Sandalwood News: ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನಲ್ಲಿದ್ದ ನಟ ದರ್ಶನ್ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್ ನೀಡಿದ ಜಾಮೀನನ್ನು ಬೆಂಗಳೂರು ಪೊಲೀಸರು ಪ್ರಶ್ನಿಸಿದ್ದರಿಂದ ಈ ನೋಟಿಸ್ ಜಾರಿಯಾಗಿದೆ. ಸರ್ಕಾರಿ ವಕೀಲರು ಆರೋಪಿಗಳ ಅಮಾನವೀಯ ನಡವಳಿಕೆಯನ್ನು ಪ್ರಸ್ತಾಪಿಸಿದ್ದಾರೆ. ಸುಪ್ರೀಂ ಕೋರ್ಟ್ ಸದ್ಯ ಈ ವಿಚಾರಣೆಯನ್ನು ಮುಂದೂಡಿದೆ.
ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಹಲವು ತಿಂಗಳು ಜೈಲಿನಲ್ಲಿದ್ದು ಬಂದರು. ಈಗ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಪ್ರಮುಖ ಆರೋಪಿಗಳಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ನೀಡಿದೆ. ಆರೋಪಿಗಳ ಜಾಮೀನು ಪ್ರಶ್ನಿಸಿ ಬೆಂಗಳೂರು ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ಇಂದು (ಜನವರಿ 24) ನಡೆದಿದೆ. ಈ ವೇಳೆ ಸುಪ್ರೀಂಕೋರ್ಟ್ ಏಳು ಆರೋಪಿಗಳಿಗೂ ನೋಟಿಸ್ ಜಾರಿ ಮಾಡಿದೆ.
ಕಳೆದ ವರ್ಷ ಕರ್ನಾಟಕ ಹೈಕೋರ್ಟ್ ರೇಣುಕಾ ಸ್ವಾಮಿ ಕೊಲೆ ಕೇಸ್ ನ ಏಳು ಆರೋಪಿಗಳಿಗೆ ಜಾಮೀನು ನೀಡಿತ್ತು. ಇದನ್ನು ಬೆಂಗಳೂರು ಪೊಲೀಸರು ಸರ್ಕಾರದ ಒಪ್ಪಿಗೆ ಪಡೆದು ಸುಪ್ರೀಂಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಇದರ ವಿಚಾರಣೆ ವೇಳೆ ಸರ್ಕಾರಿ ಪರ ವಕೀಲರು ತಮ್ಮ ವಾದ ಮಂಡಿಸಿದ್ದಾರೆ. ‘ಆರೋಪಿಗಳು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಹೀಗಾಗಿ, ಹೈಕೋರ್ಟ್ ನೀಡಿರುವ ಜಾಮೀನು ರದ್ದುಗೊಳಿಸಿ’ ಎಂದು ಮನವಿ ಮಾಡಿದ್ದಾರೆ.
7 ಆರೋಪಿಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿದೆ. ‘ಉಳಿದ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೆ ಇದು ಅನ್ವಯಿಸುವುದಿಲ್ಲ. ಹೈಕೋರ್ಟ್ ಫೈಂಡಿಂಗ್ಸ್ ಅನ್ವಯ ಆಗುವುದಿಲ್ಲ’ ಎಂದು ಸುಪ್ರೀಕೋರ್ಟ್ ಅಭಿಪ್ರಾಯಪಟ್ಟಿದೆ. ಸದ್ಯ ವಿಚಾರಣೆಯನ್ನು ಕೋರ್ಟ್ ಮುಂದಕ್ಕೆ ಹಾಕಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ, ದರ್ಶನ್ , ಪವಿತ್ರಾ ಗೌಡ ಸೇರಿದಂತೆ ಇನ್ನೂ ಕೆಲವು ಆರೋಪಿಗಳ ಜಾಮೀನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಜಾಮೀನು ರದ್ದು ಮಾಡಲು ಏಳು ಕಾರಣಗಳನ್ನು ನೀಡಿದೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಹೈಕೋರ್ಟ್ ನಲ್ಲಿ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿಯ ಎಲ್ಲ ಆರೋಪಿಗಳಿಗೆ ಜಾಮೀನು ದೊರೆತಿದೆ. ಇದೀಗ ಪೊಲೀಸರು, ದರ್ಶನ್ ಜಾಮೀನು ರದ್ದು ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ದರ್ಶನ್ ಹಾಗೂ ಪ್ರಕರಣದ ಇತರೆ ಆರೋಪಿಗಳಾದ ಪವಿತ್ರಾ ಗೌಡ, ಜಗದೀಶ್, ಅನುಕುಮಾರ್, ನಾಗರಾಜ, ಎಂ ಲಕ್ಷ್ಮಣ್, ಪ್ರದೋಶ್ ನೀಡಲಾಗಿರುವ ಜಾಮೀನುನನ್ನು ಏಕೆ ರದ್ದು ಮಾಡಬೇಕು ಎಂದು ಏಳು ಕಾರಣಗಳನ್ನು ನೀಡಿದೆ.
ಕಾರಣ 1
ದರ್ಶನ್ ಅವರು ಸಿನಿಮಾ ನಟ. ಸೆಲಿಬ್ರೆಟಿಯಾಗಿದ್ದು, ರಾಜ್ಯದ ಒಳಗೆ ಮತ್ತು ಹೊರಗೆ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಅವರು ಸಾಕ್ಷಿ ತಿರುಚುವ ಸಾಧ್ಯತೆ ಇದೆ ಎಂಬುದನ್ನು ಹೈಕೋರ್ಟ್ ಪರಿಗಣಿಸಿಲ್ಲ.
ಕಾರಣ 2
ಸತ್ರ ನ್ಯಾಯಾಲಯದಲ್ಲಿ ಪ್ರಕರಣವು ಇನ್ನೂ ಆರೋಪ ನಿಗದಿ ಹಂತಕ್ಕೆ ಬಂದಿಲ್ಲ. ಅದಾಗ್ಯೂ, ಆರೋಪ ಪಟ್ಟಿಯಲ್ಲಿ 262 ಸಾಕ್ಷಿಗಳನ್ನು ಉಲ್ಲೇಖಿಸಿದ್ದು, ವಿಚಾರಣೆಯು ವಿಳಂಬವಾಗುವುದರಿಂದ ಜಾಮೀನು ಮಂಜೂರು ಮಾಡಲಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹೈಕೋರ್ಟ್‌ನ ಈ ಅಭಿಪ್ರಾಯ ಅವಸರದಿಂದ ಕೂಡಿರುವುದರಿಂದ ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿದೆ.
ಕಾರಣ 3
ಆರೋಪಿಗಳು ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬಲವಂತವಾಗಿ ಕಾರಿನಲ್ಲಿ ಬೆಂಗಳೂರಿಗೆ ಕರೆತಂದಿದ್ದಾರೆ. ಇದು ಐಪಿಸಿ ಸೆಕ್ಷನ್ 364ರ ಅಡಿ ಅಪರಾಧವಾಗಿದ್ದು, ಇದನ್ನು ಪರಿಗಣಿಸಲು ಹೈಕೋರ್ಟ್ ವಿಫಲವಾಗಿದೆ.
ಕಾರಣ 4
ಲಭ್ಯ ಸಾಕ್ಷಿಯ ದಾಖಲೆಗಳನ್ನು ಪರಿಗಣಿಸದೇ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಹೈಕೋರ್ಟ್ ಸಮರ್ಥಿಸಿಲ್ಲ. 76 ಮತ್ತು 91ನೇ ಪ್ರತ್ಯಕ್ಷ ಸಾಕ್ಷಿಗಳು ಸಿಆರ್‌ಪಿಸಿ ಸೆಕ್ಷನ್ 164ರ ಅಡಿ ಆರೋಪಿಗಳು ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿರುವುದರ ಸಂಬಂಧ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿರುವುದನ್ನು ಹೈಕೋರ್ಟ್ ಪರಿಗಣಿಸಲು ವಿಫಲವಾಗಿದೆ.
ಕಾರಣ 5
ಸಾಂದರ್ಭಿಕ ಸಾಕ್ಷಿಗಳು, ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಗಳು, ಆರೋಪಿಗಳ ಬಟ್ಟೆ/ ಶೂ/ಚಪ್ಪಲಿಗಳಲ್ಲಿ ಸಂತ್ರಸ್ತನ ವಂಶವಾಹಿ ಗುರುತು, ಕರೆ ದಾಖಲೆ ವಿಶ್ಲೇಷಣೆ, ಸೆಲ್ ಟವರ್ ಸ್ಥಳ, ಸಿಸಿಟಿವಿ ತುಣುಕುಗಳು, ಅಪರಾಧದ ಸ್ಥಳದಲ್ಲಿ ಆರೋಪಿಗಳ ಓಡಾಟ, ಆರೋಪಿಗಳ ಮೊಬೈಲ್‌ನಲ್ಲಿ ಸಂತ್ರಸ್ತನ ಫೋಟೊಗಳು ಪತ್ತೆಯಾಗಿರುವುದನ್ನು ಹೈಕೋರ್ಟ್ ಪರಿಗಣಿಸಲು ವಿಫಲವಾಗಿದೆ.
ಕಾರಣ 6
ಎಲ್ಲಾ ಆರೋಪಿಗಳಿಗೆ ಒಂದೇ ತೆರನಾದ ಬಂಧನದ ಆಧಾರ ನೀಡಲಾಗಿದೆ. ಇದು ಹೈಕೋರ್ಟ್‌ನ ತೀರ್ಪಿಗೆ ಅನುಗುಣವಾಗಿಲ್ಲ ಎಂದು ಹೇಳಿದೆ . ಕಾನೂನಿನ ಪ್ರಕಾರ ತನಿಖಾಧಿಕಾರಿಯು ಆರೋಪಿಗಳಿಗೆ ಏಕೆ ಬಂಧಿಸಲಾಗುತ್ತಿದೆ ಎಂಬುದರ ಸಾಮಾನ್ಯ ವಿಚಾರಗಳನ್ನು ತಿಳಿಸಿದರೆ ಸಾಕಾಗಿದೆ.
ಕಾರಣ 7
ಮಧ್ಯಂತರ ಪರಿಹಾರದ ಭಾಗವಾಗಿ ಮಧ್ಯಂತರ ಏಕಪಕ್ಷೀಯ ಆದೇಶದ ಮೂಲಕ ಜಾಮೀನು ಆದೇಶವನ್ನು ತಡೆ ಹಿಡಿಯಬೇಕು ಎಂದು ರಾಜ್ಯ ಸರ್ಕಾರ ಮನವಿ. ಇದಿಷ್ಟು ಕಾರಣಗಳನ್ನ ನೀಡಿ ಆರೋಪಿಗಳ ಜಾಮೀನು ರದ್ದಿಗೆ ಮನವಿ ಮಾಡಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಇನ್ನಷ್ಟೆ ಪ್ರಕರಣದ ವಿಚಾರಣೆ ನಡೆಯಬೇಕಿದೆ.