Sandalwood News: ಮ್ಯಾಕ್ಸ್ ಭರ್ಜರಿ ಬ್ಯಾಟಿಂಗ್ ನಂತರ ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಹಾಗೆ ನೋಡಿದರೆ, ಬಿಲ್ಲಾ ರಂಗ ಭಾಷಾ ಸಿನಿಮಾ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಆದರೆ, ಆ ಚಿತ್ರ ಯಾವಾಗ ಸೆಟ್ಟೇರುತ್ತೆ ಅನ್ನೊದು ಮಾತ್ರ ಅಂತೆ-ಕಂತೆಯ ಮಾತುಗಳಲ್ಲೇ ನಡೆಯುತ್ತಿತ್ತು. ಈಗ ಅದೆಲ್ಲದ್ದಕ್ಕೂ ಉತ್ತರ ಸಿಕ್ಕಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಬಿಲ್ಲಾ ರಂಗ ಭಾಷಾ ಸಿನಿಮಾ ಕುರಿತು ಅಪ್ ಡೇಟ್ ಕೊಟ್ಟಿದ್ದಾರೆ.
ಅಂದಹಾಗೆ, ಸುದೀಪ್ ಸದ್ಯ ಸಿಸಿಎಲ್ ನಲ್ಲಿ ಬ್ಯುಜಿಯಾಗಿದ್ದಾರೆ. ಸುದೀಪ್ ನೇತೃತ್ವದ ತಂಡ ಚೆನ್ನಾಗಿ ಆಡುತ್ತಿದೆ. ಈ ಸಿಸಿಎಲ್ ಕುರಿತಂತೆ ಸುದೀಪ್ ಒಂದಷ್ಟು ವಿಷಯ ಹಂಚಿಕೊಂಡಿದ್ದಾರೆ. ಈ ಬಾರಿ ಸಿಸಿಎಲ್ ನ ಪ್ರಮುಖ ಪಂದ್ಯಗಳು ಮೈಸೂರಿನಲ್ಲೂ ನಡೆಯಲಿವೆ ಎಂಬ ವಿಷಯವನ್ನು ಸ್ವತಃ ಸುದೀಪ್ ಹಂಚಿಕೊಂಡಿದ್ದಾರೆ. ಈ ವಿಷಯದ ಜೊತೆಗೆ ತಮ್ಮ ಮುಂದಿನ ಸಿನಿಮಾ ‘ಬಿಲ್ಲಾ ರಂಗ ಭಾಷಾ’ ಶೂಟಿಂಗ್ ನಡೆಯುವ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.
ಇನ್ನು, ಸಿಸಿಎಲ್ ಬಗ್ಗೆ ಅತೀ ಹೆಚ್ಚು ಪ್ರೀತಿ ಇಟ್ಟುಕೊಂಡಿರುವ ಸುದೀಪ್, ಒಳ್ಳೆಯ ತಂಡ ಕಟ್ಟಿಕೊಂಡು ಮುನ್ನಡೆಸುತ್ತಿದ್ದಾರೆ. ಮೈದಾನದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಸಖತ್ ಆಟ ಆಡುತ್ತಿದೆ. ಅದರಲ್ಲೂ, ಸುದೀಪ್, ಡಾರ್ಲಿಂಗ್ ಕೃಷ್ಣ, ಗಣೇಶ್ ಸೇರಿದಂತೆ ಹಲವು ಆಟಗಾರರು ಉತ್ತಮವಾಗಿ ಆಟವಾಡುತ್ತಿದ್ದಾರೆ. ಸಿಸಿಎಲ್ ನಲ್ಲಿ ಬಿಝಿಯಾಗಿದ್ದರೂ ಸುದೀಪ್ ತಮ್ಮ ಮುಂದಿನ ಚಿತ್ರದ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆಂಬುದೇ ವಿಶೇಷ.
ಅವರ ‘ಮ್ಯಾಕ್ಸ್’ ಭರ್ಜರಿ ರೆಸ್ಪಾನ್ಸ್ ಪಡೆದು ಹಿಟ್ ಆಗಿದ್ದು ಎಲ್ಲರಿಗೂ ಗೊತ್ತಿದೆ. ಹಾಗೆ ಹೇಳುವುದಾದರೆ, ಕಳೆದ ವರ್ಷದ ಅಂತ್ಯದಲ್ಲಿ ತೆರೆಗೆ ಬಂದ ಮ್ಯಾಕ್ಸ್ ಬ್ಲಾಕ್ ಬಸ್ಟರ್ ಎನಿಸಿಕೊಂಡಿದ್ದುಂಟು. ಸದ್ಯ ಸುದೀಪ್ ಅವರು ಹೆಸರಿಡದ ಒಂದು ಸಿನಿಮಾದಲ್ಲಿ ನಟಿಸುತ್ತಿದ್ದಾರ. ಆ ಚಿತ್ರವನ್ನು ಕೆಆರ್ ಜಿ ಸ್ಟುಡಿಯೋಸ್ ನಿರ್ಮಾಣ ಮಾಡುತ್ತಿದೆ. ಇದಷ್ಟೇ ಅಲ್ಲ, ಹಲವು ದಿನಗಳಿಂದಲೂ ಸುದ್ದಿಯಲ್ಲಿದ್ದ, ನಿರೀಕ್ಷೆಯ ‘ಬಿಲ್ಲಾ ರಂಗ ಭಾಷಾ’ ಚಿತ್ರವನ್ನು ಸುದೀಪ್ ಅವರ ಫ್ಯಾನ್ಸ್ ಎದುರು ನೋಡುತ್ತಲೇ ಇದ್ದಾರೆ. ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುನ್ನವೇ ‘ಬಿಲ್ಲಾ ರಂಗ ಭಾಷಾ’ ಚಿತ್ರ ಅನೌನ್ಸ್ ಆಗಿತ್ತು. ಆದರೆ, ಶುರುವಾಗೋಕೆ ತಡವಾಗಿತ್ತು. ಕಾರಣಷ ಸ್ಕ್ರಿಪ್ಟ್ ಮತ್ತು ಇತ್ಯಾದಿ ಕೆಲಸಗಳು.
ಯಾವಾಗ ಆ ಸಿನಿಮಾ ಶುರುವಾಗುತ್ತೆ ಎಂಬ ಪ್ರಶ್ನೆಗಳು ಸುದೀಪ್ ಅವರ ಅಭಿಮಾನಿಗಳಲ್ಲಿತ್ತು. ಇದುವರೆಗೆ ಆ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡ್ತಾರೆ ಅನ್ನುವುದು ಬಿಟ್ಟರೆ, ಆ ಚಿತ್ರ ಬೇರೆ ಯಾವುದೇ ಅಪ್ಡೇಟ್ ಸಿಕ್ಕಿರಲಿಲ್ಲ. ಈಗ ಸ್ವತಃ ಸುದೀಪ್ ಅವರೇ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಿಸಿಎಲ್ ನಲ್ಲಿ ಸದ್ಯ ಬ್ಯುಸಿ ಆಗಿರುವ ಸುದೀಪ್ ಟ್ವೀಟ್ ಮಾಡಿದ್ದಾರೆ. ‘ಸಿಸಿಎಲ್ ಮೈಸೂರಿಗೆ ಬರುತ್ತಿದೆ. ಎರಡು ಸೆಮಿ ಫೈನಲ್ಸ್ ಮತ್ತು ಒಂದು ಫೈನಲ್ಸ್ ಮಾರ್ಚ್ 1 ಮತ್ತು 2 ರಂದು ಮೈಸೂರಿನಲ್ಲಿ ನಡೆಯಲಿದೆ. ಈ ವಿಷಯ ಘೋಷಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ’ ಎಂದು ಟ್ವೀಟ್ ಮಾಡಿದ್ದರು. ನಂತರ ಅದೇ ಟ್ವೀಟ್ ಅನ್ನು ರೀಟ್ವೀಟ್ ಮಾಡಿ, ಅಂದಹಾಗೆ ಬಿಆರ್ ಬಿ (ಬಿಲ್ಲಾ ರಂಗ ಭಾಷಾ) ಸಿನಿಮಾ ಮಾರ್ಚ್ 2ನೇ ವಾರದಿಂದ ಚಿತ್ರೀಕರಣ ಆರಂಭ ಆಗಲಿದೆ’ ಎಂದು ಬರೆಯುವ ಮೂಲಕ ಹೊಸ ಅಪ್ಡೇಟ್ ನೀಡಿದ್ದಾರೆ.
ಅಂತೂ ಇಂತೂ ಸುದೀಪ್ ಅವರೇ ಬಿಲ್ಲಾ ರಂಗ ಭಾಷಾ ಸಿನಿಮಾ ಬಗ್ಗೆ ಟ್ವೀಟ್ ಮೂಲಕ ಯಾವಾಗ ಶುರುವಾಗುತ್ತೆ ಅಂತ ಹೇಳಿದ್ದರಿಂದ ಅವರ ಫ್ಯಾನ್ಸ್ ಖುಷಿಯಾಗಿದ್ದಾರೆ. ಈ ಹಿಂದೆ ಸುದೀಪ್ ಅವರಿಗೆ ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಿಸಿದ್ದ ಅನೂಪ್ ಭಂಡಾರಿ, ಈ ಸಿನಿಮಾ ನಿರ್ದೇಶಿಸುತ್ತಿದ್ದು, ಇದಕ್ಕಾಗಿಯೇ ಸಾಕಷ್ಟು ತಯಾರಿ ನಡೆಸಿದ್ದಾರೆ. ಈಗ ಶುರುವಾಗುವ ಸಮಯ ಕೂಡ ಅನೌನ್ಸ್ ಆಗಿದೆ. ಅಲ್ಲಿಗೆ ಈ ಸಿನಿಮಾ ಇದೇ ವರ್ಷ ತೆರೆಗೆ ಅಪ್ಪಳಿಸುವ ಸಾಧ್ಯತೆಯೂ ಇದೆ. ಇನ್ನು, ಅನೂಪ್ ಭಂಡಾರಿ ಅವರು ಸುದೀಪ್ ಅವರಿಗೆ ‘ಬಿಲ್ಲಾ ರಂಗ ಭಾಷಾ’ ಮತ್ತು ‘ಅಶ್ವತ್ಥಾಮ’ ಈ ಎರಡು ಸಿನಿಮಾ ಕಥೆ ಹೇಳಿದ್ದರು. ಆ ಪೈಕಿ ಇದೀಗ ಮೊದಲು ‘ಬಿಲ್ಲಾ ರಂಗ ಭಾಷಾ’ ಸಿನಿಮಾ ಶುರುವಾಗುತ್ತಿದೆ. ಈ ಸಿನಿಮಾ ನಂತರ ‘ಅಶ್ವತ್ಥಾಮ’ ಚಿತ್ರ ಸೆಟ್ಟೇರಲಿದ್ದು, ಆ ಸಿನಿಮಾ ಮೂಲಕ ಮತ್ತೊಂದು ಮೋಡಿಗೆ ಈ ಜೋಡಿ ರೆಡಿಯಾಗಲಿದೆ. ಇನ್ನು, ಪರಭಾಷೆಯ ನಿರ್ದೇಶಕರು ಕೂಡ ಸುದೀಪ್ ಅವರ ಹಿಂದೆ ಬಿದ್ದಿದ್ದಾರೆ. ಆ ಪೈಕಿ ತಮಿಳಿನ ಚೇರನ್ ನಿರ್ದೇಶನದ ಸಿನಿಮಾವೊಂದರಲ್ಲೂ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ. ತಮಿಳಿನ ಮತ್ತೊಬ್ಬ ನಿರ್ದೇಶಕರ ಚಿತ್ರದಲ್ಲೂ ಸುದೀಪ್ ಹೀರೋ ಆಗುತ್ತಿದ್ದಾರೆ. ಅದೇನೆ ಇರಲಿ, ಸದ್ಯ ಸುದೀಪ್ ಸಿನಿಮಾಗಳಲ್ಲಿ ಬಿಝಿ ಆಗಬೇಕು ಅಂತ ನಿರ್ಧರಿಸಿಯಾಗಿದೆ. ಆ ಕಾರಣಕ್ಕೆ ಅವರು ಬಿಗ್ ಬಾಸ್ ಶೋ ನಡೆಸಿಕೊಡದಿರಲು ನಿರ್ಧರಿಸಿದ್ದಾರೆ. ವರ್ಷಕ್ಕೆ ಎರಡು ಸಿನಿಮಾ ಕೊಡಲೇಬೇಕು ಅನ್ನೋದು ಸುದೀಪ್ ಆಸೆ. ಆ ನಿಟ್ಟಿನಲ್ಲಿ ಸುದೀಪ್ ಸಿನಿಮಾ ಮಾಡಲು ತಯಾರಿ ಮಾಡುತ್ತಿದ್ದಾರೆ. ಅವರ ಫ್ಯಾನ್ಸ್ ಗೆ ಸದ್ಯ ಖುಷಿಯೋ ಖುಷಿ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ