ತುಮಕೂರು ಜಿಲ್ಲೆಯ ತಿಪಟೂರು ನಗರದಲ್ಲಿ ರಸ್ತೆ ಒತ್ತುವರಿ ತೆರವು ಮಾಡಲಾಗ್ತಿದೆ. ಕಳೆದ ಎರಡ್ಮೂರು ದಿನಗಳಿಂದ ನಗರಸಭೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಪೊಲೀಸರ ಬಿಗಿ ಭದ್ರತೆಯೊಂದಿಗೆ ಒತ್ತುವರಿ ಮಾಡಿಕೊಂಡಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗ್ತಿದೆ. ಆದ್ರೆ, ಕೆಲವು ಏರಿಯಾಗಳಿಗಷ್ಟೇ ಸೀಮಿತವಾಗಿರೋದು, ನಗರದ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಬಿ.ಹೆಚ್. ರಸ್ತೆ, ಹುಳಿಯಾರು ರಸ್ತೆ ಹಾಗೂ ಬಸ್ ನಿಲ್ದಾಣಗಳ ರಸ್ತೆಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಅಂಗಡಿಗಳನ್ನು, ತೆರವುಗೊಳಿಸುತ್ತಿರುವುದು ಸ್ವಾಗತ. ಆದ್ರೆ ಸಂತೆಪೇಟೆ, ಎಲೆ ಆಸರ ದೊಡ್ಡಪೇಟೆಯಲ್ಲಿ ರಸ್ತೆಗಳನ್ನ ಒತ್ತುವರಿ ಮಾಡ್ಕೊಂಡು ಅಂಗಡಿ ಇಟ್ಟುಕೊಳ್ಳಲಾಗಿದೆ. ಆದ್ರೂ ಈ ಕಡೆ ಮಾತ್ರ ಅಧಿಕಾರಿಗಳು ತಲೆ ಹಾಕಿಲ್ಲ.
ಇನ್ನು, ಅತಿಕ್ರಮವಾಗಿ ಅಂಗಡಿ ಮುಂಗಟ್ಟುಗಳನ್ನು ರಸ್ತೆಯಲ್ಲೇ ಇಟ್ಟುಕೊಂಡಿರುವುದರಿಂದ, ಪಾದಾಚಾರಿಗಳು, ಬೈಕ್ ಸವಾರರು ಹಾಗೂ ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ. ಆದರೆ, ಸ್ಥಳೀಯರ ಪ್ರಕಾರ ಇವರಿಗೆಲ್ಲಾ ನಗರಸಭೆಯ ಮಾಜಿ ಅಧ್ಯಕ್ಷರ ರಕ್ಷಣೆ ಇದೆಯಂತೆ. ಹೀಗಾಗಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗಂಭೀರ ಆರೋಪ ಕೇಳಿಬಂದಿದೆ.
ಇನ್ನಾದ್ರೂ ನಗರಸಭೆ ಅಧಿಕಾರಿಗಳು ಪ್ರಭಾವಕ್ಕೆ ಒಳಗಾಗದೇ, ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.




