Sandalwood News: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸೋಮವಾರ ಮೊದಲ ಜಾಮೀನು ಮಂಜೂರು ಆಗಿದೆ. ಎ16 ಆರೋಪಿ ಆಗಿದ್ದ ಕೇಶವಮೂರ್ತಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇಣುಕಾಸ್ವಾಮಿ ಶವ ಸಾಗಿಸುವಲ್ಲಿ ಭಾಗಿಯಾಗಿದ್ದ ಮತ್ತು ಕೊಲೆ ಆರೋಪವನ್ನು ಹೊತ್ತು ಸೆರೆಂಡರ್ ಆಗಿದ್ದ ಕೇಶವಮೂರ್ತಿಯನ್ನು ಸಾಕ್ಷ್ಯ ನಾಶ ಪ್ರಕರಣದಲ್ಲಿ ಬಂಧನ ಮಾಡಲಾಗಿತ್ತು. ಕೇಶವಮೂರ್ತಿ ಪರ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದ್ದರು.
ಆರಂಭದಲ್ಲಿ ಕೇಶವಮೂರ್ತಿ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿತ್ತು. ಆದರೆ ತನಿಖೆ ವೇಳೆ ಕೊಲೆಯಲ್ಲಿ ಭಾಗಿಯಾಗಿಲ್ಲ. ಸಾಕ್ಷಿನಾಶ ಮಾಡಲು ಮುಂದಾಗಿ, ಐದು ಲಕ್ಷ ರು. ಹಣ ಪಡೆದು ಕೊಲೆ ನಾನೇ ಮಾಡಿದ್ದು ಎಂದು ಹೇಳಿ ಪೊಲೀಸರ ಮುಂದೆ ಸೆರೆಂಡರ್ ಆಗಿದ್ದ. ಹೀಗಾಗಿ ಪೊಲೀಸರು ಸಾಕ್ಷ್ಯನಾಶ ಆಡಿಯಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೊಲೆಯಲ್ಲಿ ನೇರವಾಗಿ ಭಾಗಿಯಾಗದ ಕಾರಣ ಕೇಶವಮೂರ್ತಿಗೆ ಜಾಮೀನು ಸಿಕ್ಕಿದೆ. ಕೇಶವಮೂರ್ತಿ ಜೊತೆಗೆ ಕಾರ್ತಿಕ್ ಮತ್ತು ನಿಖಿಲ್ ಅವರಿಗೂ ಬೇಲ್ ಸಿಕ್ಕಿದೆ.
ಗಿರಿನಗರದ ಹೀರಣ್ಣನಗುಡ್ಡದ ಕೇಶವಮೂರ್ತಿ, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನಟ ದರ್ಶನ್ ಅಭಿಮಾನಿಯಾಗಿದ್ದ ಕೇಶವಮೂರ್ತಿ, ಅದೇ ಅಭಿಮಾನದಲ್ಲೇ ಕೊಲೆ ಪ್ರಕರಣದ ಆರೋಪ ಹೊತ್ತು ಜೈಲಿಗೆ ಹೋಗಲು ಸಹ ಸಿದ್ದನಾಗಿದ್ದ. ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಮೂಲಕ ಈ ಕೃತ್ಯದಲ್ಲಿ ಕೇಶವ ಸಿಲುಕಿದ್ದ. ಹಣದಾಸೆ ತೋರಿಸಿ ದರ್ಶನ್ ಹೆಸರು ಹೇಳದೆ ಪೊಲೀಸರಿಗೆ ಶರಣಾಗುವಂತೆ ದರ್ಶನ್ ಆಪ್ತರು ಸೂಚಿಸಿದ್ದರು. ಅದರಂತೆ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಕೇಶವ ಮೂರ್ತಿ ಶರಣಾಗಿದ್ದ ಪೊಲೀಸರ ವಿಚಾರಣೆ ವೇಳೆ ಕೊಲೆ ರಹಸ್ಯವನ್ನು ಬಾಯಿ ಬಿಟ್ಟಿದ್ದ. ಈತನ ಹೇಳಿಕೆ ಆಧರಿಸಿಯೇ ತನಿಖೆ ದಿಕ್ಕು ಬದಲಾಗಿತ್ತು.