ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಐವರು ನಿರ್ದೇಶಕರು ಸೇರಿ ಮಾಡುತ್ತಿರುವ ಹೊಸ ಪ್ರಯೋಗಾತ್ಮಕ ಸಿನಿಮಾದ ಮೇಲೆ ನಿರೀಕ್ಷೆಗಳು ದುಪ್ಪಟ್ಟಿವೆ. ಈ ಐದು ಡೈರೆಕ್ಟರ್ ಪೈಕಿ ಬೆಲ್ ಬಾಟಂ ಸಿನಿಮಾ ನಿರ್ದೇಶಕ ಜಯ ತೀರ್ಥ ಆ್ಯಕ್ಷನ್ ಕಟ್ ಹೇಳಿರುವ ಕಥೆಯಲ್ಲಿ ಅಪರೇಷನ್ ಅಲಮೇಲಮ್ಮ ಖ್ಯಾತಿಯ ರಿಷಿ ಹಾಗೂ ಕನ್ನಡತಿ ಸೀರಿಯಲ್ ಭೂಮಿ ಖ್ಯಾತಿಯ ರಂಜನಿ ರಾಘವನ್ ನಟಿಸುತ್ತಿದ್ದಾರೆ.
ಕನ್ನಡತಿ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕ ಮನಗೆದ್ದಿರುವ ರಂಜನಿ ರಾಘವನ್ ಸದ್ಯ ದೂದ್ ಪೇಡ್ ನಟಿಸ್ತಿರುವ ಕ್ಷಮಿಸಿ ಖಾತೆಯಲ್ಲಿ ಹಣವಿಲ್ಲ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಜೊತೆಗೆ ಇದೀಗ ರಂಜನಿಗೆ ಹೊಸ ಆಫರ್ ಹುಡುಕಿಕೊಂಡು ಬಂದಿದೆ. ಜಯತೀರ್ಥ ಸಿನಿಮಾದಲ್ಲಿ ರಿಷಿ ಜೊತೆ ನಾಯಕಿಯಾಗಿ ರಂಜನಿ ನಟಿಸ್ತಿದ್ದಾರೆ. ಈಗಾಗ್ಲೇ ಸಿನಿಮಾದ ಶೂಟಿಂಗ್ ಶುರುವಾಗಿದ್ದು, ಮೇಕಿಂಗ್ ಫೋಟೋಗಳನ್ನು ನಿರ್ದೇಶಕ ಜಯತೀರ್ಥ ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನೂ ಆಪರೇಷನ್ ಅಲಮೇಲಮ್ಮ, ಕವಲುದಾರಿ ಮುಂತಾದ ಸಿನಿಮಾಗಳ ಮೂಲಕ ಕನ್ನಡ ಸಿನಿ ಅಭಿಮಾನಿಗಳ ಮನದಲ್ಲಿ ನೆಲೆಸಿರುವ ನಟ ರಿಷಿ ಈ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾಗಿ ಬಣ್ಣ ಹಚ್ಚಿದ್ದಾರೆ. ಅಂದಹಾಗೇ ಜಯತೀರ್ಥ, ಪವನ್ ಕುಮಾರ್, ಶಶಾಂಕ್, ಯೋಗರಾಜ್ ಭಟ್ ಹಾಗೂ ಕೆ.ಎಂ. ಚೈತನ್ಯ ಈ ಐದು ಜನ ನಿರ್ದೇಶಕ ಸಂಗಮದಲ್ಲಿ ಈ ಸಿನಿಮಾ ಮೂಡಿ ಬರ್ತಿದೆ.