದ ಆರ್‍ಸಿಬಿ ತಂಡದ ಪ್ಲೇ ಆಫ್ ಹಾದಿ ತುಂಬ ಕಠಿಣವಾಗಿದೆ. ಮುಂದಿನ 5 ಪಂದ್ಯಗಳಲ್ಲಿ 3 ಪಂದ್ಯಗಳನ್ನು ಗೆಲ್ಲಲ್ಲೇಬೇಕಿದೆ.
ಸದ್ಯ ಫಾಫ್ ಡುಪ್ಲೆಸಿಸ್ ಪಡೆ 9 ಪಂದ್ಯಗಳಿಂದ 5ರಲ್ಲಿ ಗೆದ್ದು 4ರಲ್ಲಿ ಸೋತು ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಗುಜರಾತ್ ತಂಡ 8 ಪಂದ್ಯಗಳಿಂದ 7ರಲ್ಲಿ ಗೆದ್ದು 1ರಲ್ಲಿ ಮಾತ್ರ ಸೋತು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.
ಆರ್‍ಸಿಬಿ ತಂಡ ಸೋಲಲು ಅನುಭವಿಸಲು ಬ್ಯಾಟಿಂಗ್ ವೈಫಲ್ಯವೇ ಕಾರಣ. ಸ್ಟಾರ್ ಆಟಗಾರರು ಇದ್ದ ಹೊರತಾಗಿಯೂ ತಂಡ ಯಶಸ್ಸು ಕಾಣುತ್ತಿಲ್ಲ. ಕಳೆದ ಪಂದ್ಯದಿಂದ ಬ್ಯಾಟಿಂಗ್ ಕ್ರಮಾಂಕ ಬದಲಾಗಿದೆ. ಆರಂಭಿಕ ಬ್ಯಾಟರ್ ಅನೂಜ್ ರಾವತ್ ಅವರನ್ನು ಕೈಬಿಡಲಾಗಿದೆ. ಅವರ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಆಡುತ್ತಿದ್ದಾರೆ.
ಮೂರನೆ ಕ್ರಮಾಂಕದಲ್ಲಿ ರಜತ್ ಪಟಿದಾರ್ ಕಳೆದ ಪಂದ್ಯದಲ್ಲಿ 16 ರನ್ ಗಳಿಸಿದ್ದರು. ಸಿಕ್ಕ ಅವಕಾಶವನ್ನು ರಜತ್ ಉಪಯೋಗಿಸಿಕೊಳ್ಳಬೇಕಿದೆ. ಮಧ್ಯಮ ಕ್ರಮಾಂಕದಲ್ಲಿ ಗ್ಲೆನ್ ಮ್ಯಾಕ್ಸ್‍ವೆಲ್, ಶಬಾಜ್ ಅಹ್ಮದ್ ಹಾಗೂ ಸುಯೆಶ್ ಪ್ರ`ಭುದೇಸಾಯಿ ಹೊಡೆತಗಳ ಆಯ್ಕೆಯಲ್ಲಿ ಯಡವಟ್ಟು ಮಾಡಿಕೊಳ್ಳಬಾರದು. ದಿನೇಶ್ ಕಾರ್ತಿಕ್‍ಗೆ ಇತರೆ ಬ್ಯಾಟರ್‍ಗಳು ಒಳ್ಳೆಯ ಸಾಥ್ ಕೊಡಬೇಕಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಜೋಶ್ ಹೆಜ್ಲವುಡ್ ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ ಮೊಹ್ಮದ್ ಸಿರಾಜ್, ಹರ್ಷಲ್ ಪಟೇಲ್ ಹಾಗೂ ಶಾಬಾಜ್ ಅಹ್ಮದ್ ದುಬಾರಿ ಬೌಲರ್‍ಗಳಾಗಿದ್ದಾರೆ. ವನಿಂದು ಹಸರಂಗ ಫಾರ್ಮ್‍ಗೆ ಮರಳಿರುವುದು ಸಂತಸದ ವಿಚಾರವಾಗಿದೆ.
ಗುಜರಾತ್ ಟೈಟಾನ್ಸ್ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಹೊರ ಹೊಮ್ಮಿದೆ. ತಂಡದ ಬ್ಯಾಟಿಂಗ್ ದೊಡ್ಡ ಶಕ್ತಿಯಾಗಿದೆ. ಆರಂಭಿಕರಾಗಿ ವೃದ್ದಿಮಾನ್ ಸಾಹಾ ತಂಡದ ಬ್ಯಾಟಿಂಗ್‍ಗೆ ಹೊಸ ಶಕ್ತಿ ತುಂಬಿದ್ದಾರೆ.
ನಾಯಕ ಹಾರ್ದಿಕ್ ಪಾಂಡ್ಯ, ಡೇವಿಡ್ ಮಿಲ್ಲರ್ ಬೇಗನೆ ವಿಕೆಟ್ ಒಪ್ಪಿಸುತ್ತಿದ್ದಾರೆ. ಕೆಳ ಕ್ರಮಾಂಕದಲ್ಲಿ ರಾಹುಲ್ ತೆವಾಟಿಯಾ ತಂಡದ ಟ್ರಂಪ್‍ಕಾರ್ಡ್ ಆಗಿದ್ದಾರೆ.ರಶೀದ್ ಖಾನ್ ಕೂಡ ಮ್ಯಾಚ್ ವಿನ್ನರ್ ಆಗಿರುವುದು ಗುಜರಾತ್ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗಿ ಮೊಹ್ಮದ್ ಶಮಿ ಹೊರತುಪಡಿಸಿ ಲಾಕಿ ಫರರ್ಗ್ಯೂಸನ್, ಯಶ್ ದಯಾಳ್ ಅಲಜಾರಿ ಜೋಸೆಫ್ ದುಬಾರಿ ಬೌಲರ್‍ಗಳಾಗಿದ್ದಾರೆ. ಒಟ್ಟರೆ ಉಭಯ ತಂಡಗಳ ಕದನದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಲಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಆರ್‍ಸಿಬಿ ತಂಡ: ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಸ್ (ನಾಯಕ), ರಜತ್ ಪಟಿದಾರ್,ಗ್ಲೆನ್ ಮ್ಯಾಕ್ಸ್‍ವೆಲ್, ಶಬಾಜ್ ಅಹ್ಮದ್, ಸೂಯಶ್ ಪ್ರಭುದೇಶಾಯಿ, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ವನಿಂದು ಹಸರಂಗ, ಹರ್ಷಲ್ ಪಟೇಲ್, ಮೊಹ್ಮದ್ ಸಿರಾಜ್, ಜೊಶ್ ಹೆಜ್ಲ್‍ವುಡ್.
ಗುಜರಾತ್ ತಂಡ: ವೃದ್ದಿಮಾನ್ ಸಾಹಾ (ವಿಕೆಟ್ ಕೀಪರ್) ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ (ನಾಯಕ), ಡೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಅಭಿನವ್ ಮನೋಹರ್, ರಶೀದ್‍ಖಾನ್, ಲಾಕಿ ಫರ್ಗ್ಯೂಸನ್, ಅಲಜಾರಿ ಜೋಸೆಫೆ, ಯಶ್ ದಯಾಳ್, ಮೊಹ್ಮದ್ ಶಮಿ.