Saturday, January 25, 2025

Latest Posts

Sandalwood News: ಕಿಚ್ಚನ ಬೇಸರದ ಕಥೆ! ಪ್ರಶಸ್ತಿ ತಿರಸ್ಕಾರ ಹಿಂದಿನ ಗುಟ್ಟು

- Advertisement -

Sandalwood News: 2019ರಲ್ಲಿ ರಿಲೀಸ್ ಆದ ಸಿನಿಮಾಗಳಿಗೆ ಇದೀಗ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಸುದೀಪ್ ಅವರ ಪೈಲ್ವಾನ್ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ. ಆಚ್ಚರಿ ಅಂದರೆ, ಸುದೀಪ್ ಅವರು ಈ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಅಂದಹಾಗೆ, ಅವರು ಇಂತಹ ಪ್ರಶಸ್ತಿಗಳನ್ನು ನಿರಾಕರಿಸುತ್ತಿರೋದು ಇದೇ ಮೊದಲೇನಲ್ಲ. ಹಲವು ವರ್ಷಗಳಿಂದಲೂ ಅವರು ಯಾವುದೇ ಸನ್ಮಾನ ಆಗಲಿ, ಪ್ರಶಸ್ತಿಯಾಗಲಿ ಸ್ವೀಕರಿಸುತ್ತಿಲ್ಲ. ಈ ಕಾರಣಕ್ಕೆ ಸುದೀಪ್ ಅಂದರೆ ಒಂದಷ್ಟು ಮಂದಿಗೆ ಅದೊಂಥರಾ ಪ್ರೀತಿ. ನಮ್ಮವರು ಅನ್ನುವ ಭಾವ. ಇಷ್ಟಕ್ಕೂ ಸುದೀಪ್ ಯಾಕೆ ಪ್ರಶಸ್ತಿಗಳನ್ನು ಸ್ವೀಕರಿಸುವುದಿಲ್ಲ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಅದಕ್ಕೆ ಒಂದಷ್ಟು ಕಾರಣಗಳು ಇವೆ.

ಸುದೀಪ್ ಅವರಂತೆ ಒಂದಷ್ಟು ಸೆಲಿಬ್ರಿಟಿಗಳು ಕೂಡ ಪ್ರಶಸ್ತಿಯಿಂದ ಗಾವುದ ದೂರ ಇರೋದು ಗೊತ್ತೇ ಇದೆ. ಅದಕ್ಕೆ ಅವರದೇ ಆದಂತಹ ಹಲವಾರು ಕಾರಣಗಳೂ ಇವೆ. ಬಾಲಿವುಡ್ ನಟ ಅಮೀರ್ ಖಾನ್ ಯಾವುದೇ ಅವಾರ್ಡ್ ಕಾರ್ಯಕ್ರಮಗಳಿಗೆ ಹೋಗಲ್ಲ. ಹಾಗೆಯೇ, ನಟ ಸುದೀಪ್ ಕೂಡ ಅಂಥದ್ದೇ ನಿಯಮ ಅನುಸರಿಸುತ್ತಿದ್ದಾರೆ. ಹಲವಾರು ಪ್ರಶಸ್ತಿ ಸಮಾರಂಭಗಳಿಗೆ ಹೊಗಿದ್ದುಂಟು. ಆದರೆ, ತಮಗೆ ಪ್ರಶಸ್ತಿ ಬಂದರೆ, ನಯವಾಗಿಯೇ ತಿರಸ್ಕರಿಸುತ್ತಾರೆ. ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಆದರೆ, ಅವರು ಅದನ್ನು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಈ ನಿರ್ಧಾರಕ್ಕೆ ಬೇಸರದ ಕಥೆಯಿದೆ. ಆ ನೋವಿನ ಕಥೆ ಏನೆಂಬುದನ್ನು ಹೇಳ್ತೀನಿ.

ಸುದೀಪ್ ಕನ್ನಡದ ಬಿಗ್ ಸ್ಟಾರ್. ಅವರ ನಟನೆಯ ಮತ್ತು ನಿರ್ದೇಶನದ ಚಿತ್ರಗಳು ಯಶಸ್ಸು ಕಂಡಿವೆ. ಆದರೆ ಅದೇಕೋ ಏನೋ, ಕೆಲವು ವರ್ಷಗಳಿಂದ ತಮಗೆ ಬಂದ ಪ್ರಶಸ್ತಿಗಳನ್ನು ಸುದೀಪ್ ನಿರಾಕರಿಸುತ್ತಲೇ ಬಂದಿದ್ದಾರೆ. ಈ ನಿರಾಕರಣೆಯ ಹಿಂದೆ ಅದರದ್ದೇ ಆದ ನೋವಿನ ಕಥೆ ಇದೆ ಎಂದು ಹೇಳಲಾಗುತ್ತಿದೆ. ಹಾಗೆ ಹೇಳುವುದಾದರೆ, ಆ ಎರಡು ಘಟನೆಗಳಿಂದ ಅವರಿಗೆ ಬೇಸರ ಆಗಿರೋದು ನಿಜ ಎಂದು ಗಾಂಧಿನಗರ ಹೇಳುತ್ತಿದೆ.

ಹಾಗಾದರೆ ಅದೆಂಥಾ ನೋವಿನ ಕಥೆ? ಅನ್ನುವುದಾದರೆ, 2004ರಲ್ಲಿ ಬಂದ ‘ರಂಗ ಎಸ್ಎಸ್ಎಲ್​ಸಿ’ ಮತ್ತು 2008 ರಲ್ಲಿ ಬಂದ ‘ಮುಸ್ಸಂಜೆ ಮಾತು’ ಸಿನಿಮಾಗಳಿಗೆ, ಪ್ರಶಸ್ತಿ ಕಮಿಟಿಯಲ್ಲಿದ್ದಂತವರೇ ಸುದೀಪ್‌ಗೆ ಕಾಲ್ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರಂತೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಾಗ ಅವಾರ್ಡ್ ಬಂದಿದೆ ಎಂದರೆ ಯಾರಿಗೆ ತಾನೆ ಖುಷಿ ಆಗಲ್ಲ ಹೇಳಿ? ಅಂತಹ ಖುಷಿ ಸುದೀಪ್ ಅವರಿಗೂ ಸಹಜವಾಗಿ ಆಗಿತ್ತು. ಹಾಗಾಗಿ ಅಂದು ಇದ್ದಂತಹ ಅವಾರ್ಡ್​ ಕಮಿಟಿಯವರ ಮಾತನ್ನು ಕೇಳಿ ಸುದೀಪ್ ಸಂಭ್ರಮಿಸಿದ್ದರಂತೆ ಎಂಬ ಅಂತೆ-ಕಂತೆಗಳಿವೆ.

ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಮಾತ್ರ ಅಲ್ಲಿದ್ದ ಪ್ರಶಸ್ತಿ ಬೇರೆ ನಟರ ಪಾಲಾಗಿತ್ತು! ಈ ಎರಡು ಘಟನೆಯಿಂದಾಗಿಯೇ ಅವರು ಮುಂದೆಂದೂ ತಮಗೆ ಬರುವ ಪ್ರಶಸ್ತಿಗಳನ್ನು ಸ್ವೀಕರಿಸಲೇಬಾರದು ಅಂತ ದೃಢ ನಿರ್ಧಾರ ಮಾಡಿಕೊಂಡಿದ್ದಾರೆ ಎಂಬುದು ಗಾಂಧಿನಗರಿಗರ ಮಾತು. ಈ ಮೊದಲು ‘ಸೈಮಾ ಅವಾರ್ಡ್​’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಅವರು ಯಾವುದೇ ಅವಾರ್ಡ್ ಸ್ವೀಕರಿಸಿಲ್ಲ ಅನ್ನೋದನ್ನು ಗಮನಿಸಲೇಬೇಕು.

ಕಿಚ್ಚ ಸುದೀಪ್ ಅವರಿಗೆ ‘ಪೈಲ್ವಾನ್’ ಚಿತ್ರದ ನಟನೆಗೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ’ ಅವಾರ್ಡ್ ನೀಡಿ ಗೌರವಿಸಿತ್ತು. ಇದಕ್ಕೆ ಟ್ವೀಟ್ ಮಾಡಿದ್ದ ಸುದೀಪ್, ‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವೈಯಕ್ತಿಕ ಕಾರಣಗಳಿವೆ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಅವಾರ್ಡ್ ಬೇಡ ಎಂದಿದ್ದಾರೆ.

ಈ ಹಿಂದೆ ಸುದೀಪ್ ಅವರು ಡಾಕ್ಟರೇಟ್ ಗೌರವವನ್ನು ನಿರಾಕರಿಸಿದ್ದರು. ಈಗ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದಾರೆ. ಹಿಂದೆ ಡಾ.ವಿಷ್ಣುವರ್ಧನ್ ಕೂಡ ರಾಜ್ಯ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಆ ವರ್ಷ ರಮೇಶ್ ಅರವಿಂದ್ ಅವರ ಹೂ ಮಳೆ ಮತ್ತು ವಿಷ್ಣುವರ್ಧನ್ ಅವರ ವೀರಪ್ಪ ನಾಯ್ಕ ಸಿನಿಮಾಗೆ ರಾಜ್ಯ ಪ್ರಶಸ್ತಿ ಹಂಚಲಾಗಿತ್ತು. ಒಂದು ಘನವೆತ್ತ ಪ್ರಶಸ್ತಿಯನ್ನು ಹೀಗೆ ಸೀಳಿ ಹಂಚಿದ್ದನ್ನು ವಿರೋಧಿಸಿದ್ದ ವಿಷ್ಣುವರ್ಧನ್, ನಯವಾಗಿ ಪ್ರಶಸ್ತಿಯನ್ನು ನಿರಾಕರಿಸಿದ್ದರು. ಅದು ಸರ್ಕಾರಕ್ಕೆ ಮುಜುಗರ ತಂದಿತ್ತು. ಅದಾದ ಮೇಲೆ ರಾಜ್ಯ ಸರ್ಕಾರ ಅವರನ್ನು ಒಂದು ರೀತಿ ಬ್ಲಾಕ್ ಲಿಸ್ಟ್ ಗೆ ಹಾಕಿತ್ತು.

ಅಲ್ಲಿಂದಾಚೆಗೆ ಅವರಿಗೆ ಸರ್ಕಾರ ಮಟ್ಟದ ಯಾವುದೇ ಪ್ರಶಸ್ತಿಯೂ ಬರಲಿಲ್ಲ. ಮಾತಾಡ್ ಮಾತಾಡ್ ಮಲ್ಲಿಗೆಯಂತಹ ಸಿನಿಮಾಗೂ ಅವರನ್ನು ಪ್ರಶಸ್ತಿಗೆ ಪರಿಗಣಿಸಿರಲಿಲ್ಲ. ಕೊನೆಗೆ ಅವರು ನಮ್ಮನ್ನು ಅಗಲಿದ ಬಳಿಕ ಆಪ್ತರಕ್ಷಕ ಸಿನಿಮಾಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿದರು.

ನಾವು ಅಂತಹವರಲ್ಲ ಅಂತ ತೋರಿಸಿಕೊಳ್ಳುವ ಪ್ರಯತ್ನವನ್ನೂ ಸರ್ಕಾರ ಮಾಡಿತ್ತು. ಆದರೂ, ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ ವಿಷಯ ಕನ್ನಡಿಗರಿಗೆ ಗೊತ್ತಿಲ್ಲದ್ದೇನಲ್ಲ. ಇದೀಗ ಕಿ್ಚ ಸುದೀಪ್ ಅವರ ಸರದಿ. ಆದರೆ, ಸುದೀಪ್ ಅವರಿಗೆ ವಿಷ್ಣುವರ್ಧನ್ ಅವರಿಗೆ ಹಂಚಿದಂತೆ ಪ್ರಶಸ್ತಿಯನ್ನು ಹಂಚಿಲ್ಲ ಆದರೂ ಸುದೀಪ್ ಯಾಕೆ ನಿರಾಕರಿಸಿದರು ಎಂಬ ಪ್ರಶ್ನೆ ಎಲ್ಲರದ್ದು.

ಅವರಿಗೆ ಇಪ್ಪತ್ತು ವರ್ಷಗಳ ಹಿಂದೆ ನಂದಿ ಸಿನಿಮಾಗೆ ಪ್ರಶಸ್ತಿ ಸಿಕ್ಕಿದ್ದು ಬಿಟ್ಟರೆ, ಇದುವರೆಗೆ ಮತ್ತೊಂದು ರಾಜ್ಯ ಪ್ರಶಸ್ತಿ ಬಂದಿರಲಿಲ್ಲ. ಈ ಕಡೆಗಣನೆಯೂ ಒಂದು ಕಾರಣವಾಯಿತಾ? ಅಥವಾ ಪ್ರಶಸ್ತಿಗಳ ಮುಲಾಜಿಗೆ ಒಳಗಾಗಬಾರದು ಎಂದುಕೊಂಡರಾ ಅಥವಾ ಪ್ರಶಸ್ತಿಗಳು ನಮ್ಮ ಸಾಧನೆಗೆ ಅಳತೆದಂಡವಲ್ಲ ಎಂಬ ಸಂದೇಶ ಕೊಡ್ತಿದ್ದಾರಾ ಅಥವಾ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೊಂಡಂತೆ, ಉದಯೋನ್ಮುಖರಿಗೆ ಸಿಗಲಿ ಎಂದು ಭಾವಿಸಿದರಾ? ಗೊತ್ತಿಲ್ಲ. ಕಾರಣ ಏನೇ ಇರಲಿ, ಅವರನ್ನು ಪ್ರೀತಿಸುವ ಅಸಂಖ್ಯಾತ ಮನಸುಗಳಿಗೆ ಇದು ಖಂಡಿತ ನೋವುಂಟು ಮಾಡಿದೆ.

- Advertisement -

Latest Posts

Don't Miss