Sandalwood News: ನಟ, ನಿರ್ದೇಶಕ ರಿಷಬ್ ಶೆಟ್ಟಿಗೆ ಶತ್ರುಗಳು ಹೆಚ್ಚಾಗಿದ್ದಾರಾ? ಅವರಿಗೆ ಕೇಡು ಬಯಸುವ ಮಂದಿ ಜಗತ್ತಿನೆಲ್ಲೆಡೆ ಇದ್ದಾರಾ? ಅವರಿಗೂ ಪದೇ ಪದೇ ಸಮಸ್ಯೆಗಳು ಕಾಡುತ್ತಿವೆಯಾ? ಇಂತಹ ಪ್ರಶ್ನೆಗಳೊಂದಿಗೆ ಇದೀಗ ಅವರು ನಂಬಿರುವ ಪಂಜುರ್ಲಿ ದೈವ ರಿಷಬ್ ಅವರಿಗೆ ಅಭಯ ನೀಡಿರುವುದಲ್ಲದೆ ಎಚ್ಚರಿಕೆಯನ್ನೂ ನೀಡಿದೆ.
ಹೌದು, ಮಂಗಳೂರು ಭಾಗದಲ್ಲಂತೂ ದೈವ ಆರಾಧನೆ ಹೆಚ್ಚು. ಅಲ್ಲಿನ ಬಹುತೇಕರು ದೈವಕ್ಕೆ ತಲೆಬಾಗುತ್ತಾರೆ. ದೈವ ಹೇಳಿದ್ದನ್ನು ಮಾಡುತ್ತಾರೆ. ಕಷ್ಟ ಅಂದಾಗ ದೈವದ ಮೊರೆ ಹೋಗುತ್ತಾರೆ. ಸೇವೆ ಮಾಡುತ್ತಾರೆ. ಹರಕೆ ಕಟ್ಟಿಕೊಳ್ಳುತ್ತಾರೆ. ಈಗ ನಟ ರಿಷಬ್ ಶೆಟ್ಟಿ ಕೂಡ ದೈವದ ಮೊರೆ ಹೋಗಿದ್ದು, ಆ ದೈವ ಈಗ ರಿಷಬ್ ಗೆ ಶತ್ರುಗಳು ಹೆಚ್ಚಾಗಿರುವ ಬಗ್ಗೆ ಹೇಳಿದೆ. ನಿನಗೆ ಕೇಡು ಬಯಸುವ ಮಂದಿ ಇದ್ದಾರೆ ಅಂತ ಹೇಳಿದೆ. ಅಷ್ಟೇ ಅಲ್ಲ, ನೀನು ಹರಕೆ ಕಟ್ಟಿಕೋ, ನನ್ ಸೇವೆ ಮಾಡು ನಾನು ನಿನಗೆ ಒಳ್ಳೆಯದ್ದನ್ನೇ ಮಾಡ್ತೀನಿ ಎಂದು ಹೇಳಿದೆ.
ಇಷ್ಟಕ್ಕೂ ರಿಷಬ್ ಶೆಟ್ಟಿ ದೈವದ ಮೊರೆ ಹೋಗಿದ್ದೇಕೆ, ಅಲ್ಲಿ ನಡೆದಿದ್ದೇನು ಅನ್ನೋದಾದರೆ, ರಿಷಬ್ ಶೆಟ್ಟಿ ಅವರು ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ಭಾಗಿಯಾಗಿದ್ದರು. ತಮ್ಮ ಪತ್ನಿ ಹಾಗು ಮಕ್ಕಳೂ ಜೊತೆಗಿದ್ದರು. ಉತ್ಸವದ ಕೊನೆಯಲ್ಲಿ ವಾರಾಹಿ ಪಂಜುರ್ಲಿ ಬಳಿಕ ರಿಷಬ್ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಆಗ ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ ಇದ್ದಾರೆ. ನಿನ್ನ ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈ ಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ಈಗ ಹೇಳಲ್ಲ, ನೋಡಿಕೊಳ್ತೇನೆ. ನನಗೆ ಸೇವೆ ನೀಡುವ ಹರಕೆ ಮಾಡಿಕೋ. ಐದು ತಿಂಗಳ ಒಳಗೆ ನಿನಗೆ ಒಳ್ಳೆಯದು ಮಾಡ್ತೀನಿ ಎಂದು ಪಂಜುರ್ಲಿ ದೈವ ಅಭಯ ನೀಡಿದೆ.
ಕಾಂತಾರ ಜಗತ್ತಿನೆಲ್ಲೆಡೆ ದೊಡ್ಡ ಸಕ್ಸಸ್ ಕಂಡಿತ್ತು. ಅಷ್ಟೇ ಅಲ್ಲ, ಆ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಹೀರೋ ಆಗಿಬಿಟ್ಟರು. ನಿರ್ದೇಶಕರಾಗಿಯೂ ಗೆಲುವು ಕಂಡರು. ಆದರೆ ಅದೇಕೋ ಏನೋ ಕಾಂತಾರ 2 ಶುರು ಮಾಡಿದಾಗ ಅವರಿಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಬಂದವು. ಇಷ್ಟಕ್ಕೂ ಕೈ ಮುಗಿದು ಬೇಡಿಕೊಂಡಿರುವ ರಿಷಬ್ ಶೆಟ್ಟಿ ಅವರ ಕಾಂತಾರಾ 2 ಸಿನಿಮಾಗೆ ವಿಘ್ನ ಕಾಡಿದೆಯಾ? ಈ ಪ್ರಶ್ನೆ ಕಾಮನ್ ಆಗಿಯೇ ಎದುರಾಗುತ್ತಿದೆ. ಹಾಗೆ ನೋಡುವುದಾದರೆ, ಕಾಂತಾರಾ 2 ಶೂಟಿಂಗ್ ವೇಳೆ ಒಂದಷ್ಟು ಸಮಸ್ಯೆಗಳು ಎದುರಾಗಿದ್ದುಂಟು.
ಆ ಸಮಸ್ಯೆಗಳೇನು ಅನ್ನುವುದನ್ನು ನೋಡುವುದಾದರೆ, ಕಾಂತಾರಾ 2 ಚಿತ್ರೀಕರಣ ವೇಳೆ ಒಂದಷ್ಟು ಸಮಸ್ಯೆಗಳು ಎದುರಾಗಿದ್ದು ನಿಜ. ಗೊಂದಲಗಳೂ ಎದ್ದಿದ್ದವು. ಆ ಚಿತ್ರ ಸೆಟ್ಟೇರಿದ ಬಳಿಕ ಅನೇಕ ಸಮಸ್ಯೆ ಬಂದಿದ್ದವು. ಹಾಸನದ ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಶೂಟಿಂಗ್ ಮಾಡುವಾಗ, ಸ್ಪೋಟಕ ವಸ್ತು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆಗ ಅರಣ್ಯ ಅಧಿಕಾರಿಗಳು ತನಿಖೆ ಮಾಡಿ ಎಚ್ಚರಿಕೆ ನೀಡಿದ್ದರು. ಶೂಟಿಂಗ್ ನಡೆಯುವ ಸಂದರ್ಭದಲ್ಲಿ ಕಲಾವಿದರು ಇದ್ದಂತಹ ಮಿನಿ ಬಸ್ ಪಲ್ಟಿಯಾಗಿತ್ತು. ಇನ್ನು, ವೇತನ ನೀಡಿಲ್ಲ ಅಂತಾನೂ ಒಂದಷ್ಟು ಮಂದಿ ಪ್ರತಿಭಟನೆ ನಡೆಸಿದ್ದರು. ಈ ಎಲ್ಲಾ ವಿವಾದಗಳು ರಿಷಬ್ ಅವರನ್ನು ಸುತ್ತಿಕೊಂಡಿದ್ದವು.
ರಿಷಬ್ ಶೆಟ್ಟಿ ಆಗಾಗ ದೈವದ ಮೊರೆ ಹೋಗುತ್ತಾರೆ. ಅಂತೆಯೇ ಇದೀಗ 33 ವರ್ಷ ಬಳಿಕ ರಿಷಬ್ ಸೇವೆಗೆ ಮುಂದಾಗಿದ್ದಾರೆ. ಉತ್ಸವ ಕೊನೆಯಲ್ಲಿ ದೈವ ಮುಂದೆ ತಮ್ಮ ಕಷ್ಟ ಹೇಳಿಕೊಂಡಿದ್ದರಿಂದ ದೈವ ಅಭಯ ನೀಡಿದೆ. ದೈವ ಹೇಳಿರುವುದು ಸರಿನೇ. ಯಾಕೆಂದರೆ, ರಿಷಬ್ ಈಗ ಪ್ಯಾನ್ ಇಂಡಿಯಾ ನಿರ್ದೇಶಕ ಕಮ್ ನಟ. ಅವರ ಯಶಸ್ಸನ್ನು ಸಂಭ್ರಮಿಸಿದವರು ಕಡಿಮೆ. ಆದರೆ, ಅವರನ್ನೂ ವಿರೋಧಿಸುವ ಶತ್ರುಗಳೂ ಹೆಚ್ಚಾಗಿದ್ದು ಕೂಡ ಹೌದು. ಸಿನಿಮಾ ರಂಗದಲ್ಲಿ ಬೆಳದವರನ್ನು ಕೆಳಗಿಸಬೇಕೆಂಬ ಸಂಚು ಸದಾ ನಡೆಯುತ್ತಲೇ ಇರುತ್ತೆ. ಈಗ ರಿಷಬ್ ಗೂ ಅಂಥದ್ದೊಂದಷ್ಟು ಮಂದಿ ಇದ್ದಾರೆ ಅಂತ ದೈವ ಹೇಳಿದೆ. ದೈವದ ಮಾತನ್ನು ಕೇಳಿಸಿಕೊಂಡಿರುವ ರಿಷಬ್ ಸೇವೆಗೆ ಮುಂದಾಗಿದ್ದಾರೆ. ದೈವದ ಅಭಯ ಸಿಕ್ಕಿರುವುದರಿಂದ ನಿರಾಳರಾಗಿದ್ದಾರೆ.
ಅದೇನೆ ಇರಲಿ, ಸದ್ಯ ಎಲ್ಲರಿಗೂ ಕಾಂತಾರಾ 2 ಸಿನಿಮಾ ನಿರೀಕ್ಷೆ, ಕುತೂಹಲ ಹುಟ್ಟಿಸಿದೆ. ಈ ಚಿತ್ರ ಈ ವರ್ಷದ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಸಿನಿಮಾದ ಕೆಲಸ ಕೂಡ ಜೋರಾಗಿಯೇ ನಡೆಯುತ್ತಿದೆ. ಅಂತೂ ಪಂಜುರ್ಲಿ ದೈವ ನೀಡಿರುವ ಅಭಯದಿಂದ ರಿಷಬ್ ನಿಟ್ಟುಸಿರು ಬಿಟ್ಟಿದ್ದಾರೆ. ದೈವ ನಂಬಿದವರನ್ನು ಕೈ ಬಿಡಲ್ಲ ಎಂಬ ನಂಬಿಕೆ ಅವರಿಗಿದೆ. ಅದೇ ನಂಬಿಕೆಯಲ್ಲೇ ತಮ್ಮ ಸಿನಿಮಾ ಕೆಲಸದಲ್ಲಿ ತೊಡಗಿದ್ದಾರೆ.