Sandalwood News: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸರ ಅತಿಥಿಯಾಗಿದ್ದೇ ತಡ, ಕಳೆದೊಂದು ವಾರದಿಂದ ಒಂದೊಂದೆ ಸ್ಫೋಟಕ ವಿಚಾರಗಳು ಹೊರಬರುತ್ತಿವೆ. ದರ್ಶನ್ ಅವರ ಫಾರ್ಮ್ ಹೌಸ್ ನೋಡಿಕೊಳ್ಳುತ್ತಿದ್ದ ಮ್ಯಾನೇಜರ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಆನೇಕಲ್ ತಾಲೂಕಿನ ಬಗ್ಗನದೊಡ್ಡಿಯಲ್ಲಿ, ಏ.16ರಂದೇ ಡೆತ್ ನೋಟ್ ಬರೆದಿಟ್ಟು ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನೇಕಲ್ನಲ್ಲಿ ನಟ ದರ್ಶನ್ಗೆ ಸೇರಿದ ಸುಮಾರು 10ಎಕರೆ ಪ್ರದೇಶದಲ್ಲಿದ್ದ ಫಾರ್ಮ್ ಹೌಸ್‌ನಲ್ಲಿ ಸುಮಾರು ಒಂದು ವರ್ಷ ಕಾಲ ಮ್ಯಾನೇಜರ್ ಆಗಿ ಶ್ರೀಧರ್ ಕೆಲಸ ಮಾಡಿದ್ದರು. ವಿಷ ಸೇವಿಸಿದ ಪರಿಣಾಮ ಫಾರ್ಮ್ ಹೌಸ್ ಪಕ್ಕದಲ್ಲಿ ರಕ್ತಕಾರಿ ಶ್ರೀಧರ್ ಸಾವನ್ನಪ್ಪಿದ್ದಾರೆ. ಕಲ್ಲು ಬಂಡೆ ಮೇಲೆ ಅನಾಥವಾಗಿ ಶ್ರೀಧರ್ ಮೃತದೇಹ ಪತ್ತೆಯಾಗಿದೆ. ಶ್ರೀಧರ್ ಮೃತ ದೇಹ ಕಂಡು ಪೊಲೀಸರಿಗೆ ಸ್ನೇಹಿತರು ಮಾಹಿತಿ ನೀಡಿದ್ದರು. ಈ ಸಂಬಂಧ ಆನೇಕಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಕೂಡ ದಾಖಲಾಗಿತ್ತು. ಡೆತ್‌ನೋಟ್‌ನಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದೇನೆ ಎಂದು ಶ್ರೀಧರ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ.
“ಪೊಲೀಸ್ ಸರ್, ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರೂ ಕಾರಣ ಅಲ್ಲ. ನನ್ನ ಒಂಟಿತನ ನನಗೆ ತುಂಬಾ ಕಾಡುತ್ತಿತ್ತು, ಎಷ್ಟೇ ಪ್ರಯತ್ನ ಪಟ್ಟರೂ ನನ್ನಿಂದ ಆಗಲಿಲ್ಲ. ಅದಕ್ಕೆ ಚೆನ್ನಾಗಿ ಯೋಚನೆ ಮಾಡಿ ನನ್ನ ಸಾವಿನ ಬಗ್ಗೆ ನಿರ್ಧಾರ ಮಾಡಿ ಸಾಯುತ್ತಿದ್ದೇನೆ. ದಯವಿಟ್ಟು ನನ್ನ ಬಗ್ಗೆ ಯಾರೂ ಕೆಟ್ಟದಾಗಿ ತಿಳ್ಕೋಬೇಡಿ , ಬದುಕಿದ್ದು ಮನೆ ಕಟ್ಟಬೇಕು ಅಂತಾ ತುಂಬಾ ಆಸೆ ಇತ್ತು ಆದರೆ ಆಗ್ತಿಲ್ಲ. ನಾನು ಸತ್ತಮೇಲೆ ನನ್ನ ಗೋರಿ ಆದ್ರು ಕಟ್ಟಿ ಖುಷಿಯಾಗಿ ಇರಿ.” ಎಂದು ಡೆತ್ ನೋಟ್ ನಲ್ಲಿ ಶ್ರೀಧರ್ ಬರೆದುಕೊಂಡಿದ್ದಾರೆ.
ಒಟ್ನಲ್ಲಿ ದರ್ಶನ್ ಅರೆಸ್ಟ್ ಅದ ಬೆನ್ನಲ್ಲೆ ಶ್ರೀಧರ್ ಆತ್ಮಹತ್ಯೆ ಮಾಡಿಕೊಂಡಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.