Sunday, October 27, 2024

Latest Posts

Sandalwood news: ಚಿತ್ರ ವಿಮರ್ಶೆ: ಕುತೂಹಲದ ದಾರಿಯಲ್ಲಿ ಭಾವುಕ ಪಯಣ

- Advertisement -

Sandalwood news: ನಿರ್ಜೀವ ವಸ್ತುಗಳಿಗೆ ಜೀವ ಕೊಡ್ತೀನಿ. ಜೀವ ಇರೋದ್ದಕ್ಕೆ ಜೀವ ತೆಗಿತೀನಿ…

ಕಾನನ ನಡುವಿನ ರಸ್ತೆಯೊಂದರಲ್ಲಿ ಹೀರೋ ತನ್ನ ಕಾರಲ್ಲಿ ಸಾಗುವಾಗ, ಪಕ್ಕದಲ್ಲೇ ಕುಳಿತ ವ್ಯಕ್ತಿಯೊಬ್ಬನಿಗೆ ಈ ಮಾತನ್ನು ಹೇಳ್ತಾನೆ. ಅಂದರೆ, ಅವನೊಬ್ಬ ಕುಂಚ ಕಲಾವಿದ. ಬಣ್ಣ ತುಂಬುವ ಮೂಲಕ ಕಲಾಕೃತಿಗೆ ಜೀವ ತುಂಬುವ ಕೆಲಸ ಅವನದು. ಆದರೆ, ಜೀವ ತೆಗೆಯೋ ಕೆಲಸ ಮಾಡ್ತಾನಾ? ಇದೇ ಸಿನಿಮಾದ ಸಸ್ಪೆನ್ಸ್. ಇದೊಂದು ಥ್ರಿಲ್ಲರ್ ಕಥೆ. ಥ್ರಿಲ್ ಎನಿಸುವ ಅಂಶಗಳೇ ಹೆಚ್ಚಾಗಿವೆ. ಹೆಚ್ಚು ಪಾತ್ರಗಳಿಲ್ಲ. ಆಡಂಬರ ಇಲ್ಲದ ದೃಶ್ಯಗಳು, ಸರಾಗವಾಗಿ ಸಾಗುವ ಕಥೆಗೆ ಚಿತ್ರಕಥೆ ಕೂಡ ಗಟ್ಟಿಯಾಗಿದೆ. ಎಲ್ಲೂ ಹಳಿತಪ್ಪದ ಕಥೆ ಮತ್ತು ಚಿತ್ರಕಥೆ. ಇಲ್ಲಿ ಇಷ್ಟವಾಗೋದು, ನಿರ್ದೇಶಕರು ಹೆಣೆದ ಕಥೆ ಮತ್ತು ಜಾಣತನದ ನಿರೂಪಣೆ.

ಮೊದಲರ್ಧ ಸಿನಿಮಾ ಕಾರಿನ ಜರ್ನಿಯಲ್ಲೇ ಸಾಗುತ್ತೆ. ಕಾಡಿನ ಪರಿಸರದ ನಡುವೆ ಅಲ್ಲಲ್ಲಿ ಥ್ರಿಲ್ಲಿಂಗ್ ಎನಿಸುವ ದೃಶ್ಯಗಳು ಎದುರಾಗಿ ನೋಡುಗನಿಗೆ ಮತ್ತಷ್ಟು ಕುತೂಹಲ ಹುಟ್ಟಿಸುವಲ್ಲಿ ಸಿನಿಮಾ ಯಶಸ್ವಿಯಾಗುತ್ತೆ. ದ್ವಿತಿಯಾರ್ಧದಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಆ ತಿರುವುಗಳೇ ಸಿನಿಮಾದ ಹೈಲೆಟ್. ಅದನ್ನು ತಿಳಿಯುವ ಕುತೂಲಹವಿದ್ದರ ಒಂದೊಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ. ಒಟ್ಟಾರೆ, ಹೊಡಿ ಬಡಿ ಕಡಿ ಕಥೆಗಳ ಸಿನಿಮಾ ಮಧ್ಯೆ ಥ್ರಿಲ್ ಎನಿಸುವ ಸಸ್ಪೆನ್ಸ್ ಕಥೆಯ ಈ ಚಿತ್ರ ನೋಡುಗರಿಗೆ ರುಚಿಸುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಕಥೆಗಳನ್ನು ಇಷ್ಟಪಡುವ ವರ್ಗಕ್ಕೆ ನಿಜಕ್ಕೂ ಇಷ್ಟವಾಗುವ ಸಿನಿಮಾವಿದು.

ಕಥೆಯೇನು?

ಅಮರ್ (ನಾಯಕ) ಅವನೊಬ್ಬ ಕುಂಚ ಕಲಾವಿದ. ತನ್ನದೇ ಬಣ್ಣದ ಪ್ರಪಂಚದಲ್ಲಿ ಮಿಂದೇಳುವ ವ್ಯಕ್ತಿತ್ವ. ಅವನ ಕಲಾ ಬದುಕಲ್ಲಿ ಆಕಸ್ಮಿಕವಾಗಿ ಎಂಟ್ರಿಯಾಗುವ ನಾಯಕಿ ಜೊತೆ ಮಾತುಕತೆ ಬೆಳೆದು, ಅದು ಪ್ರೀತಿಗೂ ತಿರುಗಿ, ಇನ್ನೇನು ಮದುವೆ ಹಂತಕ್ಕೂ ತಲುಪುವ ಕ್ಷಣವದು. ಆದರೆ, ಅವರಿಬ್ಬರ ಮಧ್ಯೆ ಒಂದು ಘಟನೆ ನಡೆದು ಹೋಗುತ್ತೆ. ಅಲ್ಲೊಂದು ಆಗಬಾರದ್ದು ಆಗಿ ಹೋಗುತ್ತೆ. ಅದಕ್ಕೆ ಕಾರಣರಾದವರನ್ನು ಹುಡುಕಿ, ಅಂತ್ಯಗೊಳಿಸುವ ಗುರಿ ನಾಯಕನದ್ದು. ಅಲ್ಲಿ ನಡೆಯುವ ಘಟನೆ ಎಂಥದ್ದು, ಆ ಪಯಣದಲ್ಲಿ ಸಿಗುವ ಪಾತ್ರಗಳ್ಯಾವು, ಅಷ್ಟಕ್ಕೂ ಅಲ್ಲಿ ವಿಚಿತ್ರವಾಗಿ ವರ್ತಿಸುವರಾರು ಎಂಬುದೇ ಸಿನಿಮಾದ ಕಥೆ. ಇಲ್ಲಿ ಹಲವಾರು ಅಂಶಗಳು ನೋಡುಗರನ್ನು ಖುಷಿಪಡಿಸುತ್ತಷ್ಟೇ ಅಲ್ಲ, ಒಂದಷ್ಟು ಕುತೂಹಲವನ್ನೂ ಕೆರಳಿಸುತ್ತೆ. ಆ ಕುತೂಹಲ ನೋಡುವ ತವಕವಿದ್ದರೆ ಒಮ್ಮೆ ಆ ಪಯದ ದಾರಿಯನ್ನೊಮ್ಮೆ ಸವಿದು ಬರಬಹುದು.

ಯಾರು ಹೇಗೆ?

ಸಿನಿಮಾದಲ್ಲಿ ಬೆರಳೆಣಿಕೆ ಪಾತ್ರಗಳು ಮಾತ್ರ ಇವೆ. ಅಭಿಮನ್ಯು ಕಾಶೀನಾಥ್ ತುಂಬ ದಿನಗಳ ಬಳಿಕ ಒಳ್ಳೆಯ ಪಾತ್ರದ ಮೂಲಕವೇ ಕಾಣಿಸಿಕೊಂಡಿದ್ದಾರೆ. ಅವರಿಲ್ಲಿ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ, ಇಲ್ಲಿ ಗಮನಸೆಳೆಯುತ್ತಾರೆ. ರಗಡ್ ಲುಕ್ ಅವರಿಗೆ ಚೆನ್ನಾಗಿ ಹೊಂದಿಕೊಂಡಿದೆ. ಭಾವುಕ ಸನ್ನಿವೇಶದಲ್ಲಿ ಫೀಲ್ ತುಂಬುತ್ತಾರೆ. ನೈಜವಾಗಿಯೇ ಹೊಡೆದಾಡಿದ್ದಾರೆ. ಇನ್ನು ಹಾಡಲ್ಲೂ ವಿಶೇಷ ಎನಿಸುತ್ತಾರೆ. ನಾಯಕಿ ಸ್ಪೂರ್ತಿ ಉಡಿಮನೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅಲ್ಲಲ್ಲಿ ಕಾಡುವುದರ ಜೊತಗೆ ನೋಡುಗರನ್ನೂ ಭಾವುಕತೆಗೆ ದೂಡುತ್ತಾರೆ. ರಾಜ್ ಬಲವಾಡಿ ಅವರ ನಟನೆಯಲ್ಲಿ ನೈಜತೆ ಕಾಣುತ್ತೆ. ಉಳಿದಂತೆ ವಿಜಯಶ್ರೀ, ಶೋಭನ್, ಪ್ರದೀಪ್, ರಮೇಶ್ ನಾಯಕ್ ಇತರರು ತಮ್ಮ ಪಾತ್ರಗಳಿಗೆ ಮೋಸ ಮಾಡಿಲ್ಲ. ಸ್ಯತ್ಯ ರಾಮ್ ಛಾಯಾಗ್ರಹಣದಲ್ಲಿ ವಿರಾಜ್ ಪೇಟೆ ಆಸುಪಾಸಿನ ಪರಿಸರ ಅದ್ಭುತ ಎನಿಸುತ್ತೆ. ಪ್ರತಿ ಫ್ರೇಮ್ ನಲ್ಲೂ ಹೊಸತನವಿದೆ. ಪ್ರಣವ್ ರಾವ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ಹಿನ್ನೆಲೆ ಸಂಗೀತ ಕಥೆಗೆ ಪೂರಕವಾಗಿದೆ.

- Advertisement -

Latest Posts

Don't Miss