Hubli News: ಹುಬ್ಬಳ್ಳಿ: ಕೇತಗಾನಹಳ್ಳಿಯಲ್ಲಿ 71 ಎಕರೆ ಗೋಮಾಳ ಭೂಮಿಯನ್ನು ಕಬಳಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಡಿ.ಸಿ.ತಮ್ಮಣ್ಣ, ಸಂಸದ ಡಾ.ಸಿ.ಎನ್. ಮಂಜುನಾಥ್ ಮುಂತಾದ ಪ್ರಭಾವಶಾಲಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕು ಎಂದು ಸಿಟಿಜನ್ ಫಾರ್ ಡೆಮಾಕ್ರಸಿ ಮುಖ್ಯಸ್ಥ ಎಸ್.ಆರ್.ಹಿರೇಮಠ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕೇತಗಾನಹಳ್ಳಿಯಲ್ಲಿ ಕಬಳಿಸಿರುವ ಭೂಮಿ 14 ಎಕರೆ ಮಾತ್ರವಲ್ಲ, 71 ಎಕರೆ 30 ಗುಂಟೆ. ಇದರಲ್ಲಿ ಪ್ರಭಾವಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ಭೂಮಿಯನ್ನು ವಶಕ್ಕೆ ಪಡೆಯಬೇಕಿದೆ ಎಂದರು.
ಇಂತಹ ಪ್ರಕರಣದ ಬಗ್ಗೆ 2014ರಲ್ಲಿ ಲೋಕಾಯುಕ್ತ ಆದೇಶದಲ್ಲಿ ರೆವಿನ್ಯೂ ಕಮಿಷನರ್ ಗೆ ಜವಾಬ್ದಾರಿ ನೀಡಿದ್ದು, ಅತಿಕ್ರಮಣದ ವಿರುದ್ಧ ಕ್ರಿಮಿನಲ್ ಕೇಸ್ ಹಾಕುವ ಕಾರ್ಯವನ್ನು ಮಾಡಬೇಕೆಂದು ಆದೇಶಿಸಿದ್ದರು. ಗ್ರಾಂಟ್ ಲೆಟರ್ ಇಲ್ಲದ ಆಸ್ತಿಯನ್ನು ಅತಿಕ್ರಮಣ ಎಂದು ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಕೇಸ್ ಹಾಕಬೇಕು ಎಂಬುವಂತಹ ಆದೇಶವಿದೆ ಎಂದು ಅವರು ಹೇಳಿದರು.
ಡಿಸೆಂಬರ್ ನಲ್ಲಿ ಕಂಟೆಂಪ್ಟ್ ಆಫ್ ಸಿವಿಲ್ ಕೇಸ್ ಕೂಡ ದಾಖಲು ಮಾಡಲಾಗಿದೆ. 2023 ಆಗಸ್ಟ್ ನಲ್ಲಿ ಮೆಮೋ ಹಾಕಿದ್ದು, ಈಗ ಹೈ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. 71 ಎಕರೆ 30 ಗುಂಟೆ ಅತಿಕ್ರಮಣ ಮಾಡಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಅವರು ಆಗ್ರಹಿಸಿದರು.