Recipe: ನಾವು ಸವಿಯುವ ಸ್ನ್ಯಾಕ್ಸ್ ಆರೋಗ್ಯಕ್ಕೂ ಉತ್ತಮವಾಗಿರಬೇಕು, ರುಚಿಯಾಗಿಯೂ ಇರಬೇಕು, ಸ್ನ್ಯಾಕ್ಸ್ ತಿಂದಿದ್ದೇವೆ ಅಂತಲೂ ಅನ್ನಿಸಬೇಕು. ಅಂಥ ಸ್ನ್ಯಾಕ್ಸ್ ಅಂದ್ರೆ, ಹೆಸರು ಕಾಳಿನ ಸ್ನ್ಯಾಕ್ಸ್. ಹೆಸರು ಕಾಳು ದೇಹಕ್ಕೆ ತಂಪು, ಆರೋಗ್ಯಕ್ಕೂ ಉತ್ತಮ. ಇದರಿಂದ ವಡೆ ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ.
ಬೇಕಾಗುವ ಸಾಮಗ್ರಿ: 1 ಕಪ್ ನೆನೆಸಿಟ್ಟ ಹೆಸರು ಕಾಳು, ಕಾಲು ಕಪ್ ರವಾ, 1 ಈರುಳ್ಳಿ, ಕೊಂಚ ಕೊತ್ತೊಂಬರಿ ಸೊಪ್ಪು, ಕರಿಬೇವು, ಸಣ್ಣ ತುಂಡು ಶುಂಠಿ, 2 ಹಸಿಮೆಣಸು, 1 ಸ್ಪೂನ್ ಜೀರಿಗೆ, ಹಿಂಗು, ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ನೆನೆಸಿಟ್ಟ ಹೆಸರು ಕಾಳನ್ನು ಮತ್ತೊಮ್ಮೆ ತೊಳೆದು, ನೀರು ಬಸಿದು ಒಂದು ಮಿಕ್ಸಿ ಜಾರ್‌ಗೆ ಹಾಕಿ. ಇದರೊಂದಿಗೆ ಈರುಳ್ಳಿ, ಶುಂಠಿ, ಕೊತ್ತೊಂಬರಿ ಸೊಪ್ಪು, ಹಸಿಮೆಣಸು, ಕರಿಬೇವಿನ ಎಲೆ, ಜೀರಿಗೆ ಹಾಕಿ ತರಿ ತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಮಿಕ್ಸಿಂಗ್ ಬೌಲ್‌ಗೆ ಈ ಮಿಶ್ರಣ ಹಾಕಿಕೊಳ್ಳಿ. ಇದಕ್ಕೆ ಹಿಂಗು, ರವೆ, ಉಪ್ಪು ಹಾಕಿ ಕಲಿಸಿ. ಮಸಾಲೆ ವಡೆ ಹಿಟ್ಟಿನ ಹದಕ್ಕಿರಲಿ. ಈಗ ಕಾದ ಎಣ್ಣೆಯಲ್ಲಿ ವಡೆ ಕರಿಯಿರಿ. ಮಂದ ಉರಿಯಲ್ಲಿ ಕರಿದರೆ, ವಡೆ ಕ್ರಿಸ್ಪಿಯಾಗಿ, ರುಚಿಯಾಗಿರುತ್ತದೆ. ಇದನ್ನು ಟೊಮೆಟೋ ಸಾಸ್ ಜೊತೆ ಸವಿಯಿರಿ.