Wednesday, December 4, 2024

Latest Posts

Movie News: ಬರಲಿದೆ ಸಿಲ್ಕ್ ಸ್ಮಿತಾ ಬಯೋಪಿಕ್! ಕ್ವೀನ್‌ ಆಫ್‌ ದಿ ಸೌತ್‌

- Advertisement -

Movie News: ಈ ಸಿನಿಮಾ ನಟಿಯರೇ ಹಾಗೆ. ಕೆಲವು ನಟಿಯರಂತೂ ಮರೆಯಾದರೂ ಮರೆಯದ ಸಿನಿಮಾಗಳ ಮೂಲಕ ಮತ್ತೆ ಮತ್ತೆ ನೆನಪಾಗಿಸುವಂತೆ ಮೋಡಿ ಮಾಡಿದವರಲ್ಲಿ ಸಿಲ್ಕ್ ಸ್ಮಿತಾ ಕೂಡ ಒಬ್ಬರು.

ಯೆಸ್, ಸಿಲ್ಕ್ ಸ್ಮಿತಾ ಸೌತ್ ಇಂಡಿಯನ್ ಫಿಲ್ಮ್ ಇಂಡಸ್ಟ್ರಿಯಲ್ಲಿ ದೊಡ್ಡ ಹೆಸರು. ಅದಷ್ಟೇ ಅಲ್ಲ, ಆಗಿನ ಕಾಲದಲ್ಲಿ ಯಾವ ಹೀರೋಯಿನ್ ಗೂ ಕಮ್ಮಿ ಇರದ ಸೌಂದರ್ಯವಂತೆ. ಸ್ಟಾರ್ ಹೀರೋಗಳನ್ನೇ ಮೀರಿ ಬೆಳೆದ ಸಿಲ್ಕ್ ಸ್ಮಿತಾ ಅವರ ಬದುಕು ನಿಜಕ್ಕೂ ಒಂದು ದುರಂತ ಕಥೆ. ಕನ್ನಡ ತೆಲುಗು ಸೇರಿದಂತೆ ಬಹುತೇಕ ಸೌತ್ ಇಂಡಿಯನ್ ಸಿನಿಮಾಗಳಲ್ಲಿ ಸ್ಮಿತಾ ನಟಿಸಿದ್ದಾರೆ. ಸಿಲ್ಕ್ ಸ್ಮಿತಾ ಅವರ ಖ್ಯಾತಿ ಎಷ್ಟಿತ್ತೆಂದರೆ, ಅದು ಬಾಲಿವುಡ್ ಅಂಗಳಕ್ಕೂ ಹಬ್ಬಿತ್ತು ಅಂದರೆ ನಂಬಲೇಬೇಕು.

ಬಹುತೇಕ ಎಲ್ಲಾ ಸ್ಟಾರ್ ಹೀರೋಗಳ ಜೊತೆ ಸ್ಟೆಪ್ ಹಾಕಿರುವ ಹೆಮ್ಮೆ ಈ ನಟಿಯದ್ದು. ಹೆಚ್ಚು ಕಮ್ಮಿ 18 ವರ್ಷಗಳ ವೃತ್ ತಿಜೀವನದಲ್ಲಿ ಸಿಲ್ಕ್ 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಿನ ಕಾಲಕ್ಕೆ ಅವರ ಸಂಭಾವನೆ 50 ಸಾವಿರ.ತೆರೆಯ ಮೇಲೆ ಕುಣಿದು ಕುಪ್ಪಳಿಸಿ, ಅದೆಷ್ಟೋ ಕಣ್ಮನಗಳನ್ನು ತಣಿಸಿದ ಸಿಲ್ಕ್ ಸ್ಮಿತಾ, ಕೊನೆಗಾಲದಲ್ಲಿ ಕೈಯಲ್ಲಿ ಕಾಸಿಲ್ಲದೆ, ಅವಕಾಶಗಳೂ ಇಲ್ಲದೆ, ಸಮಸ್ಯೆ ಎದುರಿಸಿದರು. ಅಷ್ಟೇ ಅಲ್ಲ, ಸಾಲದ ಸುಳಿಯಲ್ಲೂ ಸಿಲುಕಿ ತಮ್ಮ 36ನೇ ವಯಸ್ಸಲ್ಲಿ ಸಾವನ್ನಪ್ಪಿದರು.

ಸಿಲ್ಕ್ ಸ್ಮಿತಾ ಅವರು ಬದುಕಿದ್ದಾಗ, ಸಿನಿ ಜಗತ್ತಲ್ಲಿ ದೊಡ್ಡ ಹೆಸರನ್ನೇ ಮಾಡಿದ್ರು. ಅವರ ಮಹತ್ವ ದೊಡ್ಡದಿತ್ತಾದರೂ, ಅದನ್ನು ಸಿಲ್ಕ್ ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೆ, ಅವರು ನಿಧನರಾದ ಬಳಿಕ ಅವರ ಕುರಿತು ಮೆಚ್ಚುಗೆಯ ಮಾತುಗಳು ಹರಿದುಬಂದವು. ಸಿಲ್ಕ್ ಸ್ಮಿತಾ ತಮ್ಮದೇ ಛಾಪು ಮೂಡಿಸಿದ್ದರು. ಅವರ ಸ್ಥಾನವನ್ನು ಇಂದಿಗೂ ಯಾರೊಬ್ಬರೂ ತುಂಬಿಲ್ಲ ಬಿಡಿ. ಅಂದಹಾಗೆ, ಸಿಲ್ಕ್ ಸ್ಮಿತಾ ಕಣ್ಮರೆಯಾಗಿ 28 ವರ್ಷಗಳು ಗತಿಸಿವೆ. ಇಷ್ಟು ವರ್ಷಗಳ ಬಳಿಕವೂ ಸಿಲ್ಕ್ ಸ್ಮಿತಾ ಹೆಸರು ಜನಜನಿತ. ಅವರ ಹಾಡು, ಕುಣಿತ ಎಲ್ಲವೂ ದಾಖಲೆ ಬರೆದಿವೆ. ಹಾಗಾಗಿ ಸಿಲ್ಕ್ ಸ್ಮಿತಾ ಕುರಿತಾದ ಸಿನಿಮಾವೊಂದು ಇದೀಗ ಶುರುವಾಗುತ್ತಿದೆ ಅನ್ನೋದೇ ಈ ಹೊತ್ತಿನ ಸುದ್ದಿ.

ಹೌದು,ಸಿಲ್ಕ್‌ ಸ್ಮಿತಾ ಬಯೋಪಿಕ್‌ ಮಾಡುವುದಾಗಿ ಸ್ತ್ರೀ ಸಿನಿಮಾಸ್ ಘೋಷಿಸಿದೆ. ಈ ಸಿನಿಮಾವನ್ನು ಜಯರಾಮ್‌ ಸಂಕರನ್‌ ನಿರ್ದೇಶಿಸಿದರೆ, ವಿಜಯ್ ಅಮೃತ್‌ರಾಜ್‌ ನಿರ್ಮಾಣ ಮಾಡುತ್ತಿದ್ದಾರೆ. ಸಿಲ್ಕ್‌ ಸ್ಮಿತಾ ಅವರ ಬರ್ತ್‌ಡೇ ಹಿನ್ನೆಲೆಯಲ್ಲಿ ಸ್ತ್ರೀ ಸಿನಿಮಾಸ್ ಸಂಸ್ಥೆ “ಸಿಲ್ಕ್‌ ಸ್ಮಿತಾ- ಕ್ವೀನ್‌ ಆಫ್‌ ದಿ ಸೌತ್‌” ಎಂಬ ಟೈಟಲ್ ಅನೌನ್ಸ್ ಮಾಡಿ ಸಿನಿಮಾ ಮಾಡುವುದನ್ನು ಹೇಳಿಕೊಂಡಿದೆ. ಅಂದಹಾಗೆ, ಈ ಬಯೋಪಿಕ್ ಗೆ ನಾಯಕಿ ಯಾರಿರಬಹುದು ಎಂಬ ಕುತೂಹಲ ಸಹಜ. ಯಾಕಂದ್ರೆ, ಸಿಲ್ಕ್ ಮೋಹಕ ಮತ್ತು ಮೋದಕ ತಾರೆ. ಅವರ ಪಾತ್ರಕ್ಕೆ ಸರಿಹೊಂದುವ ನಟಿಯನ್ನೇ ತರಬೇಕು. ಹಾಗಾಗಿ ಚಿತ್ರತಂಡ, ಸಿಲ್ಕ್ ಪಾತ್ರಕ್ಕೆ ಚಂದ್ರಿಕಾ ರವಿ ಅವರನ್ನು ಆಯ್ಕೆ ಮಾಡಿ ಸಿನಿಮಾ ಮಾಡಲು ಮುಂದಾಗಿದೆ. ಸಿಲ್ಕ್‌ ಸ್ಮಿತಾ ಅವರ ಬರ್ತ್ ಡೇಗೆ ಟೈಟಲ್ ಅನೌನ್​ಸ್ ಜೊತೆ ವಿಡಿಯೋವೊಂದನ್ನು ಹಂಚಿಕೊಂಡಿದೆ ಚಿತ್ರತಂಡ.

ಇನ್ನು, ಸಿಲ್ಕ್ ಸ್ಮಿತಾ ಸಾವಿನ ಹಿಂದೆ ಒಂದಷ್ಟು ಪ್ರಶ್ನೆಗಳಿದ್ದವು. ಸತ್ತಿದ್ದು ಯಾಕೆ? ಎಂಬುದೇ ನಿಗೂಢವಾಗಿತ್ತು. ಆ ಬಗ್ಗೆ ಹಲವು ಊಹಾಪೋಹಗಳಿದ್ದವು. ಆ ಕುರಿತು ಇಂದಿಗೂ ಪ್ರಶ್ನೆಗಳಿವೆ. ಆದರೆ, ಸಿಲ್ಕ್ ಸ್ಮಿತಾ ಸಾಯುವ ದಿನದ ರಾತ್ರಿ ಅವರ ಗೆಳತಿ ನಟಿ ಅನುರಾಧ ಅವರಿಗೆ ಫೋನ್ ಮಾಡಿದ್ದರು. ಆ ವೇಳೆ ಮನೆಗೆ ಬರಲು ಸಾಧ್ಯವೇ ಎಂದು ಸಿಲ್ಕ್ ಸ್ಮಿತಾ ಅವರು ಅನುರಾಧಗೆ ಹೇಳಿದ್ದರು. ಆದರೆ, ಅವರು ಹೋಗಲು ಸಾಧ್ಯವಾಗಿರಲಿಲ್ಲ. ಒಂದು ವೇಳೆ ಹೋಗಿದ್ದರೆ, ಸಿಲ್ಕ್ ಬದುಕುತ್ತಿದ್ದರೇನೋ? ಈ ಬಗ್ಗೆ ಅನುರಾಧ ಅವರು, ತಮಿಳು ಯೂಟ್ಯೂಬ್ ಚಾನೆಲ್ ​ಗಲಾಟಾ ಮೀಡಿಯಾ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಅನುರಾಧ ಹೇಳಿದ್ದಿಷ್ಟು. “ಸಿಲ್ಕ್ ಸ್ಮಿತಾ ಜೋರು ಅಂತ ಎಲ್ಲರೂ ಅಂದುಕೊಂಡಿದ್ರು. ಆದ್ರೆ ಅದು ನಿಜವಲ್ಲ. ಚಿಕ್ಕ ಮಕ್ಕಳಂತೆ ಇದ್ರು. ಸಿಲ್ಕ್ ಸ್ಮಿತಾ ತೀರಿಕೊಳ್ಳೋ ಮೊದಲು ಕೆಲವು ವಿಷಯಗಳನ್ನ ನನಗೆ ಹೇಳಿದ್ರು. ಆ ವಿಷಯಗಳನ್ನ ನಾನು ಯಾರಿಗೂ ಹೇಳಿಲ್ಲ, ನನ್ನ ಮಗಳಿಗೂ ಹೇಳಿಲ್ಲ. ನನ್ನ ಗೆಳತಿ ನನ್ನ ಮೇಲೆ ನಂಬಿಕೆ ಇಟ್ಟು ಹೇಳಿದ್ದನ್ನ ನಾನು ಬಹಿರಂಗವಾಗಿ ಹೇಳೋಕೆ ಇಷ್ಟ ಪಡೋದಿಲ್ಲ. ಅದರಲ್ಲೂ ಅವರಿಲ್ಲದ ಸಮಯದಲ್ಲಿ. ಅದೆಲ್ಲ ನನಗೂ ಸಿಲ್ಕ್‌ಗೂ ಮಾತ್ರ ಗೊತ್ತಿರೋ ವಿಷಯಗಳು. ಅವರ ಕೊನೆಯ ದಿನಗಳಲ್ಲಿ ನಡೆದ ಮುಖ್ಯವಾದ ವಿಷಯಗಳೆಲ್ಲ ನನಗೆ ಗೊತ್ತು”, ಅಂತ ಅನುರಾಧಾ ಹೇಳಿದ್ದಾರೆ.

“ಅವರು ತೀರಿಕೊಂಡ ದಿನ ಅನುರಾಧಗೆ ಫೋನ್ ಮಾಡಿದ್ದರಂತೆ. ರಾತ್ರಿ ಒಂಬತ್ತು-ಒಂಬತ್ತು ಮುಕ್ಕಾಲು ಸಮಯವದು. ಮನೆಗೆ ಬರಬಹುದಾ ಅಂತ ಸಿಲ್ಕ್ ಕೇಳಿದ್ದರಂತೆ. ಆಗ, ಅನುರಾಧ ಅವರ ಗಂಡ ಬೆಂಗಳೂರಿನಿಂದ ಬರ್ತಾ ಇದ್ದರಂತೆ. ಮಕ್ಕಳೆಲ್ಲಾ ನಿದ್ರೆಗೆ ಜಾರಿದ್ದರಂತೆ. ಹಾಗಾಗಿ ಅನುರಅಧ ನಾಳೆ ಬೆಳಿಗ್ಗೆ ಬರ್ತೀನಿ ಅಂತ ಹೇಳಿದ್ದರಂತೆ. ಆದರೂ, ಇಷ್ಟು ಹೊತ್ತಲ್ಲೆ ಕರೀತಾ ಇದ್ದಾರೆ ಅಂದಮೇಲೆ ಏನೋ ಸಮಸ್ಯೆ ಇರಬೇಕು ಅಂದುಕೊಂಡು ಅನುರಾಧ ಬರ್ತೀನಿ ಅಂದಿದ್ದಾರೆ.

ಆದರೆ, ಅಷ್ಟೊತ್ತಿಗಾಗಲೇ ಸಿಲ್ಕ್ ಬೇಡ ಅಂದಿದ್ದರಂತೆ. ಇನ್ನು, ಅನುರಾಧ ಬೆಳಿಗ್ಗೆ ಮಕ್ಕಳನ್ನ ಶಾಲೆಗೆ ಕಳಿಸೋ ತಯಾರಿ ಯಲ್ಲಿದ್ದಾಗ, ಟಿವಿಯಲ್ಲಿ ಫ್ಲ್ಯಾಶ್ ನ್ಯೂಸ್ ನೋಡಿದ್ದಾರೆ. ಸಿಲ್ಕ್ ಸ್ಮಿತಾ ನಿಧನದ ಸುದ್ದಿ ಗೊತ್ತಾಗಿದೆ. ಆಗ ಅನುರಾಧಗೂ ಅದು ಶಾಕ್. ಒಂದು ವೇಳೆ ಅಂದು ರಾತ್ರಿ ಅನುರಾಧ ಹೋಗಿದ್ದರೆ, ಬಹುಶಃ ಸಿಲ್ಕ್ ಇವತ್ತು ಬದುಕಿರುತ್ತಿದ್ದರೇನೋ? ಆದರೆ, ಟೈಂ ಅನ್ನೋದು ಸಿಲ್ಕ್ ಪ್ರಾಣವನ್ನು ಬಿಡಲಿಲ್ಲ. ಸದಾ ನೆನಪಿಸಿಕೊಳ್ಳುವ ಡ್ಯಾನ್ಸರ್ ಪೈಕಿ ಸಿಲ್ಕ್ ಕೂಡ ಒಬ್ಬರು.

ಅದೇನೆ ಇರಲಿ, ಇದೀಗ ಸಿಲ್ಕ್ ಸ್ಮಿತಾ ಅವರ ಬಯೋಪಿಕ್ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಹಾಗಂತ ಸಿಲ್ಕ್ ಕುರಿತ ಸಿನಿಮಾ ಬಂದಿಲ್ಲವೆಂದಲ್ಲ, ಕನ್ನಡದಲ್ಲಿ ಡರ್ಟಿ ಪಿಕ್ಚರ್ -ಸಿಲ್ಕ್ ಸಖತ್ ಹಾಟ್ ಎಂಬ ಸಿನಿಮಾ ಬಂದಿತ್ತು. ಪಾಕ್ ನಟಿ ವೀಣಾ ಮಲ್ಲಿಕ್ ಸಿಲ್ಕ್ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ದಿ ಡರ್ಟಿ ಪಿಕ್ಚರ್ ಸಿನಿಮಾ ಬಂದಿತ್ತು. ವಿದ್ಯಾ ಬಾಲನ್ ಸಿಲ್ಕ್ ಪಾತ್ರ ಮಾಡಿದ್ದರು. ಮಲಯಾಳಂ ನಲ್ಲೂ ಕ್ಲೈಮ್ಯಾಕ್ಸ್ ಸಿನಿಮಾ ಬಂದಿತ್ತು. ಸಾನ ಖಾನ್ ಸಿಲ್ಕ್ ಪಾತ್ರ ಮಾಡಿದ್ದರು. ಈ ಸಿನಿಮಾಗಳೆಲ್ಲ ಸಿಲ್ಕ್ ಕುರಿತ ಪಾತ್ರ ಇದ್ದವು ಆದರೆ, ಸಿಲ್ಕ್ ಬಯೋಪಿಕ್ ಆಗಿರಲಿಲ್ಲ. ಎಂಬತ್ತು ತೊಂಬತ್ತರ ದಶಕದಲ್ಲಿ ಸಿಲ್ಕ್ ಸ್ಮಿತಾ ಮಾಡಿದ ಮೋಡಿಗೆ ಅದೆಷ್ಟೋ ಸಿನಿಪ್ರಿಯರು ಫಿದಾ ಆಗಿದ್ದು ಸುಳ್ಳಲ್ಲ. ಉತ್ತುಂಗಕ್ಕೆ ಏರಿದ್ದ ಅನೇಕ ನಟಿಮಣಿಗಳ ಬದುಕಲ್ಲೂ ದುರಂತ ಸಾವುಗಳಾಗಿರೋದು ನಿಜ. ಸಿಲ್ಕ್ ಸ್ಮಿತಾ ಸಾವು ಕೂಡ ಇಡೀ ಸೌತ್ ಫಿಲ್ಮ್ ಇಂಡಸ್ಟ್ರಿಯನ್ನು ಕಾಡಿದ್ದಂತೂ ಸುಳ್ಳಲ್ಲ.

ವಿಜಯ್‌ ಭರಮಸಾಗರ್, ಫಿಲ್ಮಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss