Sandalwood News: ಅಂತೂ ಇಂತೂ ದರ್ಶನ್ ಇದೀಗ ಫುಲ್ ಆ್ಯಕ್ಟೀವ್ ಆಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಪರಪ್ಪನ ಅಗ್ರಹಾರ ಜೈಲು ಸೇರಿದ್ದರು. ಆ ಬಳಿಕ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರು. ಅಲ್ಲಿದ್ದಾಗಲೇ ಜಾಮೀನು ಪಡೆದು ಹೊರಬಂದಿದ್ದ ದರ್ಶನ್, ಎಲ್ಲೂ ಕೂಡ ರಿಯಾಕ್ಟ್ ಮಾಡಿರಲಿಲ್ಲ. ತಮ್ಮ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗಾಗಿ ಒಂದು ವಿಡಿಯೋ ಮೆಸೇಜ್ ಹಾಕಿದ್ದರು. ಅದನ್ನು ಹೊರತುಪಡಿಸಿದರೆ, ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಮದ್ವೆಗೆ ಹೋಗಿ ಬಂದಿದ್ದರು. ಸಾರ್ವಜನಿಕವಾಗಿ ಅದೇ ಮೊದಲ ಸಲ ಕಾಣಿಸಿಕೊಂಡಿದ್ದರು. ಇದೀಗ ಪುನಃ ಅವರು, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರಹವೊಂದನ್ನು ಪೋಸ್ಟ್ ಮಾಡಿದ್ದಾರೆ.
ಖುದ್ದಾಗಿ ಅವರು ತಮ್ಮ ಫ್ಯಾನ್ಸ್ ಗಳಿಗಾಗಿಯೇ ಉದ್ದನೆಯ ಬರಹವುಳ್ಳ ಪೋಸ್ಟ್ ಮಾಡಿ ಧನ್ಯವಾದ ಹೇಳಿದ್ದಾರೆ. ಹಾಗಾದರೆ ದರ್ಶನ್ ಹಾಕಿರುವ ಪೋಸ್ಟ್ ನಲ್ಲಿ ಏನಿದೆ ಅನ್ನೋದಾದರೆ…
ಈ ಸಲ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ. ಆ ಕುರಿತು ವಿಡಿಯೋ ಮಾಡಿ ತಮ್ಮ ಫ್ಯಾನ್ಸ್ ಗೆ ಮೊದಲೇ ಹೇಳಿದ್ದರು. ಆದರೂ, ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಜಾತ್ರೆ ರೀತಿ ಆಚರಿಸಿದ್ದರು. ಎಲ್ಲೆಡೆ ಸಂಭ್ರಮಿಸಿದ್ದರು. ಬರ್ತ್ ಡೇ ಅಂಗವಾಗಿ ಒಂದಷ್ಟು ಒಳ್ಳೆಯ ಕೆಲಸ ಮಾಡಿದ್ದರು. ಆ ಕಾರಣಕ್ಕಾಗಿಯೇ ದರ್ಶನ್ ಅವರು ತಮ್ಮ ಪ್ರೀತಿಯ ಅಭಿಮಾನಿಗಳನ್ನು ಸೆಲೆಬ್ರಿಟಿಸ್ ಎಂದು ಕರೆದು ಪತ್ರವೊಂದನ್ನು ಬರೆದಿದ್ದಾರೆ.
ಇಷ್ಟಕ್ಕೂ ದರ್ಶನ್ ತಮ್ಮ ಸೆಲಿಬ್ರಿಟೀಸ್ ಗಳಿಗೆ ಬರೆದಿರುವ ಆ ಪತ್ರದಲ್ಲಿ ಏನಿದೆ ಗೊತ್ತಾ?
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ.
ಹೀಗೆ ಪ್ರೀತಿಯಿಂದಲೇ ಸೆಲಿಬ್ರಿಟೀಸ್ ಕುರಿತು ಪೋಸ್ಟ್ ಮಾಡಿರುವ ದರ್ಶನ್, ಸದ್ಯ ಡೆವಿಲ್ ಜಪದಲ್ಲಿದ್ದಾರೆ. ಆ ಸಿನಿಮಾದ ಟೀಸರ್ ಅವರ ಹುಟ್ಟುಹಬ್ಬದಂದು ರಿಲೀಸ್ ಆಗಿತ್ತು. ರಿಲೀಸ್ ಆದ ಗಂಟೆಗಳಲ್ಲೇ ಲಕ್ಷ ಲಕ್ಷ ವೀವ್ಸ್ ಕಂಡಿತ್ತು. ಅದೇನೆ ಇರಲಿ, ದರ್ಶನ್ ಈಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇಷ್ಟರಲ್ಲೇ ಅವರು ಚಿತ್ರೀಕರಣದಲ್ಲೂ ಪಾಲ್ಗೊಳ್ಳುವ ಸಾಧ್ಯತೆಯೂ ಇದೆ. ಒಂದಷ್ಟು ಸಿನಿಮಾಗಳು ಅವರ ಬಳಿ ಇದ್ದರೂ, ಒಂದೊಂದೇ ಸಿನಿಮಾ ಮಾಡುವ ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಅವರ ಜಾಮೀನು ಪ್ರಶ್ನಿಸಿರುವ ಪೊಲೀಸರು ಸುಪ್ರೀಂ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ದರ್ಶನ್ ಪರ ವಾದ ಮಾಡಲು ಹಿರಿಯ ವಕೀಲರು ಹಾಗು ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್ ಅವರು ಸಜ್ಜಾಗಲಿದ್ದಾರೆ ಎಂಬ ಸುದ್ದಿಯೂ ಇದೆ. ಅದೇನೆ ಇರಲಿ, ದರ್ಶನ್ ಮತ್ತದೇ ಟ್ರ್ಯಾಕ್ ಗೆ ಬರಲು ತಯಾರಿ ಮಾಡಿಕೊಂಡಿದ್ದಾರೆ. ಅವರ ಅಭಿಮಾನಿಗಳಿಗೂ ದರ್ಶನ್ ಮೊದಲಿನಂತೆ ಆಗಬೇಕೆಂಬ ಹಂಬಲ ಮತ್ತು ಪ್ರೀತಿ. ದರ್ಶನ್ ಗೂ ತಮ್ಮ ಫ್ಯಾನ್ಸ್ ಗೆ ಅಪಾರ ಗೌರವ ಇದೆ. ಆ ಕಾರಣಕ್ಕೆ ಅವರು ಪ್ರೀತಿಯಿಂದಲೇ ಫ್ಯಾನ್ಸ್ ಉದ್ದೇಶಿಸಿ ವಿಡಿಯೋ ಮಾಡಿದ್ದರು. ಈಗ ಪತ್ರವನ್ನೂ ಬರೆದು ಥ್ಯಾಂಕ್ಸ್ ಹೇಳಿದ್ದಾರೆ.
ವಿಜಯ್ ಭರಮಸಾಗರ್, ಫಿಲ್ಮ್‌ಬ್ಯೂರೋ, ಕರ್ನಾಟಕ ಟಿವಿ