sandalwood News: ಕೆಲವರ ಪಾಲಿಗೆ ಸಿನಿಮಾ ನಟರು ನಿಜಕ್ಕೂ ಗಾಡ್! ಹೌದು, ಸಿನಿಮಾ ನಟರೆಂದರೆ ಬರೀ ಹೈ ಫೈ ಲೈಫು. ಯಾರ ಸಮಸ್ಯೆಗೂ ಸ್ಪಂದಿಸಲ್ಲ. ಅವರಿಗೆ ಮಾನವೀಯತೆ ಅನ್ನೋದೇ ಇಲ್ಲ ಅಂತ ಹೇಳಿಕೊಂಡು ತಿರುಗಾಡುವ ಜನರೇ ಹೆಚ್ಚು. ಆದರೆ, ಯಾರಿಗೆ ಗೊತ್ತು. ಸ್ಟಾರ್ಸ್ ಗಳ ಸಹಾಯಹಸ್ತ. ನಿಜ ಹೇಳಬೇಕೆಂದರೆ, ಅದೆಷ್ಟೋ ಅಸಹಾಯಕರಿಗೆ ನೆರವು ನೀಡಿರುವ ಸ್ಟಾರ್ ನಟರು ಎಲ್ಲೂ ಆ ಬಗ್ಗೆ ಹೇಳಿಕೊಳ್ಳುವುದಿಲ್ಲ.
ಉದಾಹರಣೆಗೆ ಕನ್ನಡ ಸಿನಿಮಾರಂಗದ ಅಪರೂಪದ ನಟ ಪುನೀತ್ ರಾಜಕುಮಾರ್. ಅದೆಷ್ಟೋ ಕಷ್ಟದಲ್ಲಿರುವ ಜನರಿಗೆ ಪುನೀತ್ ಸ್ಪಂದಿಸಿದ್ದಾರೆ. ಅವರಿಂದ ಅದೆಷ್ಟೋ ಬಡವರು ಬದುಕು ಕಟ್ಟಿಕೊಂಡಿದ್ದಾರೆ. ಬದುಕಲು ಹೋರಾಟ ನಡೆಸುತ್ತಿದ್ದವರು ಇಂದು ಬದುಕಿ ಜೀವನ ಸಾಗಿಸುತ್ತಿದ್ದಾರೆ. ಸಹಾಯ ಮಾಡಿದ್ದರೂ, ಎಲ್ಲೂ ಕೂಡ ಹೇಳಿಕೊಳ್ಳದ ನಟ ಪುನೀತ್.
ಅಪ್ಪು ಅವರಂತೆಯೇ ಕನ್ನಡದ ಅನೇಕ ಸ್ಟಾರ್ಸ್ ಗಳೂ ಇದ್ದಾರೆ. ಅವರೂ ಸಹ ಸದ್ದಿಲ್ಲದೆಯೇ ಒಂದಷ್ಟು ಅಸಹಾಯಕರಿಗೆ, ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ತಮ್ಮ ಕೈಲಾದ ನೆರವು ನೀಡಿ, ಅವರ ಬದುಕು ಹಸನು ಮಾಡುವಲ್ಲಿ ಕಾರಣರಾಗಿದ್ದಾರೆ. ಹಾಗಂತ, ಮಾಡಿದ ಸಹಾಯದ ಬಗ್ಗೆ ಅವರೆಲ್ಲೂ ಹೇಳಿಕೊಂಡಿಲ್ಲ. ಸಹಾಯ ಪಡೆದು, ಬದುಕು ನಡೆಸುತ್ತಿರುವ ಅದೆಷ್ಟೋ ಮಂದಿ ಅಂತಹವರ ಸಹಾಯವನ್ನು ಗುಣಗಾನ ಮಾಡುತ್ತಿದ್ದಾರೆ. ಈಗ ಆ ಸಾಲಿಗೆ ಕಿಚ್ಚ ಸುದೀಪ್ ಮತ್ತು ಧ್ರುವ ಸರ್ಜಾ ಕೂಡ ಸೇರಿದ್ದಾರೆ ಅಂದರೆ ತಪ್ಪಿಲ್ಲ.
ಸಾಮಾನ್ಯವಾಗಿ ಬೇರೆಯವರ ಕಷ್ಟಕ್ಕೆ ಚಿತ್ರರಂಗದ ಸ್ಟಾರ್ ನಟರು ವರು ಸ್ಪಂದಿಸೋದೇ ಇಲ್ಲ ಎಂಬ ಅಭಿಪ್ರಾಯ ಹಲವರಲ್ಲಿದೆ. ಕೇವಲ ತಮ್ಮ ಸಿನಿಮಾಗಳು ರಿಲೀಸ್ ಆಗುವ ವೇಳೆ ಮಾತ್ರ ಜನಸಾಮಾನ್ಯರು ಇವರಿಗೆ ನೆನಪಾಗುತ್ತಾರೆ ಎಂಬ ಮಾತೂ ಇದೆ.
ಆದರೆ, ಈ ಮಾತಿಗೆ ಅಪವಾದ ಎಂಬಂತೆ ಕೆಲ ಸ್ಟಾರ್ಸ್ ಗಳು, ಕೆಲವರಿಗೆ ಕಷ್ಟ ಇದೆ ಅಂತ ಗಮನಕ್ಕೆ ಬರುತ್ತಿದ್ದಂತೆಯೇ ತಮ್ಮ ಕೈಲಾದ ಸಹಾಯ ಮಾಡೋಕೆ ಮುಂದಾಗುತ್ತಾರೆ. ದೊಡ್ಡ ಸಮಸ್ಯೆ ಅಂತ ಗೊತ್ತಾದರೆ, ನೆರವು ನೀಡುವುದರ ಜೊತೆಗೆ ತಮ್ಮ ಫ್ಯಾನ್ಸ್ ಗೂ ಕೂಡ ನೆರವಾಗಿ ಅಂತ ಮನವಿ ಮಾಡ್ತಾರೆ. ಆ ಮೂಲಕ ನೊಂದವರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಾರೆ. ಅದಕ್ಕೆ ಸದ್ಯದ ಉದಾಹರಣೆ ಸುದೀಪ್ ಮತ್ತು ಧ್ರುವ.
ಹಾಗೆ ನೋಡಿದರೆ, ಧ್ರುವ ಸರ್ಜಾ ಅವರು ಮೊದಲಿನಿಂದಲೂ ಕಷ್ಟದಲ್ಲಿರುವ ಅನೇಕರಿಗೆ ಸಹಾಯ ಮಾಡಿಕೊಂಡೇ ಬಂದಿದ್ದಾರೆ. ಎಲ್ಲೂ ಕೂಡ ತಾವು ಮಾಡಿದ ಸಹಾಯ ಬಗ್ಗೆ ಹೇಳಿಕೊಂಡವರಲ್ಲ. ಈಗ ಕಣ್ಣಿನಲ್ಲಿ ಪೊರೆ ಬೆಳೆದ ಪುಟ್ಟ ಬಾಲಕನ ಕಣ್ಣಿನ ಚಿಕಿತ್ಗೆಗೆ ನೆರವಾಗಿದ್ದಾರೆ.
ಈ ಮೂಲಕ ಮಾನವೀಯತೆ ಮೆರೆದಿದ್ದಾರೆ. ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದ ಚಿರಂಜೀವಿಯ ಶಸ್ತ್ರ ಚಿಕಿತ್ಸೆಗೆ ಮಂಜುನಾಥ ನೇತ್ರಾಲಯದ ವೈದ್ಯರ ಬಳಿ ಮಾತನಾಡಿ, ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿದ್ದಾರೆ. ಸ್ವಂತ ಖರ್ಚಿನಲ್ಲಿ ಬಾಲಕನ ಶಸ್ತ್ರ ಚಿಕಿತ್ಸೆ ಮಾಡಿಸಿದ್ದಾರೆ. ಈ ಮೂಲಕ ದೃಷ್ಟಿದೋಷ ನಿವಾರಣೆ ಮಾಡಿದ್ದಾರೆ.
ಧ್ರುವ ಅವರ ಈ ಕಾರ್ಯ ಶ್ಲಾಘಿಸಿರುವ ಬಾಲಕನ ತಂದೆ ಕೃತಜತೆ ಸಲ್ಲಿಸಿದ್ದಾರೆ. ಗಾರೆ ಕೆಲಸ ಮಾಡಿ ಬದುಕು ಸವೆಸುವ ಬಾಲಕನ ತಂದೆ, ಹೇಳಿದ್ದಿಷ್ಟು. ನನ್ನ ಮಗನಿಗೆ ಕಣ್ಣಿನ ಸಮಸ್ಯೆ ಇತ್ತು. ಧ್ರುವ ಸರ್ಜಾ ಅವರ ಬಳಿ ಆ ಬಗ್ಗೆ ಹೇಳಿಕೊಂಡಿದ್ದೆ. ಅವರು ಕೂಡಲೇ ಆಸ್ಪತ್ರೆಗೆ ಕರೆ ಮಾಡಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಅವರಿಂದ ನನ್ನ ಮಗನ ಕಣ್ಣಿನ ದೃಷ್ಟಿ ಸರಿ ಹೋಗಿದೆ. ಅವರ ಈ ಕಾರ್ಯದಿಮದ ನನ್ನ ಮಗ ಪ್ರಪಂಚ ನೋಡುವಂತಾಗಿದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ.
ನಿಮ್ಮ ಈ ಸಹಾಯಕ್ಕೆ ನಾನು ಸಾಯುವವರೆಗೆ ಚಿರಋಣಿ ಆಗಿರುತ್ತೇನೆ ಎಂದಿರುವ ಬಾಲಕನ ಪೋಷಕರು, ಇದರ ಬಗ್ಗೆ ನಾನು ಹೊರಗೆ ಹೇಳಿದರೆ ನೀವು ಬೈಯ್ಯುತ್ತೀರಿ ಎಂದು ಗೊತ್ತಿದೆ. ಆದರೂ ನಿಮ್ಮ ಈ ಸಹಾಯ ಎಲ್ಲರಿಗೂ ಗೊತ್ತಾಗಬೇಕು ಅಂತ ಹೇಳುತ್ತಿದ್ದೇನೆ ಎಂದಿದ್ದಾರೆ. ಇನ್ನು ಈ ಕುರಿತು ಮಂಜುನಾಥ ನೇತ್ರಾಲಯದ ವೈದ್ಯರು ಕೂಡ ಮಾತನಾಡಿದ್ದು, ಆ ಬಾಲಕನನ್ನು ಧ್ರುವಾ ಸರ್ಜಾ ಕಳಿಸಿದ್ದರು. ಪರೀಕ್ಷೆ ಮಾಡಿದಾಗ ಪೊರೆ ಇರುವುದು ಗೊತ್ತಾಯ್ತು. ನಾವು ಕೂಡಲೇ ಆಪರೇಷನ್ ಮಾಡಿ ಸರಿಪಡಿಸಿದೆವು ಎಂದಿದ್ದಾರೆ. ಆದರೆ, ಈ ವಿಷಯ ಪ್ರಚಾರ ಮಾಡಬೇಡಿ ಎಂದಿದ್ದರು ಧ್ರುವ. ಆದರೆ ಇದೊಂದು ಒಳ್ಳೆಯ ಕೆಲಸ. ಇಂತಹ ಸಾಮಾಜಿಕ ಕೆಲಸ ಇನ್ನಷ್ಟು ಆಗಲಿ ಎಂದಿದ್ದಾರೆ ವೈದ್ಯರು.
ಇನ್ನು, ಬಾಲಕನಿಗೆ ಬೆಳಕು ತೋರಿದ ಧ್ರುವ ಸರ್ಜಾ ಅವರ ಕಾರ್ಯ ಒಂದು ಕಡೆಯಾದರೆ, ಇನ್ನು, ಕಿಚ್ಚ ಸುದೀಪ್ ಅವರು ಕೂಡ ಇಲ್ಲಿಯವರೆಗೆ ಅದೆಷ್ಟೋ ಅನಾರೋಗ್ಯದಿಂದ ಬಳಲುತ್ತಿದ್ದವರಿಗೆ ಚಿಕಿತ್ಸೆ ಕೊಡಿಸಿ, ಬದುಕಿಸಿರುವುದೂ ಉಂಟು. ತಾವು ಮಾಡಿದ ಸಹಾಯ ಬಗ್ಗೆ ಎಂದಿಗೂ ಹೇಳಿಕೊಳ್ಳದ ಸುದೀಪ್, ಕೈಲಾದಷ್ಟು ಬಡವರಿಗೆ, ಅಸಹಾಯಕರಿಗೆ, ನೊಂದವರಿಗೆ ಸಹಾಯ ಹಸ್ತ ಚಾಚಿದ್ದುಂಟು. ಈಗ ಅವರ ಮತ್ತೊಂದು ಘಟ್ಟದ ಬಗ್ಗೆ, ಸಾಮಾಜಿಕ ಕೆಲಸ ಮತ್ತು ಮನಮಿಡಿಯೋ ಕಾರ್ಯದ ಬಗ್ಗೆ ಹೇಳಲೇಬೇಕು.
ಸುದೀಪ್ ಅವರು ಬರೀ ಸಿನಿಮಾ ಮೂಲಕ ಸ್ಟಾರ್ ಆಗಿ ಅಭಿಮಾನಿಗಳನ್ನು ಪಡೆದವರಲ್ಲ. ಅದರಾಚೆಗೂ ಮಾಡಿರುವ ಒಂದಷ್ಟು ಸಾಮಾಜಿಕ ಕೆಲಸಗಳು, ಮಾನವೀಯತೆಯಿಂದಾಗಿಯೂ ಅನೇಕ ಜನರ ಪ್ರೀತಿಗೆ ಪಾತ್ರರಾದವರು. ಸಿನಿಮಾ ಹೊರತಾಗಿಯೂ ಸಮಾಜಮುಖಿ ಕೆಲಸದಲ್ಲೂ ಸದಾ ಮುಂದೆ ಇರುವವರು. ಸಂಕಷ್ಟದಲ್ಲಿರುವ ಅದೆಷ್ಟೋ ಜನರ ನೆರವಿಗೆ ಸುದೀಪ್ ನಿಂತವರು. ಈಗ ಮತ್ತೊಂದು ಮನಮಿಡಿಯುವ ಅವರ ಕೆಲಸದ ಬಗ್ಗೆ, ದಿಟ್ಟ ಹೆಜ್ಜೆಯ ಬಗ್ಗೆ ಹೇಳಲೇಬೇಕು. ತಮ್ಮ ಅಭಿಮಾನಿಯೊಬ್ಬರ ಪುಟ್ಟ ಮಗಳ ಚಿಕಿತ್ಸೆಗಾಗಿ ಸಹಾಯ ಮಾಡುವಂತೆ ಸ್ವತಃ ಸುದೀಪ್ ಅವರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಅಂದಹಾಗೆ, ಆ ವಿಡಿಯೋದಲ್ಲಿ ಸುದೀಪ್ ಹೇಳಿರುವುದಿಷ್ಟೇ. ಈ ವಿಡಿಯೋ ನೋಡುತ್ತಿರುವ ಪ್ರತಿಯೊಬ್ಬರಿಗೂ ಕಿಚ್ಚನ ನಮಸ್ತೆ. ವಿಡಿಯೋ ಮಾಡಲು ಬಹಳ ಮುಖ್ಯವಾದ ಕಾರಣ ಇದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರ್ ಹಾಗೂ ಅವರ ಪತ್ನಿ ನಾಗಶ್ರೀ ದಂಪತಿಗೆ 1 ವರ್ಷ 10 ತಿಂಗಳ ಪುಟ್ಟ ಮಗಳಿದ್ದಾಳೆ. ಆ ಮಗುವಿನ ಹೆಸರು ಕೀರ್ತನಾ. ಆ ಮುಗ್ಧ ಕಂದಮ್ಮನಿಗೆ ಸ್ಪೈನ್ ಮ್ಯಾಸ್ಕ್ಯೂಲಾರ್ ಅಟ್ರೋಫಿ ಎಂಬ ಆರೋಗ್ಯ ಸಮಸ್ಯೆ ಇದೆ.
ಇದು ಬಹಳ ಅಪರೂಪದ ಕಾಯಿಲೆ. ಈ ಕಾಯಿಲೆಗೆ ಔಷಧಿ ಇದೆ. ಗುಣವಾಗುವ ಸಾಧ್ಯತೆಯಿದೆ. ಆದರೆ ಆ ವೈದ್ಯಕೀಯ ಚಿಕಿತ್ಸೆಗೆ ಬೇಕಾದ ಹಣ ಎಷ್ಟು ಎಂದು ಕೇಳಿದಂತೆ ಮೈ ಜುಮ್ ಅನಿಸುತ್ತದೆ. ಈ ಚಿಕಿತ್ಸೆ ಬೇಕಾಗಿರುವುದು 16 ಕೋಟಿ ರೂಪಾಯಿ. ಪೋಷಕರು ಆಸ್ತಿ ಮಾರಿ ಮಗುವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಸಾಕಷ್ಟು ಜನರು ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸಹಾಯ ಮಾಡಲು ಮುಂದೆ ಬಂದಿದ್ದಾರೆ. ನನ್ನ ಕೈಲಾದ ಸಹಾಯ ನಾನು ಮಾಡಿದ್ದೀನಿ. ನೀವು ನಿಮ್ಮ ಕೈಯಲ್ಲಿ ಆದಷ್ಟು ಸಹಾಯ ಮಾಡಿ ಎಂದು ವಿಡಿಯೋದಲ್ಲಿ ಸುದೀಪ್ ಮನವಿ ಮಾಡಿದ್ದಾರೆ.
ಸುದೀಪ್ ಅವರು ಮನವಿ ಮಾಡಿದ್ದಾರೆ ಅಂದರೆ ಮೊದಲು ಮಿಡಿಯುವ ಹೃದಯಗಳೆಂದರೆ ಅವರ ಅಪ್ಪಟ ಫ್ಯಾನ್ಸ್. ಕಿಚ್ಚನ ಮಾತು ಒಂದು ರೀತಿ ಆದೇಶದಂತೆ ಪಾಲಿಸುವ ಅಭಿಮಾನಿಗಳು ಖಂಡಿತ ತಮ್ಮ ಕೈಲಾದ ಸೇವೆ ಮಾಡುತ್ತಾರೆ. ಮಗುವಿನ ಚಿಕಿತ್ಸೆಗಾಗಿ ನಿಂತ ಕಿಚ್ಚನ ಈ ನಡೆ ಬಗ್ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲರೂ ಕೈಲಾದಷ್ಟು ಮಗುವಿನ ಚಿಕಿತ್ಸೆಗೆ ಸಹಾಯ ಮಾಡಿ ಎಂದು ಮನವಿ ಮಾಡಿರುವುದನ್ನು ಫ್ಯಾನ್ಸ್ ಭೇಷ್ ಎಂದಿದ್ದಾರೆ.
ಅದೇನೆ ಇರಲಿ, ಇಂತಹ ಮನೋಭಾವ ಮತ್ತು ಪ್ರೀತಿಯ ಕಾಳಜಿ ಎಲ್ಲರಲ್ಲೂ ಇರುತ್ತೆ. ಒಮ್ಮೊಮ್ಮೆ ಚಿಕಿತ್ಸೆ ವೆಚ್ಚ ಜಾಸ್ತಿ ಅಂದಾಗ ಸ್ಟಾರ್ಸ್ ಗಳು ಮನವಿ ಮಾಡುತ್ತಾರೆ. ಅಂಥದ್ದೊಂದು ಮನವಿ ಸುದೀಪ್ ಕೂಡ ಮಾಡಿದ್ದಾರೆ. ಕನ್ನಡಿಗರು ಮನಸ್ಸು ಮಾಡಿದರೆ, ಆ ಮಗುವಿನ ಚಿಕಿತ್ಸೆಗೆ ತಗಲುವ ವೆಚ್ಚ ಭರಿಸೋದು ಕಷ್ಟವೇನಲ್ಲ. ಆದಷ್ಟು ಬೇಗ ಕೀರ್ತನಾ ಆರೋಗ್ಯ ಸರಿಯಾಗಲಿ ಅನ್ನುವುದು ಎಲ್ಲರ ಪ್ರಾರ್ಥನೆ.